ಅಪಪ್ರಚಾರ ಮಾಡಿಯಾದರೂ ಸದಾ ಸುದ್ದಿಯಲ್ಲಿರಬೇಕೆಂಬ ಹಪಾಹಪಿತನ ಸಿದ್ದರಾಮಯ್ಯ ನವರದ್ದು: ಮಹೇಶ್ ಕಿಡಿ

ಮೈಸೂರು, ಮೇ.26: ಜಟ್ಟಿ ಕೆಳಗೆ ಬಿದ್ದರೂ ಮೀಸೆಗೆ ಮಣ್ಣಾಗಲಿಲ್ಲ ಎಂಬ ಮಾದರಿಯ ಟೀಕೆ ಸಿದ್ದರಾಮಯ್ಯನವರದ್ದು. ಅಪಪ್ರಚಾರ ಮಾಡಿಯಾದರೂ ಸದಾ ಸುದ್ದಿಯಲ್ಲಿರಬೇಕೆಂಬ ಹಪಾಹಪಿತನ ಸಿದ್ದರಾಮಯ್ಯನವರಲ್ಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನಹಿತವೊಂದನ್ನೇ ಮನಸ್ಸಿನಲ್ಲಿಟ್ಟುಕೊಂಡು ನಿರಂತರವಾಗಿ ಕೋವಿಡ್ ವಿರುದ್ಧ ಹೋರಾಟ ಮುಂದುವರಿಸಿವೆ. ಅದನ್ನು ಸಹಿಸದ ಸಿದ್ದರಾಮಯ್ಯ ಅವರು ತಮ್ಮ ಹುದ್ದೆಯ ಘನತೆಯನ್ನು ಮರೆತು ಅಪಪ್ರಚಾರದ ಮೊರೆ ಹೋಗಿದ್ದಾರೆಂದು ಬಿಜೆಪಿ ರಾಜ್ಯ ಮಾಧ್ಯಮ ವಕ್ತಾರ ಎಂ.ಜಿ.ಮಹೇಶ್ ಕಿಡಿಕಾರಿದರು.
ಮೈಸೂರು ಬಿಜೆಪಿ ಕಛೇರಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರದಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ, ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪನವರ ಸರ್ಕಾರ ಕೋವಿಡ್ ನಿಭಾಯಿಸಲು ಕಂಕಣ ಬದ್ಧವಾಗಿದೆ. ರಾಜ್ಯದಲ್ಲಿ ಈಗಾಗಲೇ ದುರ್ಬಲರು, ಸಂಕಷ್ಟದಲ್ಲಿರುವವರ ನೆರವಿಗಾಗಿ 1,2500ಕೋಟಿ ರೂ.ಪ್ಯಾಕೇಜ್ ನ್ನು ಸರ್ಕಾರ ಘೋಷಿಸಿದೆ.
ಪ್ರಧಾನಿಯವರು ರೈತರ ಸಂಕಷ್ಟ ಗಮನದಲ್ಲಿಟ್ಟುಕೊಂಡು ಕಿಸಾನ್ ಸಮ್ಮಾನ್ ಯೋಜನೆ ಮುಂದುವರಿಸಿದ್ದು ಅದರಡಿ 20 ಸಾವಿರ ಕೋಟಿ ರೂ.ಬಿಡುಗಡೆ ಮಾಡಿದ್ದಾರೆ. ಹಿಂದೆ ಕಾಂಗ್ರೆಸ್ ಆಡಳಿತದಲ್ಲಿ ಈ ಮೊತ್ತ ಫಲಾನುಭವಿಯನ್ನು ತಲುಪುವ ವೇಳೆ 100ರೂ.ಗೆ 15ರೂ.ಮಟ್ಟದಲ್ಲಿರುತ್ತಿತ್ತು. ಬ್ಯಾಮಕ್ ಮೂಲಕ ನೇರ ಹಣ ವರ್ಗಾವಣೆ ಪರಿಣಾಮವಾಗಿ ಭ್ರಷ್ಟಾಚಾರ ಶೂನ್ಯ ಪ್ರಮಾಣಕ್ಕೆ ಇಳಿದಿದೆ. ಅದರಿಂದ ಬಿಜೆಪಿ ಸರ್ಕಾರಗಳ ಜನಪ್ರಿಯತೆ ಹೆಚ್ಚುತ್ತಿದೆ. ಇತರ ರಾಜ್ಯಗಳೂ ಕಾಂಗ್ರೆಸ್ ಮುಕ್ತತೆಯತ್ತ ನಡೆದಿದೆ. ಇದು ಪಂಚರಾಜ್ಯಗಳ ಚುನಾವಣೆಯಲ್ಲೂ ಸಾಬೀತಾಗಿದೆ. ಹಿಂದೆ ನಡೆದ ಚುನಾವಣೆಯಲ್ಲೂ ಕಾಂಗ್ರೆಸ್ ಕಳಪೆ ಪ್ರದರ್ಶನದಿಂದ ಸಿದ್ದರಾಮಯ್ಯನವರು ಕಂಗೆಟ್ಟಿದ್ದಾರೆ. ಅದೇ ಕಾರಣಕ್ಕೆ ಅವರು ಅಪಪ್ರಚಾರದಲ್ಲಿ ಪ್ರಚಾರ ಪಡೆಯುವ ತಂತ್ರದಲ್ಲಿದ್ದಾರೆ. ಆದರೆ ಇದನ್ನು ಜನರು ಗಮನಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಇದು ತಿರುವುಮುರುವಾಗಲಿದೆ ಎಂದರು.
ವಾಸ್ತವವಾಗಿ ದೇಶ ಮತ್ತು ರಾಜ್ಯದಲ್ಲಿ ಜನರ ಮಾರಣಹೋಮಕ್ಕೆ ಕಾಂಗ್ರೆಸ್ ಮುಖಂಡರೇ ಪರೋಕ್ಷ ಕಾರಣ. ಸುಮಾರು ಐದು ದಶಕಕ್ಕೂ ಹೆಚ್ಚು ಕಾಲ ದೇಶದಲ್ಲಿ ಮತ್ತು ವಿವಿಧ ರಾಜ್ಯಗಳಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ ಪಕ್ಷವು ವೈದ್ಯಕೀಯ ಕ್ಷೇತ್ರ ಮೂಲ ಸೌಕರ್ಯದ ಕಡೆ ನಿರ್ಲಕ್ಷ್ಯ ತೋರಿತು., ಅಲ್ಲದೆ ಕಾಂಗ್ರೆಸ್ ಅಧಿಕಾರದಲ್ಲಿರುವ ಪಂಜಾಬ್ ಮತ್ತಿತರ ರಾಜ್ಯಗಳಲ್ಲಿ ವೆಂಟಿಲೇಟರ್ ಬಾಕ್ಸ್ ನ್ನೂ ತೆರೆಯದೆ ಕಳಪೆ ವೆಂಟಿಲೇಟರ್ ಎಂದು ಪ್ರಚಾರ ಮಾಡಲಾಗಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಟೂಲ್ ಕಿಟ್ ಮೂಲಕ ಪ್ರಧಾನಿಗಳು ಮತ್ತು ದೇಶದ ಘನತೆಗೆ ಧಕ್ಕೆ ಉಂಟು ಮಾಡುವ ದುರುದ್ದೇಶ ಹೊಂದಿದೆ.
ಆ ಪಕ್ಷದ ರಹಸ್ಯ ಕಾರ್ಯಸೂಚಿಗೆ ಅನುಗುಣವಾಗಿ ಅವರು ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ 57ಕ್ಕೂ ಹೆಚ್ಚು ಮುಖಂಡರಿಂದ ಲಸಿಕೆಯೇ ಸರಿಯಿಲ್ಲ. ಲಸಿಕೆ ಅಭಿವೃದ್ಧಿಗೆ ಸರಿಯಾದ ಪ್ರಯೋಗ ನಡೆಸಿಲ್ಲ ಎಂದು ವಿಜ್ಞಾನಿಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನವೂ ನಡೆಯಿತು. ಇದರಿಂದ ಆರಂಭದಲ್ಲಿಯೇ ಲಸಿಕೆ ತಯಾರಿಸುವ ಕಾರ್ಯಕ್ಕೆ ಸ್ವಲ್ಪ ಮಟ್ಟಿನ ಹಿನ್ನಡೆಯೂ ಆಯಿತು. ಇದರಿಂದಾಗಿ ಲಸಿಕೆಗಳು ಹಾಳಾದವು. ಇವೆಲ್ಲವೂ ಗೊತ್ತಿದ್ದು ಸಿದ್ದರಾಮಯ್ಯ ಅವರು ಅಪಪ್ರಚಾರದಿಂದ ಪ್ರಚಾರ ಪಡೆಯುವ ಕೆಲಸಕ್ಕೆ ಕೈಹಾಕುತ್ತಿದ್ದಾರೆ ಎಂದು ವಾಗ್ದಾಲಿ ನಡೆಸಿದರು.
ಪದೇ ಪದೇ ಹೇಳುವ ಸುಳ್ಳನ್ನು ಜನ ನಂಬುತ್ತಾರೆಂಬ ಭ್ರಮೆ ಕಾಂಗ್ರೆಸ್ ಮುಖಂಡರಲ್ಲಿದೆ. ಅದೇ ಕಾರಣಕ್ಕೆ ಟೂಲ್ ಕಿಟ್ ಮೂಲಕ ನಂತರ ಅಪಪ್ರಚಾರ ನಡೆಯಸುವ ಪ್ರಯತ್ನ ನಡೆಸಿದ್ದಾರೆ. ಅದೇ ಮಾದರಿಯಲ್ಲಿ ರಾಜ್ಯದಲ್ಲಿ ವಿರೋಧ ಪಕ್ಷವಾಗಿ ವಿಫಲವಾದ ಸಿದ್ದರಾಮಯ್ಯ ಅವರು ಪಕ್ಷದ ಕೇಂದ್ರ ನಾಯಕರಿಗೆ ತಮ್ಮ ಇಮೇಜ್ ತೋರಿಸುವ ದೃಷ್ಟಿಯಿಂದ ಅವರ ಸೂಚನೆಯಂತೆ ಅಪಪ್ರಚಾರದಲ್ಲಿ ತೊಡಗಿಸಿಕೊಂಡಂತೆ ತೋರುತ್ತಿದೆ. ಎರಡನೆ ಅಲೆಯ ಬಗ್ಗೆ ವಿಜ್ಞಾನಿಗಳಿಂದ ತಿಳಿದು ವೆಂಟಿಲೇಟರ್ ಸಿದ್ಧತೆ, ಮೂಲಸೌಕರ್ಯ ಹೆಚ್ಚಳ, ಬೆಡ್ ಸಂಖ್ಯೆ ಹೆಚ್ಚಳ ಸೇರಿ ವೈದ್ಯಕೀಯ ರಂಗಕ್ಕೆ ಆದ್ಯತೆ ನೀಡಲಾಗಿದೆ. ಬೆಡ್-ಐಸಿಯು ಸೇರಿದಂತೆ ಎಲ್ಲಾ ಮೂಲ ಸೌಕರ್ಯಗಳನ್ನು ಗರಿಷ್ಠ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ಕೋವಿಡ್ ಲಸಿಕೆ ಕುರಿತ ಅಪಪ್ರಚಾರ, ಸರ್ಕಾರಕ್ಕೆ ಬೆಂಬಲ ನೀಡಿ ಸಲಹೆಗಳನ್ನು ಕೊಟ್ಟು ಉತ್ತಮ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಬೇಕಾದ ಕಾಂಗ್ರೆಸ್ಸಿಗರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರವೃತ್ತಿಯನ್ನು ಮುಂದುವರಿಸಿದ್ದಾರೆ. ಆದರೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಸೇವಾ ಹೀ ಸಂಘಟನ್ ಮೂಲಕ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಎತ್ತಿನ ಗಾಡಿಯಿಂದ ರಾಜಕೀಯ ಆರಂಭಿಸಿದ ಕಾಂಗ್ರೆಸ್ ಕೆಲವು ಮುಖಂಡರು ಈಗ ಖಾಸಗಿ ಜೆಟ್ ನಲ್ಲಿ ಹೋರಾಟ ನಡೆಸುವಷ್ಟು ಶ್ರೀಮಂತರಾಗಿದ್ದಾರೆ. ಆದರೆ ಸ್ವಂತ ನೆಲೆಯಲ್ಲಿ ದೇಶಕ್ಕೆ ಮತ್ತು ದೇಶದ ಜನತೆಗೆ ಸಹಾಯ ಮಾಡಿಲ್ಲ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಭಾಗ ಪ್ರಭಾರಿ ಮೈ.ವಿ.ಶಂಕರ್, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಕರ್ನಾಟಕ ಜಂಗಲ್ ರೆಸಾರ್ಟ್ ಅಧ್ಯಕ್ಷ ಅಪ್ಪಣ್ಣ ಉಪಸ್ಥಿತರಿದ್ದರು.