ಅನ್‌ಲಾಕ್ 4.0 ನಾಳೆ ಜಾರಿ

ಬೆಂಗಳೂರು,ಜು.೧೮- ರಾಜ್ಯಾದ್ಯಂತ ನಾಳೆಯಿಂದ ಶೇಕಡಾ ೫೦ರ ಸಾಮರ್ಥ್ಯದಲ್ಲಿ ಚಿತ್ರಮಂದಿರ ತೆರೆಯಲು ಅವಕಾಶ ಹಾಗು ಜು.೨೬ರಿಂದ ಪದವಿ ಕಾಲೇಜುಗಳನ್ನು ಆರಂಭಿಸಲು ಸರ್ಕಾರ ಅನುಮತಿ ನೀಡಿದೆ.
ಕೊರೊನಾ ಸೋಂಕು ತಡೆಗೆ ಲಾಕ್‌ಡೌನ್ ಜಾರಿ ಮಾಡಿದ್ದರಿಂದ ಚಿತ್ರಮಂದಿರಗಳ ಮಾಲೀಕರು ಕಂಗಾಲಾಗಿದ್ದರು. ಈಗ ಚಿತ್ರಮಂದಿರಗಳ ತೆರವಿಗೆ ಸರ್ಕಾರ ಅನುಮತಿ ಕೊಟ್ಟಿರುವುದರಿಂದ ಕೊಂಚ ನಿರಾಳರಾಗಿದ್ದಾರೆ.
ರಾತ್ರಿ ಕರ್ಫ್ಯೂ ಅವಧಿಯನ್ನು ೧೦ ರಿಂದ ಬೆಳಗ್ಗೆ ೫ ರ ವರಗೆ ವಿಧಿಸಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಉನ್ನತಮಟ್ಟದ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ .

ರಾಜ್ಯದಲ್ಲಿ ಕೊರೊನಾ ಸೋಂಕು ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಿರಿಯ ಸಚಿವರು ಮತ್ತು ಅಧಿಕಾರಿಗಳ ಜೊತೆ ಅನ್ ಲಾಕ್ -೪ರ ಸಾಧಕ-ಭಾದಕಗಳ ಕುರಿತು ಸುದೀರ್ಘ ಚರ್ಚೆ ನಡೆಸಿದ ನಂತರ ಮೂರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

ಪಬ್ಬು ಈಜುಕೊಳದ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿದ ನಂತರ ಜನರ ಆರೋಗ್ಯದ ಹಿತದೃಷ್ಟಿಯಿಂದ ಸದ್ಯಕ್ಕೆ ತೆರೆಯದಿರಲು ಕೂಡ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ

ರಾಜ್ಯದಲ್ಲಿ ವಿವಿಧ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಚಿತ್ರಮಂದಿರಗಳ ಆರಂಭಕ್ಕೂ ಅವಕಾಶ ಮಾಡಿಕೊಡುವಂತೆ ವಾಣಿಜ್ಯ ಮಂಡಳಿಯಲ್ಲಿ ನಿಯೋಗ ಮಾಡಿದ್ದ ಮನವಿಯನ್ನು ಪುರಸ್ಕರಿಸಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಶೇಕಡ ೫೦ರಷ್ಟು ಸಾಮರ್ಥ್ಯದಲ್ಲಿ ಮಾತ್ರ ಚಿತ್ರಮಂದಿರ ಆರಂಭಿಸಲು ಸಮ್ಮತಿ ನೀಡಲಾಗಿದೆ

ಒಂದು ಡೋಸ್ ಪಡೆದವರಿ?ಗೆಗೆ ಲಸಿಕೆ:

ಜುಲೈ ೨೬ರಿಂದ ರಾಜ್ಯಾದ್ಯಂತ ಪದವಿ ಕಾಲೇಜು ಆರಂಭಿಸಲು ನಿರ್ಧರಿಸಲಾಗಿದ್ದು ಒಂದು ಡೋಸ್ ಲಸಿಕೆ ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ಕಾಲೇಜಿಗೆ ಬರಲು ಅವಕಾಶ ಮಾಡಿಕೊಡಲಾಗಿದೆ ಉಳಿದವರು ಮನೆಯಲ್ಲಿಯೇ ಆನ್ ಲೈನ್ ಪಾಠಗಳನ್ನು ಕೇಳಲು ಬಹುದಾಗಿದೆ.

ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ೧ ಡೋಸ್ ಲಸಿಕೆ ಪಡೆಯಬೇಕು. ಅಂಥವರಿಗೆ ಮಾತ್ರ ಅನುಮತಿ ಎನ್ನುವ ಷರತ್ತು ಕೂಡ ವಿಧಿಸಲಾಗಿದೆ

ಪಬ್, ಬಾರ್ ಗಳಲ್ಲಿ ಮದ್ಯ ಸೇವನೆಗೆ ಅನುಮತಿ ,
ಸಿನಿಮಾ, ಧಾರಾವಾಹಿಗಳಿಗೆ ಒಳಾಂಗಣ ಚಿತ್ರೀಕರಣಕ್ಕೆ ಅವಕಾಶ ,ಕ್ರೀಡಾಂಗಣಗಳಿಗೆ ಪ್ರೇಕ್ಷಕ ಸಹಿತ ಅನುಮತಿ, ಮಾರುಕಟ್ಟೆಗಳ ಒಳಗೆ ವ್ಯಾಪಾರ ವಹಿವಾಟಿಗೆ ಅವಕಾಶ ಕೊಡುವ ಸಾಧ್ಯತೆ ಕುರಿತು ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆಸಲಾಗಿದ್ದು ಸದ್ಯದ ಮಟ್ಟಿಗೆ ಇವುಗಳಿಗೆ ಅವಕಾಶ ನೀಡಬಾರದು ಎನ್ನುವ ನಿರ್ಧಾರ ತೆಗೆದುಕೊಳ್ಳಲಾಗಿದೆ

ಸಂತೆ, ಜಾತ್ರೆ, ದೇವರ ಉತ್ಸವ, ಬೃಹತ್ ಸಭೆಗಳಿಗೆ ನಿರ್ಬಂಧ ಮುಂದುವರಿಕೆ ಮುಂದುವರೆಸಲಾಗಿದೆ. ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವಥ್ ನಾರಾಯಣ, ಸಚಿವರಾದ ಆರ್ ಅಶೋಕ, ಅರವಿಂದ ಲಿಂಬಾವಳಿ, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್,ಪೋಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು

ಹಲವು ದಿನಗಳ ಬಳಿಕ ಚಿತ್ರಮಂದಿರ ತೆರೆಯಲು ಅವಕಾಶ

ಶೇಕಡ ೫೦ರಷ್ಟು ಸಾಮರ್ಥ್ಯಕ್ಕೆ ಮಾತ್ರ ಸೀಮಿತ

ನಾಳೆಯಿಂದಲೇ ಚಿತ್ರಮಂದಿರ ತೆರೆಯಲು ಅನುವು

ಜುಲೈ ೨೬ರಿಂದ ಪದವಿ ಕಾಲೇಜುಗಳು ಆರಂಭ

ಒಂದು ಡೋಸ್ ಲಸಿಕೆ ಪಡೆದ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಬಹುದು

ಲಸಿಕೆ ಪಡೆಯದ ವಿದ್ಯಾರ್ಥಿಗಳು ಆನ್ ಲೈನ್ ನಲ್ಲಿ ತರಗತಿಗೆ ಅವಕಾಶ

ರಾತ್ರಿ ಕರ್ಪ್ಯೂ ೧೦ ರಿಂದ ೫ ರ ವರೆಗೆ ವಿಧಿಸಲು ತೀರ್ಮಾನ

ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸಚಿವರು ಅಧಿಕಾರಿಗಳ ಸಭೆಯಲ್ಲಿ ನಿರ್ಧಾರ

ಹಂತ ಹಂತವಾಗಿ ತೆರವು

ರಾಜ್ಯದಲ್ಕಿ ಹಂತಹಂತವಾಗಿ ಲಾಕ್ ಡೌನ್ ನಿಯಮ ತೆರವು ಮಾಡಲಾಗುತ್ತಿದೆ. ಸಂಕಷ್ಟದಲ್ಲಿರುವ ಜನರಿಗೆ ಉದ್ಯೋಗ ಸಿಗಬೇಕು ಅನ್ನುವ ಉದ್ದೇಶದಿಂದ ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದು ಕಂದಾಯ ಸಚಿವ ಆರ್ ಅಶೋಕ ತಿಳಿಸಿದ್ದಾರೆ.

ನಾಳೆಯಿಂದ ಚಿತ್ರಮಂದಿರ ಆರಂಭಿಸಲು ಅವಕಾಶ ಮಾಡಿಕೊಡಲಾಗಿದೆ. ರಾತ್ರಿ ೯ ಗಂಟೆಯಿಂ ಇದ್ದ ಖರ್ಚು ಅವಧಿಯನ್ನು ೧೦ ಗಂಟೆಗೆ ಜಾರಿಗೆ ಬರಲಿದೆ ಎಂದು ತಿಳಿಸಿದರು.

ದೇವಸ್ಥಾನಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ ಪೂಜೆ ಪುನಸ್ಕಾರಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು. ಪಬ್ಬುಗಳನ್ನು ಪುನರಾರಂಭಿಸುವ ಕುರಿತಂತೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಈ ಸಂಬಂಧ ಮುಖ್ಯ ಕಾರ್ಯದರ್ಶಿಗಳು ಮಾರ್ಗಸೂಚಿ ಪ್ರಕಟಿಸಲಿದ್ದಾರೆ ಎಂದರು.