ಬಳ್ಳಾರಿ: ನಿನ್ನೆ ದಿನ ಮೈಸೂರು ಬಳಿ ಖಾಸಗಿ ಬಸ್ ಹಾಗೂ ಇನೋವಾ ಕಾರು ಅಪಘಾತ ಪ್ರಕರಣದಲ್ಲಿ ಮೂವರು ಮಕ್ಕಳು ಸೇರಿದಂತೆ ಮೃತಪಟ್ಟ ೯ ಜನರ ಶವಗಳ ಅಂತ್ಯ ಅಂತ್ಯ ಸಂಸ್ಕಾರಶೋಕ ಸಾಗರ ಮಧ್ಯೆ ತಾಲೂಕಿನ ಸಂಗನಕಲ್ಲು ಗ್ರಾಮದ ವೀರಶೈವ ರುದ್ರಭೂಮಿಯಲ್ಲಿ ಇಂದು ನಡೆಯಿತು.
ಮಂಜುನಾಥ್ (೩೫), ಪೂರ್ಣಿಮಾ (೩೦), ಸಂದೀಪ್ (೨೪), ಸುಜಾತ (೪೦), ಕೊಟ್ರೇಶ್ (೪೫), ಗಾಯಿತ್ರಿ (೩೫) ಹಾಗು ಮಕ್ಕಳಾದ ಶ್ರೇಯಾ (೩) ಪವನ್ (೧೦), ಕಾರ್ತಿಕ್ (೮) ಇವರ ಅಂತ್ಯಕ್ರಿಯೆ ನಡೆಸಲಾಯಿತು.
ಒಂದೇ ಸಮುದಾಯದ ಮತ್ತು ಒಂದೇ ಕುಟುಂಬದವರ ಶವಗಳನ್ನು ಗ್ರಾಮಕ್ಕೆ ತರುತ್ತಿದ್ದಂತೆ ಇಡೀ ಗ್ರಾಮದಲ್ಲಿ ಆವರಿಸಿದ್ದ ಮೌನದ ಕಟ್ಟೆಯೊಡೆದು ಕಣ್ಣೀರ ಧಾರೆ ಹರಿಯಿತು. ಸರ್ಕಾರ ಘೋಷಣೆ ಮಾಡಿದ ಪರಿಹಾರ ಸಮಾಧಾನಕ್ಕೆ ಹೊರತು ಸತ್ತವರನ್ನು ಕರೆತರಲಾಗದು ಎಂಬ ದುಖಃದ ಮಾತುಗಳು ಕೇಳಿ ಬಂದವು.
ಇಂತಹ ಸಾವು ನಮ್ಮೂರಲ್ಲಿ ಈವರಗೆ ನೋಡಿರಲಿಲ್ಲ. ಯಾರಿಗೂ ಈ ರೀತಿಯ ಸಾವು ಬರಬಾರದು ಎಂದು ನಾಗರಿಕರು ಕಂಬನಿ ಮಿಡಿದಿದ್ದಾರೆ.
ಜೆಸಿಬಿಯಿಂದ ತೋಡಲಾಗಿದ್ದ ಒಂಭತ್ತು ಗುಂಡಿಯಲ್ಲಿ ಒಂದೊಂದು ಶಾವಗಳನ್ನು ಇಳಿಸುತ್ತಿದ್ದಂತೆ ಅಲ್ಲಿ ನೆರೆದವರ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿತು.
ಇದೇ ಪ್ರಕರಣದಲ್ಲಿ ಸಾವನ್ನಪ್ಪಿದ ಡ್ರೈವರ್ ಆದಿತ್ಯ ಮೃತದೇಹ ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ಪರಿಹಾರ:
ಮೃತ ಕುಟುಂಬದ ಸಂಬಂಧಿಕರಿಗೆ ತಲಾ ೨ ಲಕ್ಷ ರೂಗಳನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.
ಘಟನೆ ಹಿನ್ನಲೆ:
ಮೇ.೨೭ ರಂದು ಬಳ್ಳಾರಿಯಿಂದ ಮೈಸೂರಿಗೆ ರೈಲಿನಲ್ಲಿ ತೆರಳಿ. ಅಲ್ಲಿ ಬಾಡಿಗೆ ಕಾರು ಪಡೆದು ಸುತ್ತ ಮುತ್ತ ಪ್ರವಾಸಿ ತಾಣಗಳನ್ನು ನೋಡಿಕೊಂಡು ಮಲೆ ಮಾದೇಶ್ವರನ ದರ್ಶನಪಡೆದು ನಿನ್ನೆ ಪುನಃ ರೈಲಿನಲ್ಲಿ ಬಳ್ಳಾರಿಗೆ ಬರಬೇಕಿತ್ತು.
ಇವರ ಪ್ರಾಣಕ್ಕಾಗಿ ರಸ್ತೆ ತಿರುವಿನಲ್ಲಿ ಖಾಸಗಿ ಬಸ್ ರೂಪದಲ್ಲಿ ಕಾದು ಕುಳಿತಿದ್ದ ಜವರಾಯನಿಂದಾಗಿ ಅಫಘಾತವಾಗಿ ಇವರೆಲ್ಲ ಸಾವನ್ನಪ್ಪಿದ್ದಾರೆ.

ಗಾಯ:
ಒಂದು ಮಗು ಸೇರಿದಂತೆ ಮೂರುಜನ ಗಾಯಗೊಂಡಿದ್ದು ಅವರು ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.