ಅಪಚಾರ, ಅಧರ್ಮಗಳ ಪ್ರತಿಕಾರವೇ ಕೊರೊನಾ, ಪ್ರವಾಹ: ರಂಗಾಪುರಶ್ರೀ

ತಿಪಟೂರು, ಅ. ೨೯- ಇತ್ತೀಚಿನ ಹಲವಾರು ವರ್ಷಗಳಿಂದ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ದುರಾಸೆ, ಅನಾಚಾರ, ಅನ್ಯಾಯ, ಅಧರ್ಮ ಮಾರ್ಗಗಗಳಿಂದ ಬದುಕು ಕಟ್ಟಿಕೊಳ್ಳಲು ಮುಂದಾಗಿರುವುದರಿಂದಲೇ ಇಂದು ಮನುಕುಲವನ್ನೇ ನಾಶ ಮಾಡುವಂತ ಮಹಾಮಾರಿ ಕೊರೊನಾ ವೈರಸ್ ಸೇರಿದಂತೆ ಪ್ರಳಯಾಂತಕಕಾರಿ ಪ್ರವಾಹಗಳು ವಿಶ್ವದಾದ್ಯಂತ ಉಂಟಾಗುತ್ತಿವೆ ಎಂದು ತಾಲ್ಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಶ್ರೀ ಮಠದ ಗುರುಪರಂಪರೆಯಂತೆ ತಾಲ್ಲೂಕಿನ ಕೆರೆಗೋಡಿ ಮಹಾನವಮಿ ಮಂಟಪದ ತೋಪಿನಲ್ಲಿ ಅಂಬು ಹಾಯಿಸುವ (ಶಮಿಪೂಜೆ) ಧಾರ್ಮಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಗಿಸಿದ ನಂತರ ಮಾತನಾಡಿದ ಶ್ರೀಗಳು, ಮನುಷ್ಯ ತನ್ನ ಅಹಂಕಾರಿ ವರ್ತನೆಯಿಂದ ದೇವರು, ಧರ್ಮ ಮಾರ್ಗ, ಗುರು-ಹಿರಿಯರು ಸೇರಿದಂತೆ ಎಲ್ಲ ಉತ್ತಮ ಪರಂಪರೆಗಳಿಗೆ ಅಪಚಾರ, ಅವಮಾನ ಮಾಡಿಕೊಂಡೇ ಮುನ್ನುಗ್ಗುತ್ತಿದ್ದಾನೆ. ಈ ಬಗ್ಗೆ ಎಚ್ಚರಿಸಲೆಂದೇ ಪ್ರಕೃತಿ ಮುನಿಯ ತೊಡಗಿದ್ದು, ಇದಕ್ಕೆ ಇತ್ತೀಚೆಗೆ ವಕ್ಕರಿಸಿರುವ ಕೊರೊನಾ ವೈರಸ್ ಹಾಗೂ ಎಡ ಬಿಡದೆ ಉಂಟಾಗುತ್ತಿರುವ ಪ್ರಳಯಾಸುರನಾದ ಪ್ರವಾಹಗಳು ತಾಜಾ ಉದಾಹರಣೆಯಾಗಿವೆ. ಯಾವಾಗ ಮಾನವನಲ್ಲಿ ಭಯ-ಭಕ್ತಿಗಳು ಮಾಯವಾಗಿ ದುರಾಲೋಚನೆಗಳು ಮನೆ ಮಾಡುತ್ತಿವೆಯೋ ಅವುಗಳನ್ನು ಭಗವಂತ, ಗುರುಗಳು ಸೇರಿದಂತೆ ಪ್ರಕೃತಿಮಾತೆಯೂ ಸಹಿಸಲಾರಳು ಎಂದರು.
ಮನುಕುಲದ ಉದ್ಧಾರಕ್ಕಾಗಿ ಇನ್ನು ಮುಂದಾದರೂ ಮನುಷ್ಯ ಪಾರಂಪರಿಕವಾಗಿ ನಡೆದುಕೊಂಡು ಬಂದಿರುವ ದೈವಭಕ್ತಿ, ನಂಬಿಕೆ, ಸರಳತೆ, ಹೆತ್ತವರನ್ನು ಗೌರವಿಸುವ ಗುಣಗಳನ್ನು ಪೋಷಿಸುತ್ತ ಪ್ರಕೃತಿಗೆ ಸೆಡ್ಡು ಹೊಡೆಯುವಂತ ದುರಂಹಕಾರಗಳನ್ನು ಕೈಬಿಡುವ ಬಗ್ಗೆ ಮುಂದಾಗಬೇಕು ಎಂದ ಅವರು, ಶ್ರೀಕ್ಷೇತ್ರದ ಆರಾಧ್ಯ ದೈವ ಶ್ರೀ ಶಂಕರೇಶ್ವರ ಮತ್ತು ಶ್ರೀ ರಂಗನಾಥಸ್ವಾಮಿಯವರ ಕೃಪೆ ಹಾಗೂ ಹಿರಿಯ ಗುರುಗಳ ತಪೋಶಕ್ತಿಯಿಂದ ಮುಂದಿನ ದಿನಮಾನಗಳಲ್ಲಿ ನಾಡಿಗೆ ಒದಗಿ ಬಂದಿರುವ ಸಂಕಷ್ಟಗಳು ದೂರವಾಗಿ ಆಶಾದಾಯಕ ದಿನಗಳು ಬರಲಿವೆ ಎಂದರು.
ಶತ್ರುಗಳ ಸಂಹಾರ ಪ್ರತೀಕವಾದ ಆಯುಧ ಪೂಜೆ, ವಿಜಯದಶಮಿ ಹಾಗೂ ಅಂಬು ಹಾಯಿಸುವ ಕಾರ್ಯಕ್ರಮಗಳು ಹಿಂದೂ ದೇಶದ ಅತ್ಯಂತ ಪಾವಿತ್ರ್ಯವಾದ ಹಬ್ಬಗಳು. ನಾಡಿನಲ್ಲಿ ಉಂಟಾಗಿರುವ-ಉಂಟಾಗಲಿರುವ ಕೆಟ್ಟ ಶಕ್ತಿಗಳನ್ನು ಮಟ್ಟ ಹಾಕಿ ಶಾಂತಿ, ನೆಮ್ಮದಿಗಾಗಿ ಇವುಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಭಾರತೀಯ ಪರಂಪರೆಯಲ್ಲಿ ಶತ್ರುಗಳನ್ನು, ಭ್ರಷ್ಟಾಚಾರಿಗಳನ್ನು ಮತ್ತು ದೌರ್ಜನ್ಯ ನಡೆಸುವವರನ್ನು ಸದೆಬಡಿದು ದೇಶಕ್ಕೆ, ಸಮಾಜದ ಒಳತಿಗಾಗಿ ದೇವರು, ದೇವತೆಗಳನ್ನು ಪೂಜಿಸುವ ಮೂಲಕ ಒಳಿತನ್ನು ಆಶಿಸುವ ಈ ಸಂದರ್ಭದಲ್ಲಿ ಮಾನವ ಕುಲಕ್ಕೆ ಯಾವುದೇ ಕೆಡುಕುಂಟಾಗದೆ ಒಳ್ಳೆಯದಾಗಲೆಂದು ಶ್ರೀಗಳು ಹಾರೈಸಿದರು.
ಜಾನಪದ ಮೆರಗು
ಬನ್ನಿ ಮಂಟಪಕ್ಕೆ ಶ್ರೀ ಶಂಕರೇಶ್ವರ ಸ್ವಾಮಿಯವರ ಮೂರ್ತಿಯನ್ನು ಮೂಲ ಸ್ಥಾನದಿಂದ ಆಕರ್ಷಕವಾದ ನೂತನ ತಿರುಗುಣಿ ಅಶ್ವವಾಹನದಲ್ಲಿ ಉತ್ಸವ ಮೂಲಕ ಶ್ರೀಗುರುಗಳ ನೇತೃತ್ವದಲ್ಲಿ ಕೆರೆಗೋಡಿ ದೇವಾಲಯ ಮತ್ತು ರಾಜಬೀದಿಗಳಲ್ಲಿ ಮೆರವಣಿಗೆ ಮೂಲಕ ಕರೆ ತರಲಾಯಿತು. ನಂತರ ಬನ್ನಿಮಂಟಪದಲ್ಲಿ ನಡೆಯುವ ಅಂಬುಹಾಯಿಸುವ ಕಾರ್ಯಕ್ರಮದಲ್ಲಿ ತಮ್ಮಗಳ ಹರಕೆ ತೀರಿಸಲು ಯುವಕರು ಬಗ್ಗಡಸೇವೆಯಲ್ಲಿ ತೊಡಗುತ್ತಾರೆ. ಮೋಡಿ ಕಾರ್ಯಕ್ರಮ ಆಕರ್ಷಕವಾಗಿತ್ತು. ಶ್ರೀ ಶಂಕರೇಶ್ವರಸ್ವಾಮಿಗೆ ಮಹಾಮಂಗಳಾರತಿ ನಡೆಸಿ ಬನ್ನಿಮಂಟಪದ ಅಡಿಯಲ್ಲಿ ನೆಟ್ಟು ಪೂಜಿಸಿದ್ದ ಗೊನೆಹೊತ್ತ ಬಾಳೆ ಗಿಡವನ್ನು ಕಡಿದುರುಳಿಸುವ ಮೂಲಕ ಅಂಬುಹಾಯಿಸುವ ಕಾರ್ಯಕ್ರಮಕ್ಕೆ ಇತಿಶ್ರೀ ಹಾಡಲಾಯಿತು.
ನಂತರ ಎಲ್ಲರಿಗೂ ಬನ್ನಿ ವಿತರಿಸಲಾಯಿತು. ತಾಲ್ಲೂಕು, ಅಕ್ಕಪಕ್ಕದ ತಾಲ್ಲೂಕುಗಳಿಂದ ಅಂಬು ಕಾರ್ಯಕ್ರಮಕ್ಕೆ ಭಕ್ತರೆಲ್ಲರೂ ಮಾಸ್ಕ್ ಹಾಕಿಕೊಂಡೇ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಹಲವಾರು ಜನಪ್ರತಿನಿದಿಗಳು, ಆಡಳಿತ ವರ್ಗದವರು, ಭಕ್ತಾದಿಗಳು, ಶ್ರೀ ಮಠದ ವಿದ್ಯಾಸಂಸ್ಥೆಯ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.