ಅಪಘಾತ ತಪ್ಪಿಸಲು ನಿಯಮ ಪಾಲಿಸಿ

ಬೀದರ್:ಜು.12: ರಸ್ತೆ ಅಪಘಾತಗಳನ್ನು ತಪ್ಪಿಸಲು ಸಾರ್ವಜನಿಕರು ತಪ್ಪದೆ ಸಂಚಾರ ನಿಯಮ ಪಾಲಿಸಬೇಕು ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ್ ಕಿವಿಮಾತು ಹೇಳಿದರು.

ರಸ್ತೆ ಅಪಘಾತ ತಡೆ ಮಾಸಾಚರಣೆ ಪ್ರಯುಕ್ತ ಜಿಲ್ಲಾ ಪೊಲೀಸ್ ವತಿಯಿಂದ ಇಲ್ಲಿಯ ಶಹಾಪುರ ಗೇಟ್ ಸಮೀಪದ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ ಸಂಚಾರ ನಿಯಮಗಳ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶೇ 75 ರಷ್ಟು ರಸ್ತೆ ಅಪಘಾತಗಳು ಚಾಲಕರ ನಿಷ್ಕಾಳಜಿಯಿಂದಾಗಿಯೇ ಸಂಭವಿಸುತ್ತಿವೆ. ಇವುಗಳಲ್ಲಿ 18 ರಿಂದ 35 ವರ್ಷಗಳ ಒಳಗಿನ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ದೇಶದಲ್ಲಿ 2022 ರಲ್ಲಿ ಸಂಭವಿಸಿದ 3.5 ಲಕ್ಷಕ್ಕೂ ಅಧಿಕ ರಸ್ತೆ ಅಪಘಾತಗಳಲ್ಲಿ 1.55 ಲಕ್ಷ ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 36,100 ಅಪಘಾತಗಳಲ್ಲಿ 9,857 ಮಂದಿ ಮೃತಪಟ್ಟಿದ್ದಾರೆ. ಶೇ 57 ರಷ್ಟು ಪ್ರಕರಣಗಳಿಗೆ ಅತಿವೇಗ, ಅಜಾಗರೂಕತೆ ಕಾರಣವಾಗಿದ್ದರೆ, ಶೇ 29 ರಷ್ಟು ಪ್ರಕರಣಗಳಿಗೆ ಹೆಲ್ಮೇಟ್ ಧರಿಸದಿರುವುದು ಕಾರಣವಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಅಪಘಾತ ಪ್ರಕರಣಗಳಲ್ಲಿ ವಾರ್ಷಿಕ ಸರಾಸರಿ 300 ರಿಂದ 325 ಸಾವುಗಳು ಸಂಭವಿಸುತ್ತಿವೆ. ಪ್ರಸಕ್ತ ವರ್ಷದ 6 ತಿಂಗಳಲ್ಲಿ 170 ಜನ ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಅಪಘಾತಗಳನ್ನು ನಿಯಂತ್ರಿಸುವುದು ಜಿಲ್ಲಾ ಪೊಲೀಸ್ ಗುರಿಯಾಗಿದೆ. ಈ ದಿಸೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಲ್. ಅವರ ಮಾರ್ಗದರ್ಶನದಲ್ಲಿ ಶಾಲಾ ಕಾಲೇಜು, ಸಾರ್ವಜನಿಕ ಸ್ಥಳಗಳಲ್ಲಿ ವೇದಿಕೆ ಕಾರ್ಯಕ್ರಮ, ಕರಪತ್ರ ವಿತರಣೆ, ಸೂಚನಾ ಫಲಕಗಳ ಅಳವಡಿಕೆ ಮೊದಲಾದವುಗಳ ಮೂಲಕ ಜಿಲ್ಲೆಯಾದ್ಯಂತ ಸಂಚಾರ ನಿಯಮಗಳ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ವಾಹನ ಸವಾರರು ನಿಗದಿತ ಮಿತಿಯಲ್ಲಿ ವಾಹನ ಚಲಾಯಿಸಬೇಕು. ದ್ವಿಚಕ್ರ ಓಡಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ನಾಲ್ಕು ಚಕ್ರಗಳ ವಾಹನ ಚಲಾಯಿಸುವಾಗ ಸೀಟ್ ಬೆಲ್ಟ್ ಧರಿಸಬೇಕು. ವಾಹನ ಚಲಾಯಿಸುವಾಗ ಮೊಬೈಲ್ ಫೋನ್ ಬಳಸಬಾರದು. ಸಂಚಾರ ಸಂಕೇತಗಳನ್ನು ಅನುಸರಿಸಬೇಕು. ಪಾಲಕರು ಅಪ್ರಾಪ್ತ ಮಕ್ಕಳಿಗೆ ವಾಹನ ಚಲಾಯಿಸಲು ಅವಕಾಶ ಕೊಡಬಾರದು ಎಂದು ಹೇಳಿದರು.

ಶಾಹೀನ್ ಶಿಕ್ಷಣ ಸಂಸ್ಥೆಯು ಮಕ್ಕಳಿಗೆ ಶಿಕ್ಷಣದ ಜತೆ ಸಂಚಾರ ನಿಯಮ ಸೇರಿ ಸಾಮಾನ್ಯ ಜ್ಞಾನವನ್ನೂ ಕೊಡುತ್ತಿದೆ. ಕಾಲೇಜು ಮೊಬೈಲ್, ಆಟೊಮೊಬೈಲ್, ಟ್ಯೂಷನ್, ಸಹ ಶಿಕ್ಷಣದಿಂದ ಮುಕ್ತವಾಗಿದೆ ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ತಿಳಿಸಿದರು.

ಜೀವ ಬಹಳ ಅಮೂಲ್ಯವಾಗಿದೆ. ಸಂಚಾರ ನಿಯಮಗಳು ಇರುವುದೇ ಜನರ ಪ್ರಾಣ ಉಳಿಸುವುದಕ್ಕಾಗಿ. ಹೀಗಾಗಿ ಪ್ರತಿಯೊಬ್ಬರೂ ಅವುಗಳನ್ನು ಪಾಲಿಸುವುದು ಬಹಳ ಅವಶ್ಯಕವಾಗಿದೆ ಎಂದು ಹೇಳಿದರು.

ಗಾಂಧಿಗಂಜ್ ಠಾಣೆ ಪೊಲೀಸ್ ಇನ್‍ಸ್ಪೆಕ್ಟರ್ ಹಣಮರೆಡ್ಡೆಪ್ಪ, ಸಂಚಾರ ಠಾಣೆ ಪೊಲೀಸ್ ಇನ್‍ಸ್ಪೆಕ್ಟರ್ ವಿಜಯಕುಮಾರ ಬಾವಗೆ, ಪಿಎಸ್‍ಐ ಸುರೇಶ ಭಾವಿಮನಿ, ಸಿಬ್ಬಂದಿ ಸಂಜುಕುಮಾರ, ಸತೀಶ, ಅವಿನಾಶ, ಸಿದ್ಧಾರೆಡ್ಡಿ ಇದ್ದರು.