ಅಪಘಾತ: ರಸ್ತೆ ತಡೆದು ಸ್ಥಳೀಯರ ಪ್ರತಿಭಟನೆ

ಕೊರಟಗೆರೆ, ಸೆ. ೩- ತಾಲ್ಲೂಕಿನ ಜಟ್ಟಿ ಅಗ್ರಹಾರ ಗ್ರಾಮದ ಬಳಿ ಪ್ರತಿನಿತ್ಯ ಒಂದಲ್ಲ ಒಂದು ಅಪಘಾತಗಳು ನಡೆಯುತ್ತಲೇ ಇವೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಎಷ್ಟು ಬಾರಿ ಮನವಿ ಮಾಡಿದರೂ ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿ ಸ್ಥಳೀಯರು ಸ್ಥಳದಲ್ಲಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ಈ ಅಪಘಾತಗಳಿಗೆ ಕೆಶಿಪ್ ನಿರ್ಮಾಣ ಮಾಡಿರುವ ಅವೈಜ್ಞಾನಿಕ ರಸ್ತೆ ಮುಖ್ಯ ಕಾರಣ ಎಂದು ಸ್ಥಳೀಯರು ಆರೋಪಿಸಿದರು.
ವರ್ಷಕ್ಕೆ ೨೦೦ ರಿಂದ ೩೦೦ ಅಪಘಾತಗಳು ನಡೆಯುತ್ತಿರುತ್ತವೆ. ಅದರಲ್ಲಿ ಬಹುತೇಕ ಜನರು ಸಾವನ್ನಪ್ಪುತ್ತಿದ್ದಾರೆ. ಕೈಕಾಲು ಮುರಿದುಕೊಂಡವರು ಅದೆಷ್ಟೊ ಲೆಕ್ಕಕ್ಕೆ ಇಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದರು.
ಇಂದು ಕೂಡ ಒಂದು ಅಪಘಾತ ನಡೆಯಿತುಯ ತನ್ನ ಮಗುವನ್ನು ಶಾಲೆಗೆ ಬಿಡಲು ಹೋದ ಅಜ್ಜಿಗೆ ಬಸ್ ಹಿಂಭಾಗದಲ್ಲಿ ಬರುತ್ತಿದ್ದ ದ್ವಿಚಕ್ರ ವಾಹನ ಸವಾರನನ್ನು ಗುದ್ದಿದ ಪರಿಣಾಮ ದ್ವಿಚಕ್ರ ವಾಹನ ಸವಾರ ಸೇರಿದಂತೆ ನಾಲ್ವರಿಗೆ ಗಂಭೀರ ಗಾಯವಾಗಿ ತುಮಕೂರಿನ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಿಕೊಡಲಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.
ಜಟ್ಟಿ ಅಗ್ರಹಾರ ಗ್ರಾಮದಲ್ಲಿ ಇರುವ ಶಾಲೆಗೆ ಪ್ರತಿನಿತ್ಯ ಮಕ್ಕಳು ರಸ್ತೆ ದಾಟಿ ಹೋಗಬೇಕು. ಅತಿ ವೇಗವಾಗಿ ಬರುವ ವಾಹನಗಳು ಕಾಟದಿಂದ ಇದು ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಸ್ಥಳೀಯ ಅಗ್ರಹಾರ ಗ್ರಾಮದ ಶಾಲೆಯ ರಸ್ತೆ ಬಳಿ ಎರಡು ರಸ್ತೆ ಹಂಪ್‌ಗಳನ್ನು ಹಾಕಬೇಕು ಎಂದು ಸ್ಥಳೀಯರು ಆಗ್ರಹಿಸಿದರು..
ಸ್ಥಳಕ್ಕೆ ಆರ್‌ಟಿಒ ಅಧಿಕಾರಿಗಳು ಮತ್ತು ಕೊರಟಗೆರೆ ಪೋಲಿಸ್ ಠಾಣೆ ಅಧಿಕಾರಿಗಳು ಭೇಟಿ ನೀಡಿ ಜನರಿಗೆ ಮನವರಿಕೆ ಮಾಡಿ ವಾಹನ ಸವಾರರಿಗೆ ಸಂಚರಿಸಲು ರಸ್ತೆ ತೆರವು ಮಾಡಿಕೊಟ್ಟರು.