ಅಪಘಾತ: ಅಮೆಜಾನ್ ಮ್ಯಾನೇಜರ್ ಸಾವು

ಬೆಂಗಳೂರು,ಡಿ.೨೦- ಮಾಗಡಿ ರಸ್ತೆಯ ನೈಸ್ ರಸ್ತೆ ಜಂಕ್ಷನ್ ಬಳಿ ಇಂದು ಮುಂಜಾನೆ ನಿಂತಿದ್ದ ಲಾರಿಗೆ ಹಿಂದಿನಿಂದ ವೇಗವಾಗಿ ಬಂದ ಕಾರು ಡಿಕ್ಕಿ ಅಮೆಜಾನ್ ಕಂಪನಿಯ ಮ್ಯಾನೇಜರ್‌ರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹೆಚ್‌ಎಸ್‌ಆರ್ ಲೇಔಟ್‌ನ ಸಂತೋಷ್ (೩೫) ಮೃತಪಟ್ಟಿದ್ದು, ಹಲವು ವರ್ಷಗಳಿಂದ ಅವರು ಅಮೆಜಾನ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು.
ರಾತ್ರಿ ಕೆಲಸ ಮುಗಿಸಿ ಕಾರಿನಲ್ಲಿ ಮನೆಗೆ ಮುಂಜಾನೆ ೪.೧೫ರ ವೇಳೆ ಕಾರಿನಲ್ಲಿ ನೈಸ್ ರಸ್ತೆ ಜಂಕ್ಷನ್ ಬಳಿ ಹೋಗುತ್ತಿದ್ದಾಗ ಮಂಜು ಬೀಳುತ್ತಿದ್ದರಿಂದ ನಿಂತಿದ್ದ ಲಾರಿ ಸರಿಯಾಗಿ ಕಾಣದೇ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿದ್ದು ಸಂತೋಷ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸಂತೋಷ್ ಅವರ ಕುಟುಂಬದವರು, ಸ್ನೇಹಿತರು ಆಗಮಿಸಿದ್ದು, ಮೃತದೇಹವನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ ಎಂದು ಡಿಸಿಪಿ ಅನಿತಾ ಹದ್ದಣ್ಣವರ್ ತಿಳಿಸಿದ್ದಾರೆ.