ಅಪರಾಧ ಕೃತ್ಯಕ್ಕೆ ಅಂಕುಶ ಹಾಕಿ: ಪರಂ

ಪೋಲಿಸ್ ನಿಯಂತ್ರಣ ಕೊಠಡಿಯಲ್ಲಿ ಕಂಪ್ಯೂಟರ್ ನಲ್ಲಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪೋಲಿಸ್ ಅಧಿಕಾರಿಗಳು ಇದ್ದಾರೆ.

ಬೆಂಗಳೂರು,ಮೇ.16-ನಗರದಲ್ಲಿ ರೌಡಿ ಚಟುವಟಿಕೆಗಳು,ಮಾದಕವಸ್ತು ದಂಧೆಯನ್ನು ಹತ್ತಿಕ್ಕಿ ಸೈಬರ್ ಅಪರಾಧ ಕೃತ್ಯಗಳ ತ್ವರಿತ ಪತ್ತೆ ಕಾರ್ಯ ಕೈಗೊಳ್ಳಲು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.ಗೃಹ ಸಚಿವರಾಗಿ ಅಧಿಕಾರವಹಿಸಿಕೊಂಡ ಬಳಿಕ ಮೊದಲ ಬಾರಿಗೆ ನಗರ ಪೊಲೀಸ್ ಕಮೀಷನರ್ ಕಚೇರಿಗೆ ಇಂದು ಭೇಟಿ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಅಪರಾಧ ಕೃತ್ಯಗಳು ಕಾನೂನು ಸುವ್ಯವಸ್ಥೆಯ ಪರಾಮರ್ಶೆ ನಡೆಸಿದರು.ಪೊಲೀಸ್ ಠಾಣೆಗಳನ್ನು ಜನಸ್ನೇಹಿಗೊಳಿಸಿ ನೊಂದು ಬರುವ ಸಾರ್ವಜನಿಕರ ದೂರು ದುಮ್ಮಾನಗಳನ್ನು ಅಲಿಸಿ ನ್ಯಾಯ ಕೂಡಿಸಿ ಪೊಲೀಸರ ಬಗ್ಗೆ ಉತ್ತಮ ಅಭಿಪ್ರಾಯ ಮೂಡಿಸುವಲ್ಲಿ ಶ್ರಮಿಸಬೇಕು ಎಂದು ಸೂಚನೆ ನೀಡಿದರು.ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡು ಕಾಂಗ್ರೆಸ್ ಗೆ ಜನತೆ ಅಧಿಕಾರ ನೀಡಿದ್ದಾರೆ ಜನರ ನಿರೀಕ್ಷೆ ಹುಸಿಯಾಗದಂತೆ ಪೊಲೀಸರು ಕರ್ತವ್ಯ ನಿರ್ವಹಿಸಬೇಕು,ರಾಜಿಮನೋಭಾವಗಳನ್ನು ಬಿಟ್ಟು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಮಾಣಿಕವಾಗಿ ಕೆಲಸ ಮಾಡಬೇಕು ಎಂದರು.
ನಗರದಲ್ಲಿ ಸೈಬರ್ ಅಪರಾಧ ಕೃತ್ಯಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ನುರಿತ ಹಾಗೂ ತರಬೇತಿ ಪಡೆದ ಸಿಬ್ಬಂದಿ ಸೆನ್ ಪೊಲೀಸ್ ಠಾಣೆಗಳಿಗೆ ನಿಯೋಜಿಸಿ ದೂರುಗಳ ತ್ವರಿತ ವಿಲೇವಾರಿಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
ಕೆಲ ಮತೀಯ ಶಕ್ತಿಗಳು ಕಾನೂನು ಸುವ್ಯವಸ್ಥೆಗೆ ಭಂಗ ತರುವ ಪ್ರಯತ್ನಗಳನ್ನು ನಡೆಸುತ್ತಿದ್ದು ಅಂತಹ ಶಕ್ತಿಗಳ ವಿರುದ್ಧ ಹೆಚ್ಚಿನ ನಿಗಾವಹಿಸಬೇಕು ಎಂದು ತಾಕೀತು ಮಾಡಿದರು.
ಉಗ್ರಗಾಮಿ ಚಟುವಟಿಕೆಗಳು ಬಗ್ಗೆ ಎಚ್ಚರಿಕೆ ವಹಿಸಿ ಗುಪ್ತಚರದಳದಿಂದ ಬರುವ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಬೇಕು ಅಪರಾಧ ಕೃತ್ಯಗಳು ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುವ ಆರೋಪಿಗಳು ತಂತ್ರಜ್ಞಾನ ಬಳಕೆ ಹೆಚ್ಚು ಮಾಡುತ್ತಿದ್ದು ಅದಕ್ಕೆ ತಕ್ಕಂತೆ ಪೊಲೀಸರಿಗೆ ತರಬೇತಿ ನೀಡಬೇಕು ಎಂದು ಸೂಚನೆ ನೀಡಿದರು.
ಇದೇ ವೇಳೆ ಕಮಾಂಡ್ ಸೆಂಟರ್,ಡಯಲ್ ೧೧೨,ಹೊಯ್ಸಳ ಗಸ್ತು ವ್ಯವಸ್ಥೆಯನ್ನು ಪರಾಮರ್ಶೆ ನಡೆಸಿ ಮಾಹಿತಿಯನ್ನು ಪಡೆದರು.
ಸಭೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ(ಡಿಜಿ-ಐಜಿಪಿ) ಅಲೋಕ್ ಮೋಹನ್,ನಗರ ಪೊಲೀಸ್ ಆಯುಕ್ತ ದಯಾನಂದ,ಹೆಚ್ಚುವರಿ ಆಯುಕ್ತರಾದ ಸಂದೀಪ್ ಪಾಟೀಲ್ ಚಂದ್ರ ಶೇಖರ್ ಜಂಟಿ ಆಯುಕ್ತರಾದ ಅನುಚೇತ್,ಶರಣಪ್ಪ ಎಲ್ಲಾ ವಿಭಾಗದ ಡಿಜಿಪಿಗಳು ಸಭೆಯಲ್ಲಿ ಭಾಗವಹಿಸಿದ್ದರು.