ಅಪಘಾತ: ಇಬ್ಬರು ಸಾವು, ಓರ್ವನಿಗೆ ಗಾಯ

ಧಾರವಾಡ, ಏ ೧೨: ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಓರ್ವ ಗಾಯಗೊಂಡ ಘಟನೆ ಇಂದು ಸಂಜೆ ನಗರದಲ್ಲಿ ನಡೆದಿದೆ.

ಅಪಘಾತದಲ್ಲಿ ಮೃತರನ್ನು ದೇವರ ಹುಬ್ಬಳ್ಳಿ ನಿವಾಸಿ ಚರಣ ಮೌನೇಶ್ವರ ನಾಯಕ (17) ಹಾಗೂ ಎತ್ತಿನಗುಡ್ಡ ಗ್ರಾಮದ ನಿವಾಸಿ ಶೇಖು ಬಸಪ್ಪ ಹುದ್ದಾರ (37) ಎಂದು ಗುರುತಿಸಲಾಗಿದೆ.
ಅಪಘಾತದಲ್ಲಿ ಸಾಧನಕೇರಿ ನಿವಾಸಿ, ಕೆವಿಜಿ ಬ್ಯಾಂಕ್ ನೌಕರ ಅರವಿಂದ ಮಲಗೌಡ ಪಾಟೀಲ ಎಂಬುವರು ಗಾಯಗೊಂಡಿದ್ದಾರೆ.

ಇವರು ಇಲ್ಲಿನ ಬೆಳಗಾವಿ ರಸ್ತೆಯ ಕೆವಿಜಿ ಬ್ಯಾಂಕ್ ಹತ್ತಿರ ರಸ್ತೆಯ ಪಕ್ಕದಲ್ಲಿ ದ್ವಿಚಕ್ರ ವಾಹನದ ಬಳಿ ನಿಂತಿದ್ದರೆನ್ನಲಾಗಿದ್ದು, ಇದೇ ಸಂದರ್ಭದಲ್ಲಿ ಎದುರಿಗೆ ಬಂದ ಕಾರು ಇವರಿಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಇವರನ್ನು ಚಿಕಿತ್ಸೆಗೆಂದು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಿತ್ತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಚರಣ ಹಾಗೂ ಶೇಖು ಅಸುನೀಗಿದ್ದಾರೆ.

ಕಾರು ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಸಹೋದರ ವಿಜಯ್ ಕುಲಕರ್ಣಿ ಅವರದ್ದು ಎನ್ನಲಾಗಿದ್ದು, ಕಾರು ಹಾಗೂ ದ್ವಿಚಕ್ರ ವಾಹನಗಳು ಅಪಘಾತದ ರಭಸಕ್ಕೆ ನಜ್ಜುಗುಜ್ಜಾಗಿವೆ.
ಜಿಲ್ಲಾಸ್ಪತ್ರೆಯ ಬಳಿ ಸಾವನ್ನಪ್ಪಿದವರ ಕುಟುಂಬಸ್ತರ ಆಕ್ರಂದನ ಮುಗಿಲು ಮುಟ್ಟಿತ್ತು.

ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕಾರನ್ನು ವಶಪಡಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.