ಅಪರಾಧ ಚಟುವಟಿಕೆ ಮಟ್ಟ ಹಾಕಿ

ಬಿವೈವಿ ಗುಡುಗು

ಬೆಂಗಳೂರು, ಮೇ ೨೭- ರಾಜ್ಯದಲ್ಲಿ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸದಿದ್ದರೆ ರಾಜ್ಯ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಗುಡುಗಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅವರು ರಾಜ್ಯದಲ್ಲಿ ಕ್ರಿಮಿನಲ್ ಚಟುವಟಿಕೆಗಳು ಮಿತಿಮೀರಿವೆ. ಅದರ ಬೆನ್ನಲ್ಲೇ ನಿಷೇಧಿತ ಔಷಧಿಗಳ ಮಾರಾಟ ದಂಧೆ, ಡ್ರಗ್ಸ್, ಗಾಂಜಾ ಪದಾರ್ಥಗಳ ವಹಿವಾಟು ಎಗ್ಗಿಲ್ಲದೆ ನಡೆಯುತ್ತಿದೆ. ಅದೆಷ್ಟೋ ಜನರು ಡ್ರಗ್ಸ್ ಜಾಲಕ್ಕೆ ಸಿಲುಕಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೋ ಎಂಬ ಆತಂಕದ ಪರಿಸ್ಥಿತಿಯೂ ನಿರ್ಮಾಣವಾಗಿದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಡ್ರಗ್ ವ್ಯಸನಿಯೊಬ್ಬ ಅಮಾಯಕರಿಬ್ಬರನ್ನು ಹತ್ಯೆ ಮಾಡಿದ್ದರ ಕುರಿತು ಮಾಧ್ಯಮ ವರದಿಯನ್ನು ಎಕ್ಸ್ ಜಾಲತಾಣದಲ್ಲಿ ಹಂಚಿಕೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಅಸಮರ್ಥತತೆಯಿಂದ ಕಾಳಸಂತೆಕೋರರು, ಕೊಲೆಗಡುಕರ ಹಾಗೂ ಡ್ರಗ್ ಮಾಫಿಯಾದ ಚಟುವಟಕೆಗಳು ಸ್ವೇಚ್ಛೆಯಾಗಿ ನಡೆಯುತ್ತಿದೆ. ಸಮಾಜ ಹಾಗೂ ದೇಶದ ಭವಿಷ್ಯ ಬೆಳಗಬೇಕಾದ ವಿದ್ಯಾರ್ಥಿಗಳು, ಯುವ ಜನರನ್ನು ದಿಕ್ಕು ತಪ್ಪಿಸುವ ವಿದ್ರೋಹಿ ಮಾಫಿಯಾ ಶಕ್ತಿಗಳು ರಾಜ್ಯದಲ್ಲಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿರುವುದು ಕಂಡು ಬರುತ್ತಿದೆ ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.
ಹಾದಿ, ಬೀದಿಗಳಲ್ಲಿ ರೇವ್ ಪಾರ್ಟಿಗಳು, ಡ್ರಗ್ಸ್ ಮಾಫಿಯಾ ಜಾಲ ಹರಡುತ್ತಿದೆ. ಕಳಪೆ ಔಷಧಿ ಪೂರೈಸಿ ಜನರ ಆರೋಗ್ಯದ ಜತೆಯೂ ಚೆಲ್ಲಾಟವಾಡುತ್ತಿರುವ ಜಾಲದ ವಿರುದ್ಧ ಸರ್ಕಾರದ ಕಾರ್ಯಾಚರಣೆ ಆರಂಭಿಸದಿದ್ದರೆ ಬಿಜೆಪಿ ಬೀದಿಗಿಳಿದು ಹೋರಾಡುವುದು ಅನಿವಾರ್ಯವಾದೀತು ಎಂದು ಎಚ್ಚರಿಕೆ ನೀಡಿದ್ದಾರೆ.