ಅಪಘಾತ: ಬೆಂಗಳೂರಿನ ಮೂವರು ಸಾವು

ಸಂಜೆವಾಣಿ ಪ್ರತಿನಿಧಿಯಿಂದ
ಚಿತ್ರದುರ್ಗ,ಜ.೧೯: ಚಲಿಸುತ್ತಿದ್ದ ಟ್ಯಾಂಕರ್ ಲಾರಿಗೆ ಕಾರೊಂದು ಹಿಂಬದಿಯಿಂದ ಡಿಕ್ಕಿಹೊಡೆದು ಮಗು ಸೇರಿದಂತೆ ೩ ಜನರು ಸಾವನ್ನಪ್ಪಿರುವ ಘಟನೆ ಶುಕ್ರವಾರ ಮುಂಜಾನೆ ತಾಲೂಕಿನ ಮದಕರಿಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿ ೪ ರಲ್ಲಿ ನಡೆದಿದೆ.
ಬೆಂಗಳೂರು ಮೂಲದ ನಿರ್ಮಲ(೫೫), ವಿನುತಾ(೪೦) ಹಾಗೂ ೨ ವರ್ಷದ ಮಗು ಯಶಸ್ ಸಾವನ್ನಪ್ಪಿರುವ ದುರ್ದೈವಿಗಳು.
ಬೆಂಗಳೂರಿನಲ್ಲಿ ಸಾಫ್ಟವೇರ್ ಉದ್ಯಮಿಗಳಾದ ಫಣಿರಾಜ್ ಹಾಗೂ ರಶ್ಮಿ ಇಂದು ಬೆಳಗಿನ ಜಾವ ಬೆಂಗಳೂರಿನಿಂದ ಹೊಸಪೇಟೆಗೆ ಕಾರ್ಯಕ್ರಮ ನಿಮಿತ್ತ ಕೆ.ಎ-೦೫,ಎನ್.ಹೆಚ್-೯೫೫೧ ನಂಬರಿನ ಮಾರುತಿ ಸುಜುಕಿ ನೆಕ್ಸಾ ಕಾರಿನಲ್ಲಿ ಹೋಗುತ್ತಿರುವಾಗ ಚಿತ್ರದುರ್ಗ ತಾಲ್ಲೂಕಿನ ಮದಕರಿಪುರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ೪ ರಲ್ಲಿ ಹೊಸಪೇಟೆ ಕಡೆಗೆ ಚಲಿಸುತ್ತಿದ್ದ ಎಂ.ಹೆಚ್-೦೪,ಕೆ.ಯು-೩೬೩೧ ನಂಬರಿನ ಟ್ಯಾಂಕರ್ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಏರ್ ಬ್ಯಾಗ್ ಓಪನ್ ಆಗಿದ್ದು ಮುಂಭಾಗದಲ್ಲಿ ಕುಳಿತಿದ್ದ ಕಾರನ್ನು ಚಾಲನೆ ಮಾಡುತ್ತಿದ್ದ ಫಣಿರಾಜ್ ಹಾಗೂ ರಶ್ಮಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಕಾರಿನ ಹಿಂಭಾಗದಲ್ಲಿ ಕುಳಿತಿದ್ದ ನಿರ್ಮಲ, ವಿನುತಾ ಸ್ಥಳದಲ್ಲೇ ಸಾವನ್ನಪ್ಪಿದ್ದು, ೨ ವರ್ಷದ ಮಗು ಯಶಸ್ ಜಿಲ್ಲಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ.
ಗಾಯಗೊಂಡಿದ್ದ ಫಣಿರಾಜ್ ಹಾಗೂ ರಶ್ಮಿ ಅವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ
ಈ ಬಗ್ಗೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.