ಅಪಪ್ರಚಾರಗಳಿಗೆ ಕಿವಿಗೊಡದೆ ಮತ್ತೊಮ್ಮೆ ಗೆಲ್ಲಿಸಿ: ಸಿ.ಎಸ್.ಪಿ

ಮಂಡ್ಯ: ಮಾ.18:- ಮೇಲುಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ದುದ್ದ ಹೋಬಳಿಗೆ ಸುಮಾರು 300 ಕೋಟಿ ರೂ.ವೆಚ್ಚದಲ್ಲಿ ರಸ್ತೆ ಮತ್ತು ಕೆರೆಗಳ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಆಗಿದೆ ಎಂದು ಶಾಸಕ ಸಿ.ಎಸ್.ಪುಟ್ಟರಾಜು ಹೇಳಿದರು.
ತಾಲೂಕಿನ ಆನಕುಪ್ಪೆ ಗ್ರಾಮದಲ್ಲಿ ಶುಕ್ರವಾರ ನಡೆದ ದುದ್ದ ಹೋಬಳಿಯ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ,ದುದ್ದ ಹೋಬಳಿಯ ದುದ್ದ,ಶಿವಳ್ಳಿ,ಗಾಣದಾಳು, ಹೊಳಲು,ಮಾರನಚಾಕನಹಳ್ಳಿ, ಹೆಚ್.ಮಲ್ಲೀಗೆರೆ ಕೆರೆಗಳೂ ಸೇರಿದಂತೆ ಇನ್ನೂ 24 ಕೆರೆಗಳ ಹೂಳೆತ್ತಿಸಿ ವಿಶ್ವೇಶ್ವರಯ್ಯ ನಾಲೆ ನೀರನ್ನು ಹರಿಸಿ ನೀರು ತುಂಬಿಸಲಾಗುವುದು ಎಂದು ತಿಳಿಸಿದರು.
ಜಿ.ಮಲ್ಲೀಗೆರೆಯಿಂದ ಹೊನ್ನೇಮಡು, ಚಿಕ್ಕಗಂಗವಾಡಿ ಬಳಿ 7.5 ಕೋಟಿ ರು.ವೆಚ್ಚದಲ್ಲಿ ಸೇತುವೆ ನಿರ್ಮಿಸಿ ಅದಕ್ಕೆ ಹೊಂದಿಕೊಂಡಂತೆ ಚೆಕ್‍ಡ್ಯಾಂ ನಿರ್ಮಿಸಲಾಗುವುದು. 365 ದಿನವೂ ಅಲ್ಲಿ ನೀರು ನಿಲ್ಲುವಂತೆ ಮಾಡಿ ಶ್ರೀ ಆನಕುಪ್ಪಮ್ಮ ದೇವಿ ದರ್ಶನಕ್ಕೆ ಬರುವ ಭಕ್ತರು ಸ್ನಾನ ಮಾಡಿಕೊಂಡು ದೇಗುಲಕ್ಕೆ ತೆರಳಲು ಅನುಕೂಲ ಕಲ್ಪಿಸಿ ಕೊಡಲಾಗುವುದು ಎಂದು ನುಡಿದರು.
ಜಿ.ಮಲ್ಲೀಗೆರೆಯಿಂದ ಚಿಕ್ಕಗಂಗವಾಡಿ ಹೊನ್ನೇಮಡು 4.50ಕೋಟಿ ರು. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ನಡೆಯುತ್ತಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಿಂದ ಹೊಳಲು, ಮಲ್ಲನಾಯಕನಕಟ್ಟೆ,ಶಿವಳ್ಳಿ ಮಾರ್ಗವಾಗಿ ಮೇಲುಕೋಟೆಗೆ ತೆರಳುವ ರಸ್ತೆಗಳ ಗುಂಡಿ ಬಿದ್ದಿದ್ದವು. ಆ ಗುಂಡಿಗಳನ್ನು ಮುಚ್ಚುವ ಕಾಮಗಾರಿ ಆರಂಭಗೊಂಡಿದೆ.ದುದ್ದ ಕೇಂದ್ರ ವ್ಯಾಪ್ತಿಯ ಎಲ್ಲಾ ರಸ್ತೆ ಕಾಮಗಾರಿಗಳು ಪೂರ್ಣಗೊಂಡಿರುವುದಾಗಿ ಹೇಳಿದರು.
ನಾನು ಕ್ಷೇತ್ರ ಬಿಟ್ಟು ಎಲ್ಲಿಯೂ ಓಡಿಹೋಗುವುದಿಲ್ಲ.ನಾನು ಶಾಸಕ, ಸಂಸದ,ಸಚಿವನಾದ ಸಂದರ್ಭದಲ್ಲೂ ಜನರ ಮಧ್ಯೆ ನಿಂತು ಕೆಲಸ ಮಾಡಿದ್ದೇನೆ.ಅಧಿಕಾರವನ್ನು ಸ್ವಾರ್ಥಕ್ಕಾಗಿ ಎಂದಿಗೂ ಉಪಯೋಗಿಸಿಕೊಂಡಿಲ್ಲ.ಜನರ ಹಿತ ಮತ್ತು ಕ್ಷೇತ್ರದ ಅಭಿವೃದ್ಧಿಗೆ ನನ್ನ ಅಧಿಕಾರವನ್ನು ಧಾರೆ ಎರೆದಿದ್ದೇನೆ ಎಂದರು.
ಬೇರೆಯವರಂತೆ ಕದ್ದು ಓಡಿಹೋಗುವ ಜಾಯಮಾನ ನನ್ನದಲ್ಲ.ಕೊರೋನಾ ಸಂಕಷ್ಟ ಪರಿಸ್ಥಿತಿಯಲ್ಲೂ ನನ್ನ ಪ್ರಾಣವನ್ನು ಒತ್ತೆ ಇಟ್ಟು ಜನರ ಸಂಕಷ್ಟಗಳಿಗೆ ಸ್ಪಂದಿಸಿದ್ದೇನೆ.ಮೃತಪಟ್ಟವರ ಅಂತ್ಯಸಂಸ್ಕಾರ ಗೌರವದಿಂದ ನಡೆಯುವಂತೆ ಕ್ರಮ ವಹಿಸಿದ್ದೇನೆ. ಭಾರೀ ಮಳೆ ಎದುರಾದ ಸಮಯದಲ್ಲಿ ಕೆರೆತೊಣ್ಣೂರು ಸೇರಿದಂತೆ ಹಲವಾರು ಕೆರೆಗಳ ಸುರಕ್ಷತೆಗೆ ಧಕ್ಕೆಯಾಗದಂತೆ ಎಚ್ಚರ ವಹಿಸಿ ಕ್ಷೇತ್ರವನ್ನು ಅಭಿವೃದ್ಧಿಯತ್ತ ಮುನ್ನಡೆಸಿರುವುದಾಗಿ ಹೇಳಿದರು.
ಕ್ಷೇತ್ರದ ಒಂದೊಂದು ಪಂಚಾಯಿತಿಗೆ 50 ಕೋಟಿ ರು. ಖರ್ಚು ಮಾಡಿದ್ದೇನೆ.ದುದ್ದ ಹೋಬಳಿಯನ್ನು ಸಂಪೂರ್ಣ ನೀರಾವರಿ ವ್ಯಾಪ್ತಿಗೆ ಒಳಪಡಿಸಿದ್ದು,ಒಂದು ಪಿಯು ಕಾಲೇಜನ್ನು ತೆರೆದಿದ್ದೇನೆ. ಜಿ.ಮಲ್ಲೀಗೆರೆ, ವಿ.ಸಿ.ಫಾರಂ,ಬಿ.ಹಟ್ನ ದಲ್ಲಿ ವಿದ್ಯುತ್ ಉಪಕೇಂದ್ರಗಳನ್ನು ಸ್ಥಾಪಿಸಿ ಗ್ರಾಮೀಣ ಜನರಿಗೆ ವಿದ್ಯುತ್ ಕೊರತೆಯಾಗದಂತೆ ಎಚ್ಚರ ವಹಿಸಿದ್ದೇನೆ.ಯಾರು ಏನೇ ಬಂದು ಹೇಳಿದರೂ ಅದನ್ನು ನಂಬಬೇಡಿ. ಕ್ಷೇತ್ರದ ಜನರಿಗಾಗಿ ನಾನೇನು ಮಾಡಿದ್ದೇನೆ ಎನ್ನುವುದು ನಿಮಗೆಲ್ಲರಿಗೂ ಗೊತ್ತಿದೆ. ಅಪಪ್ರಚಾರಗಳಿಗೆ ಕಿವಿಗೊಡಬೇಡಿ. ನನ್ನ ಮೇಲೆ ವಿಶ್ವಾಸವಿಟ್ಟು ಮತ್ತೊಮ್ಮೆ ಗೆಲ್ಲಿಸಿದರೆ ಇನ್ನೂ ಹೆಚ್ಚಿನ ಸೇವೆ ಮಾಡಲು ಸಿದ್ದನಿದ್ದೇನೆ ಎಂದು ಹೇಳಿದರು.
ಮನ್ ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು ಅವರು ಸಮಾಜ ಸೇವೆಯಲ್ಲಿ ತೊಡಗಿಕೊಂಡು ಮಂಡ್ಯ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಅಭಿಲಾಷೆ ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಜನರ ಸೇವೆ ಮಾಡುವ ಅವಕಾಶ ದೇವಿ ಕರುಣಿಸಲಿ ಎಂದು ತಿಳಿಸಿದರು
ಬೆಳ್ಳಿಕಿರೀಟ ದೇವಿಗೆ ಸಮರ್ಪಣೆ
ಜೆಡಿಎಸ್ ಮುಖಂಡ ಹೊಸಹಳ್ಳಿ ಬಾಲರಾಜು ಅವರು ಶಾಸಕ ಸಿ.ಎಸ್.ಪುಟ್ಟರಾಜು ಅವರಿಗೆ ಉಡುಗೊರೆಯಾಗಿ ನೀಡಿದ ಬೆಳ್ಳಿಕಿರೀಟವನ್ನು ಶ್ರೀ ಆನಕುಪ್ಪಮ್ಮ ದೇವಿಗೆ ಪುಟ್ಟರಾಜು ಅವರು ನೀಡಿದರು.
ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಮನ್‍ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರ, ಜೆಡಿಎಸ್ ಮುಖಂಡ ಬಾಲರಾಜು, ಮುದಗಂದೂರು ಗ್ರಾಪಂ ಅಧ್ಯಕ್ಷ ಶಂಕರೇಗೌಡ, ಜಿಪಂ ಮಾಜಿ ಸದಸ್ಯ ಸಿ.ಮಾದಪ್ಪ, ತಾಪಂ ಮಾಜಿ ಸದಸ್ಯರಾದ ಬೆಟ್ಟಸ್ವಾಮಿ, ಚಿಕ್ಕಹೊನ್ನೇಗೌಡ, ಕವಿತಾ ಜ್ಞಾನಮೂರ್ತಿ, ಹಿಂದುಳಿದ ವರ್ಗಗಳ ಮುಖಂಡ ಬದರಿನಾರಾಯಣ, ಬೇವುಕಲ್ಲು ಗ್ರಾಪಂ ಅಧ್ಯಕ್ಷ ವಿಶ್ವೇಶ್ವರಯ್ಯ ಸೇರಿದಂತೆ ಇತರರಿದ್ದರು.