ಅಪಘಾತ ; ಬಿಬಿಎಂಪಿ ನೌಕರ ಸಾವು


ಬೆಂಗಳೂರು, ಡಿ. ೨- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗಾಳಿ ಆಂಜನೇಯ ಸ್ವಾಮಿ ವಾರ್ಡ್‌ನ ವರ್ಕ್ ಇನ್ಸ್‌ಪೆಕ್ಟರ್ ಬಾಲರಾಜ ಅವರು ನಿನ್ನೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ತಿರುಮಲ ತಿರುಪತಿ ದೇವರ ದರ್ಶನ ಮುಗಿಸಿ ವಾಪಸ್ ಬೆಂಗಳೂರಿಗೆ ಬರುವಾಗ ಪಲಮನೇರು ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಕಾರಿನಲ್ಲಿ ನಾಲ್ಕು ಮಂದಿ ಇದ್ದು, ಅವರೆಲ್ಲರೂ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೃತ ಬಾಲರಾಜ್ ಅವರಿಗೆ ೫೯ ವರ್ಷ ವಯಸ್ಸಾಗಿತ್ತು. ಪತ್ನಿ ಓರ್ವ ಪುತ್ರನನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರ ಇಂದು ಸಂಜೆ ಕನಕಪುರ ತಾಲ್ಲೂಕು ಹಾರೋಹಳ್ಳಿಯ ಗಾಣಾಳು ದೊಡ್ಡಿ ಗ್ರಾಮದಲ್ಲಿ ನೆರವೇರಲಿದೆ.
ಸಂತಾಪ: ಬಿಬಿಎಂಪಿಯಲ್ಲಿ ಪರಿವೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಬಾಲರಾಜ್ ಅವರ ನಿಧನಕ್ಕೆ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ. ಅಮೃತ್‌ರಾಜ್, ಕನ್ನಡ ಹೋರಾಟಗಾರ ವಾಟಾಳ್ ವೆಂಕಟೇಶ್ ಮತ್ತಿತರರು ಸಂತಾಪ ಸೂಚಿಸಿದ್ದಾರೆ.