ಬೆಂಗಳೂರು,ಜೂ.೭- ರಾಜ್ಯದಲ್ಲಿ ಅಪರಾಧ ಚಟುವಟಿಕೆಗಳಿಗೆ ಅಂಕುಶ ಹಾಕಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಯ ಸಂಖ್ಯಾ ಬಲವನ್ನು ಹೆಚ್ಚಿಸಲು
ನೂತನ ಕಾಂಗ್ರೆಸ್ ಸರ್ಕಾರ ಮುಂದಾಗಿದೆ.ಖಾಲಿಯಿರುವ ಪೊಲೀಸ್ ಇಲಾಖೆಯ ಸಿಬ್ಬಂದಿಯ ಜೊತೆಗೆ ಹೆಚ್ಚುವರಿಯಾಗಿ ೨,೪೫೪ ಹುದ್ದೆಗಳಿಗೆ ಎರಡು ಹಂತಗಳಲ್ಲಿ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಿದೆ.ಪೊಲೀಸ್ ಇಲಾಖೆಯ ಸಂಖ್ಯಾಬಲ ಹೆಚ್ಚಿಸಿ ರೌಡಿ ಚಟುವಟಿಕೆಗಳು ಅಪರಾಧ ಕೃತ್ಯಗಳು ಕಾನೂನು ಬಾಹಿರ ಕೃತ್ಯಗಳಿಗೆ ಕಡಿವಾಣ ಹಾಕಿ ಸಂಚಾರ ಸುವ್ಯವಸ್ಥೆ ನಿರ್ವಹಿಸಲು ೨,೪೫೪ ಹುದ್ದೆಗಳ ನೇಮಕಾತಿಗೆ ತೀರ್ಮಾನಿಸಲಾಗಿದೆ.ಎರಡು ಹಂತಗಳಲ್ಲಿ ಸಿಬ್ಬಂದಿ ನೇಮಕಗೊಳಿಸಲು ಆರ್ಥಿಕ ಇಲಾಖೆಯ ಅನುಮತಿ ದೊರೆತಿದ್ದು,ಪ್ರಮುಖವಾಗಿ ಸಿಸಿಬಿ ಹೆಚ್ಚು ಸಿಬ್ಬಂದಿ ಬಲವನ್ನ ಹೊಂದಲಿದೆ.ಮಾದಕ ದಂಧೆಕೋರರು, ಸಂಘಟಿತ ಅಪರಾಧ, ಮಹಿಳಾ ಮತ್ತು ಮಕ್ಕಳ ರಕ್ಷಣೆ, ವಿಶೇಷ ವಿಚಾರಣೆ ಸೇರಿದಂತೆ ಪ್ರಮುಖ ಪಾತ್ರ ಹೊಂದಿರುವ ಸಿಸಿಬಿಗೆ ಹೊಸದಾಗಿ ಓರ್ವ ಎಸಿಪಿ, ೧೦ ಇನ್ಸ್‌ಪೆಕ್ಟರ್, ೬ ಸಬ್ ಇನ್ಸ್‌ಪೆಕ್ಟರ್, ೨೬ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್, ೪೬ ಹೆಡ್ ಕಾನ್ಸ್‌ಟೇಬಲ್, ೧೪೨ ಕಾನ್ಸ್‌ಟೇಬಲ್ ಸಹಿತ ೨೩೧ ಸಿಬ್ಬಂದಿಗಳನ್ನು ನಿಯೋಜಿಸಿ ಸಂಖ್ಯೆಯು ದ್ವಿಗುಣಗೊಳ್ಳಲಿದೆ.
೨ ನೂತನ ಸಂಚಾರ ಠಾಣೆ:
ನಗರದಲ್ಲಿ ಇಬ್ಬರು ಇನ್ಸ್‌ಪೆಕ್ಟರ್, ೧೨ ಸಬ್ ಇನ್ಸ್‌ಪೆಕ್ಟರ್, ೨೪ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್, ೪೪ ಹೆಡ್ ಕಾನ್ಸ್‌ಟೇಬಲ್, ೮೮ ಕಾನ್ಸ್‌ಟೇಬಲ್ ಸಹಿತ ೧೭೦ ಸಿಬ್ಬಂದಿಗಳನ್ನೊಳಗೊಂಡ ಎರಡು ನೂತನ ಸಂಚಾರ ಪೊಲೀಸ್ ಠಾಣೆಗಳು ನಿರ್ಮಾಣವಾಗಲಿವೆ.ಆರು ಇನ್ಸ್‌ಪೆಕ್ಟರ್, ೨೪ ಸಬ್ ಇನ್ಸ್‌ಪೆಕ್ಟರ್, ೨೪ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್, ೪೮ ಹೆಡ್ ಕಾನ್ಸ್‌ಟೇಬಲ್, ೧೪೪ ಕಾನ್ಸ್‌ಟೇಬಲ್ ಸಹಿತ ಒಟ್ಟು ೨೪೬ ಸಿಬ್ಬಂದಿಗಳ ಸಂಖ್ಯಾ ಬಲದೊಂದಿಗೆ ಆರು ಮಹಿಳಾ ಪೊಲೀಸ್ ಠಾಣೆಗಳು ಕಾರ್ಯಾರಂಭಿಸಲಿವೆ.
ಹೆಚ್ಚುವರಿ ಸಿಬ್ಬಂದಿ:
ನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಇಎನ್ ಠಾಣೆಗಳಿಗೆ ೧೬ ಸಬ್ ಇನ್ಸ್‌ಪೆಕ್ಟರ್, ೨೪ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್, ೪೮ ಹೆಡ್ ಕಾನ್ಸ್‌ಟೇಬಲ್, ೧೧೬ ಕಾನ್ಸ್‌ಟೇಬಲ್ ಸಹಿತ ಒಟ್ಟು ೨೦೪ ಜನ ನೂತನ ಸಿಬ್ಬಂದಿ ಸೇರ್ಪಡೆಗೊಳ್ಳಲಿದ್ದಾರೆ.ಜೊತೆಗೆ ಸೈಬರ್ ಕ್ರೈಂ ಠಾಣೆಗಳಿಗೆ ಓರ್ವ ಎಸಿಪಿ, ಇಬ್ಬರು ಇನ್ಸ್‌ಪೆಕ್ಟರ್, ೪ ಸಬ್ ಇನ್ಸ್‌ಪೆಕ್ಟರ್, ೪ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್, ೮ ಹೆಡ್ ಕಾನ್ಸ್‌ಟೇಬಲ್, ೧೬ ಕಾನ್ಸ್‌ಟೇಬಲ್ ಸಹಿತ ಒಟ್ಟು ೩೫ ಮಂದಿ ಸಿಬ್ಬಂದಿ ಸೇರ್ಪಡೆಯಾಗಲಿದ್ದಾರೆ.ಇದಲ್ಲದೇ ನಗರದ ಕಾನೂನು ಸುವ್ಯವಸ್ಥೆ ಠಾಣೆಗಳಿಗೆ ೪೮ ಸಬ್ ಇನ್ಸ್‌ಪೆಕ್ಟರ್, ೧೩೨ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್, ೭೪ ಹೆಡ್ ಕಾನ್ಸ್‌ಟೇಬಲ್, ೬೪ ಕಾನ್ಸ್‌ಟೇಬಲ್ ಸಹಿತ ಹೊಸದಾಗಿ ೩೧೮ ಜನ ಸಿಬ್ಬಂದಿ ನಿಯೋಜನೆಯಾಗಲಿದ್ದಾರೆ.
ಹೊಸ ಯೋಜನೆಗಳು:
ಕಮ್ಯಾಂಡ್ ಸೆಂಟರ್ ಗೆ ಓರ್ವ ಎಸಿಪಿ, ೩ ಇನ್ಸ್‌ಪೆಕ್ಟರ್, ೬ ಸಬ್ ಇನ್ಸ್‌ಪೆಕ್ಟರ್, ೪ ಹೆಡ್ ಕಾನ್ಸ್‌ಟೇಬಲ್, ೮ ಕಾನ್ಸ್‌ಟೇಬಲ್ ಸಹಿತ ಒಟ್ಟು ೨೨ ಸಿಬ್ಬಂದಿ ನೇಮಕವಾಗಲಿದ್ದಾರೆ.
ಹೊಸತಾಗಿ ಮೂರು ಸಂಚಾರ ಪೊಲೀಸ್ ಠಾಣೆಗಳಿಗೆ ೩ ಇನ್ಸ್‌ಪೆಕ್ಟರ್, ೧೮ ಸಬ್ ಇನ್ಸ್‌ಪೆಕ್ಟರ್, ೩೬ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್, ೬೬ ಹೆಡ್ ಕಾನ್ಸ್‌ಟೇಬಲ್, ೧೩೨ ಕಾನ್ಸ್‌ಟೇಬಲ್?ಗಳ ಸಹಿತ ೨೫೫ ಸಿಬ್ಬಂದಿ ಕಾರ್ಯಾರಂಭಿಸಲಿದ್ದಾರೆ. ದ್ವಿತಿಯ ಹಂತದಲ್ಲಿ ೨೪ ಸಬ್ ಇನ್ಸ್‌ಪೆಕ್ಟರ್, ೪೮ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್, ೪೨ ಹೆಡ್ ಕಾನ್ಸ್‌ಟೇಬಲ್, ೬೧ ಕಾನ್ಸ್‌ಟೇಬಲ್ ಸಹಿತ ೧೭೫ ಸಿಬ್ಬಂದಿಗಳು ಸಂಚಾರ ಪೊಲೀಸ್ ಠಾಣೆಗಳಿಗೆ ನೂತನವಾಗಿ ಸೇರ್ಪಡೆಯಾಗಲಿದ್ದಾರೆ.ಸಿಇಎನ್ ಠಾಣೆಗಳಿಗೆ ಹೊಸತಾಗಿ ೧೬ ಸಬ್ ಇನ್ಸ್‌ಪೆಕ್ಟರ್, ೨೪ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್, ೪೮ ಹೆಡ್ ಕಾನ್ಸ್‌ಟೇಬಲ್, ೧೧೬ ಕಾನ್ಸ್‌ಟೇಬಲ್ ಸಹಿತ ಪಟ್ಟು ೨೦೪ ಸಿಬ್ಬಂದಿ ಸೇರ್ಪಡೆಯಾಗಲಿದ್ದಾರೆ. ಅಲ್ಲದೇ ಹೆಚ್ಚು ಅಪರಾಧ ಪ್ರಕರಣಗಳು ವರದಿಯಾಗುವ ಠಾಣೆಗಳಿಗಾಗಿಯೇ ೯೨ ಸಬ್ ಇನ್ಸ್‌ಪೆಕ್ಟರ್, ೧೮೭ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ಸಹಿತ ೨೭೯ ಜನ ಸಿಬ್ಬಂದಿ ನೂತನವಾಗಿ ಸೇರ್ಪಡೆಯಾಗಲಿದ್ದಾರೆ.
ಸ್ಪೆಷಲ್ ಬ್ರಾಂಚ್:
ಎರಡನೇ ಹಂತದಲ್ಲಿ ೧೦ ಸಬ್ ಇನ್ಸ್‌ಪೆಕ್ಟರ್, ೧೭ ಸಬ್ ಇನ್ಸ್‌ಪೆಕ್ಟರ್, ೭೨ ಹೆಡ್ ಕಾನ್ಸ್‌ಟೇಬಲ್, ೧೫೮ ಕಾನ್ಸ್‌ಟೇಬಲ್ ಸಹಿತ ೨೫೭ ಸಿಬ್ಬಂದಿ ಸೇರ್ಪಡೆಯಾಗಲಿದ್ದಾರೆ.
ಅಲ್ಲದೇ ಸಿಟಿ ಸ್ಪೆಷಲ್ ಬ್ರಾಂಚ್?ಗೆ ಓರ್ವ ಇನ್ಸ್‌ಪೆಕ್ಟರ್, ೨ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್, ೪ ಹೆಡ್ ಕಾನ್ಸ್‌ಟೇಬಲ್, ೮ ಕಾನ್ಸ್‌ಟೇಬಲ್ ಸಹಿತ ಒಟ್ಟು ೧೫ ಮಂದಿ ಸಿಬ್ಬಂದಿ ಹೊಸ ಸೇರ್ಪಡೆಯಾಗಲಿದ್ದಾರೆ. ಹಾಗೂ ವಿವಿಐಪಿ ಭದ್ರತಾ ವಿಭಾಗಕ್ಕೆ ಓರ್ವ ಇನ್ಸ್‌ಪೆಕ್ಟರ್, ೨ ಸಬ್ ಇನ್ಸ್‌ಪೆಕ್ಟರ್, ೪ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್, ೪ ಹೆಡ್ ಕಾನ್ಸ್‌ಟೇಬಲ್, ೩೦ ಕಾನ್ಸ್‌ಟೇಬಲ್ ಸಹಿತ ಒಟ್ಟು ೪೩ ಮಂದಿ ಸಿಬ್ಬಂದಿ ಹೊಸತಾಗಿ ಸೇರ್ಪಡೆಯಾಗಲಿದ್ದಾರೆ ಎಂಬ ಮಾಹಿತಿ ದೊರೆತಿದೆ.