ಅಪರಿಚಿತ ವಾಹನ ಡಿಕ್ಕಿ -ಬೈಕ್ ಸವಾರ ಸಾವು.

ಕೂಡ್ಲಿಗಿ.ನ.10:- ಮಂಗಾಪುರದ ವ್ಯಕ್ತಿಯೋರ್ವ ಉಜ್ಜಿನಿಯಿಂದ ಕೂಡ್ಲಿಗಿ ಕಡೆ ಬರುತ್ತಿರುವಾಗ್ಗೆ ಎದುರಿಗೆ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ರಾತ್ರಿ 11-45ಗಂಟೆ ಸುಮಾರಿಗೆ ಕೂಡ್ಲಿಗಿ ಹೊರವಲಯದ ಉಜ್ಜಿನಿ ರಸ್ತೆಯ ಸಿದ್ಧಯ್ಯನಗುಡ್ಡದ ಬಳಿ ಜರುಗಿದೆ.
ಮಂಗಾಪುರದ ಕಪ್ಲಿ ನಾಗರಾಜ (37) ಮೃತ ಬೈಕ್ ಸವಾರನಾಗಿದ್ದಾನೆ. ಈತನು ಸೋಮವಾರ ರಾತ್ರಿ ಉಜ್ಜಿನಿಯಿಂದ ಕೂಡ್ಲಿಗಿ ಮಾರ್ಗವಾಗಿ ಜಿಂದಾಲ್ ಕಂಪನಿಗೆ ಕರ್ತವ್ಯಕ್ಕೆ ಹಾಜರಾಗಲು ಹೋಗಬೇಕಿತ್ತು ಆದರೆ ವಿಧಿಯಾಟ ಕಳೆದ ರಾತ್ರಿ ಕೂಡ್ಲಿಗಿ ಹೊರವಲಯದಲ್ಲಿ ಬರುತ್ತಿರುವಾಗ್ಗೆ ಎದುರಿಗೆ ಬಂದ ಯಾವುದೋ ಅಪರಿಚಿತ ವಾಹನ ಡಿಕ್ಕಿ ಪಡಿಸಿ ನಿಲ್ಲಿಸದೆ ಹಾಗೆ ಹೋಗಿದ್ದು ಬೈಕ್ ನಿಂದ ರಸ್ತೆಗೆ ಬಿದ್ದ ನಾಗರಾಜನಿಗೆ ತಲೆ ಹಾಗೂ ಇತರೆಡೆ ತೀವ್ರ ಸ್ವರೂಪದ ಗಾಯವಾಗಿದ್ದು ಅದೇ ಸಮಯಕ್ಕೆ ಬಂದ ಕಾರಿನಲ್ಲಿದ್ದವರು 108ಆಂಬುಲೆನ್ಸ್ ಗೆ ಕರೆ ಮಾಡಿ ತಿಳಿಸಿದ್ದರಿಂದ ಸ್ಥಳಕ್ಕೆ ಧಾವಿಸಿದ ಅಂಬ್ಯುಲೆನ್ಸ್ ನ ಸಿಬ್ಬಂದಿ ಕೂಡ್ಲಿಗಿ ಆಸ್ಪತ್ರೆಗೆ ಕರೆ ತರಲಾಗಿ ಅಷ್ಟರಲ್ಲಿ ಬೈಕ್ ಸವಾರ ನಾಗರಾಜ ಮೃತಪಟ್ಟಿರುವ ಬಗ್ಗೆ ತಿಳಿದಿದೆ ಸ್ಥಳಕ್ಕೆ ಕೂಡ್ಲಿಗಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದಿದೆ. ಇಂದು ಬೆಳಿಗ್ಗೆ ಕೂಡ್ಲಿಗಿ ಆಸ್ಪತ್ರೆ ಆವರಣದಲ್ಲಿ ಮೃತನ ಸಂಬಂಧಿಗಳು, ಸ್ನೇಹಿತರು ಜಮಾಯಿಸಿದ್ದರು. ಭಾನುವಾರದಂದು ಸಂಬಂದಿ ದೇಶದ ಯೋಧ ಮಂಗಾಪುರದ ಸಂತೋಷಕುಮಾರ ಯೋಧ 17ವರ್ಷದ ಸೇವೆಯಿಂದ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಬಂದಿದ್ದರ ಅದ್ದೂರಿ ಸ್ವಾಗತ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಪ್ಲಿ ನಾಗರಾಜ ಇಂದು ಸಾವನ್ನಪ್ಪಿರುವ ಸುದ್ದಿ ತಿಳಿದು ಗ್ರಾಮದ ಜನತೆ ಕಣ್ಣೀರಿಟ್ಟರು.