ಅಪಘಾತ: ಫುಟ್‌ಬಾಲ್ ಆಟಗಾರ ಮೋನೀಶ್ ಸಾವು

ಬೆಂಗಳೂರು,ಜ.೨೨-ನಗರದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ರಾಜ್ಯಮಟ್ಟದ ಫುಟ್‌ಬಾಲ್ ಆಟಗಾರ ಮೋನೀಶ್ ಅವರು ಮೃತಪಟ್ಟಿದ್ದಾರೆ. ಕೆ.ಆರ್.ಪುರಂ ಸಂಚಾರ ಠಾಣೆ ವ್ಯಾಪ್ತಿಯ ರಾಮಮೂರ್ತಿ ನಗರ ಮೇಲ್ಸೇತುವೆ ಬಳಿ ಕಳೆದ ಜ.೨೧ರ ಮಧ್ಯರಾತ್ರಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಲಾರಿ ಡಿಕ್ಕಿಯಾಗಿ ಮೋನೀಶ್ (೨೭) ಕೊನೆಯುಸಿರೆಳೆದಿದ್ದಾರೆ.
ಬಾಬುಸಾಪಾಳ್ಯ ನಿವಾಸಿಯಾಗಿದ್ದ ಮೋನೀಶ್ ಅವರು ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ವೇಳೆ ಲಾರಿ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದರು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಕೆ.ಆರ್. ಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪರಿಕ್ರಮ ಎಫ್.ಸಿ, ಡೆಕ್ಕನ್ ಎಫ್.ಸಿ, ಯಂಗ್ ಚಾಲೆಂಜರ್ಸ್ ಎಫ್.ಸಿ ಸೇರಿದಂತೆ ವಿವಿಧ ಕ್ಲಬ್‌ಗಳ ಪರ ಕಣಕ್ಕಿಳಿದಿದ್ದ ಮೋನೀಶ್, ಆಲ್ ಇಂಡಿಯಾ ಫುಟ್‌ಬಾಲ್ ಫೆಡರೇಶನ್ (ಎಐಎಫ್‌ಎಫ್) ಡಿ ನಿಂದ ೨೦೧೯ರಲ್ಲಿ ಕೋಚಿಂಗ್ ಲೈಸೆನ್ಸ್ ಪಡೆದಿದ್ದರು. ಪ್ರಸ್ತುತ ಬೆಂಗಳೂರು ಡಿಸ್ಟ್ರಿಕ್ಟ್ ಫುಟ್‌ಬಾಲ್ ಅಸೋಸಿಯೇಷನ್ (ಬಿಡಿಎಫ್‌ಎ) ಎ ಡಿವಿಷನ್ ಲೀಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಂಗಳೂರು ಈಗಲ್ಸ್ ಎಫ್.ಸಿ ಪರ ಆಡುತ್ತಿದ್ದರು.
ಸಿಎಂ ಸಂತಾಪ:
ಫುಟ್‌ಬಾಲ್ ಆಟಗಾರ ಮೊನೀಶ್.ಕೆ ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ರಾಜ್ಯದ ಖ್ಯಾತ ಫುಟ್‌ಬಾಲ್ ಆಟಗಾರ ಮೊನೀಶ್.ಕೆ ಅವರ ನಿಧನದ ಸುದ್ದಿ ಕೇಳಿ ಬೇಸರವಾಯಿತು. ನಿನ್ನೆ ರಾತ್ರಿ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಗುಣಮುಖರಾಗುತ್ತಾರೆಂದು ನಂಬಿದ್ದೆ, ಈಗ ಆ ನಂಬಿಕೆ ಹುಸಿಯಾಗಿದೆ. ಕ್ರೀಡಾ ಬದುಕಿನಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕಿದ್ದ ಯುವ ಪ್ರತಿಭೆಯೊಂದು ಹೀಗೆ ಆರಂಭದಲ್ಲೇ ಅಂತ್ಯ ಕಂಡಿದ್ದು ಅತ್ಯಂತ ದುಃಖದ ವಿಚಾರ. ಮೃತ ಯುವಕನ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
ಡಿವೈಡರ್‌ಗೆ ಬೈಕ್ ಡಿಕ್ಕಿ:
ಮತ್ತೊಂದೆಡೆ ಡಿವೈಡರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಕುಳಿತಿದ್ದ ಸವಾರ ಸ್ಥಳದಲ್ಲೆ ಮೃತಪಟ್ಟಿರುವ ದುರ್ಘಟನೆ ಕಾಮಾಕ್ಷಿಪಾಳ್ಯದಲ್ಲಿ ನಡೆದಿದೆ. ಚಂದ್ರಶೇಖರ್ (೪೦) ಮೃತಪಟ್ಟ ಹಿಂಬದಿ ಸವಾರ. ಚಂದ್ರಶೇಖರ್ ಬಿಡದಿ ಸಮೀಪದ ಗಾಲ್ಪ್ ಕ್ಲಬ್‌ನಲ್ಲಿ ಕೋಚ್ ಆಗಿ ಕೆಲಸ ಮಾಡುತ್ತಿದ್ದರು. ಚಂದ್ರಶೇಖರ್ ತಮ್ಮ ಸ್ನೇಹಿತ ಕಿರಣ್ ಎಂಬಾತನೊಂದಿಗೆ ಬೈಕ್‌ನಲ್ಲಿ ಹೋಗುವಾಗ ಸುಮನಹಳ್ಳಿ ಡಿಪೋ ಮುಂದೆ ಅಪಘಾತ ನಡೆದಿದೆ. ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.