ಅನ್‌ಲಾಕ್ 2ನೇ ಹಂತಕ್ಕೆ ಸಿದ್ಧತೆ

ಬೆಂಗಳೂರು,ಜೂ.೧೫- ರಾಜ್ಯದಲ್ಲಿ ಕೊರೊನಾ ಸೋಂಕು ಇಳಿಮುಖವಾಗಿ ರಾಜಧಾನಿ ಬೆಂಗಳೂರು ಸೇರಿದಂತೆ ೨೦ ಜಿಲ್ಲೆಗಳಲ್ಲಿ ಮೊದಲ ಹಂತದ ಅನ್‌ಲಾಕ್ ಜಾರಿಮಾಡಿರುವ ರಾಜ್ಯಸರ್ಕಾರ ಜೂ. ೨೧ ರಿಂದ ಬೆಂಗಳೂರು ಸೇರಿದಂತೆ ಈ ಎಲ್ಲ ೨೦ ಜಿಲ್ಲೆಗಳಲ್ಲೂ ೨ನೇ ಹಂತದ ಅನ್‌ಲಾಕ್‌ಗೆ ತೀರ್ಮಾನಿಸಿದ್ದು, ೨ನೇ ಹಂತದ ಅನ್‌ಲಾಕ್ ಸಂದರ್ಭದಲ್ಲಿ ಯಾವೆಲ್ಲ ವಿನಾಯಿತಿಗಳನ್ನು ನೀಡಬಹುದು ಎಂಬ ಬಗ್ಗೆ ನೀಲನಕ್ಷೆಯನ್ನು ತಯಾರಿ ನಡೆದಿದೆ.
ಈ ೨ನೇ ಹಂತದ ಅನ್‌ಲಾಕ್ ಸಂದರ್ಭದಲ್ಲಿ ಬಸ್‌ಗಳ ಸಂಚಾರ, ಬಟ್ಟೆ, ಆಭರಣ ಸೇರಿದಂತೆ ಎಲ್ಲ ಅಂಗಡಿಗಳನ್ನು ತೆರೆಯಲು, ಹೋಟೆಲ್‌ಗಳಲ್ಲಿ ಗ್ರಾಹಕರು ಕುಳಿತು ಆಹಾರ ಸೇವಿಸಲು ಅವಕಾಶ, ಮಾಲ್‌ಗಳ ಆರಂಭ ಸೇರಿದಂತೆ ಹಲವು ವಾಣಿಜ್ಯ ವಹಿವಾಟುಗಳಿಗೆ ಅನುಮತಿ ನೀಡಲಿದೆ ಎಂದು ಮೂಲಗಳು ಹೇಳಿವೆ.
ಈ ೨ನೇ ಹಂತದ ಅನ್‌ಲಾಕ್‌ನಲ್ಲಿ ಪ್ರಮುಖವಾಗಿ ಸಾರಿಗೆ ಸಂಚಾರಕ್ಕೆ ಅವಕಾಶ ಮಾಡಿಕೊಡುವ ತೀರ್ಮಾನಗಳು ಆಗಿದ್ದು, ಶೇ. ೫೦ರ ಪ್ರಯಾಣಿಕರೊಂದಿಗೆ ಬಸ್‌ಗಳ ಸಂಚಾರಕ್ಕೆ ಅವಕಾಶ ನೀಡುವ ಸಾಧ್ಯತೆ ಇದೆ. ಖಾಸಗಿ ಬಸ್, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳ ಓಡಾಟಕ್ಕೆ ಅನುಮತಿ ಸಿಗಲಿದೆ. ಮೆಟ್ರೊ ರೈಲುಗಳ ಓಡಾಟಕ್ಕೆ ಅವಕಾಶ ಸಿಗುವ ಸಾಧ್ಯತೆಗಳು ಕಡಿಮೆ. ೩ನೇ ಹಂತದ ಲಾಕ್‌ಡೌನ್‌ನಲ್ಲಿ ಮೆಟ್ರೊ ಓಡಾಟಕ್ಕೆ ಹಸಿರು ನಿಶಾನೆ ತೋರುವ ಸಾಧ್ಯತೆ ಇದೆ.
ಹೋಟೆಲ್‌ಗಳಲ್ಲೂ ಶೇ. ೫೦ರಷ್ಟು ಗ್ರಾಹಕರ ಮಿತಿಯೊಂದಿಗೆ ಆಹಾರ ಸೇವಿಸಲು ಅವಕಾಶ ಸಿಗುವ ಸಾಧ್ಯತೆ ಇದ್ದು, ೨ನೇ ಹಂತದ ಅನ್‌ಲಾಕ್‌ನಲ್ಲಿ ಬಾರ್ ಅಂಡ್ ರೆಸ್ಟೋರೆಂಟ್‌ಗಳ ಮೇಲಿನ ನಿರ್ಬಂಧ ಮುಂದುವರೆಯಲಿದ್ದು, ಪಾರ್ಸೆಲ್‌ಗೆ ಮಾತ್ರ ಅವಕಾಶ ಸಿಗಲಿದೆ.
ಬಟ್ಟೆ, ಚಿನ್ನಾಭರಣ, ಮೊಬೈಲ್, ಎಲೆಕ್ಟ್ರಿಕ್ ವಸ್ತುಗಳ ಮಾರಾಟ ಸೇರಿದಂತೆ ಎಲ್ಲ ರೀತಿಯ ಅಂಗಡಿಗಳನ್ನು ತೆರೆಯಲು ಅನುಮತಿ ಸಿಗುವ ಸಾಧ್ಯತೆಗಳಿವೆ. ಹಾಗೆಯೇ ಸಲೂನ್, ಬ್ಯೂಟಿ ಪಾರ್ಲರ್‌ಗಳನ್ನು ತೆರೆಯಲು ಅವಕಾಶ ಸಿಗಲಿದೆ.
ಈ ಎಲ್ಲ ಅಂಗಡಿ-ಮುಂಗಟ್ಟುಗಳನ್ನು ತೆರೆಯಲು ಅವಕಾಶ ನೀಡಿದರೂ ಸಾಮಾಜಿಕ ಅಂತರ ಕಾಯ್ದುಕೊಂಡು ಬೆಳಿಗ್ಗೆ ೬ ರಿಂದ ಮಧ್ಯಾಹ್ನ ೩ರವರೆಗೆ ಮಾತ್ರ ಖರೀದಿಗೆ ಅವಕಾಶ ನೀಡುವ ಬಗ್ಗೆ ಚರ್ಚೆಗಳು ನಡೆದಿವೆ.
ಬೆಂಗಳೂರಿನ ಜನನಿಬಿಡ ಮಾರುಕಟ್ಟೆಗಳಾದ ಚಿಕ್ಕಪೇಟೆ, ಬಳೆಪೇಟೆ ಮತ್ತು ಕೆಆರ್ ಮಾರುಕಟ್ಟೆಗಳಲ್ಲಿ ಅನ್‌ಲಾಕ್-೨ ಸಮಯದಲ್ಲಿ ವಾರದಲ್ಲಿ ಮೂರು ದಿನ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡುವ ಬಗ್ಗೆಯೂ ಚರ್ಚೆಗಳು ನಡೆದಿವೆ.
ಸಿಎಂ ತೀರ್ಮಾನ
ಅನ್‌ಲಾಕ್-೨ನಲ್ಲಿ ಯಾವುದಕ್ಕೆಲ್ಲ ರಿಯಾಯಿತಿ, ಯಾವುದಕ್ಕೆಲ್ಲ ಅವಕಾಶ ನೀಡಬೇಕು ಎಂಬ ಬಗ್ಗೆ ಮುಖ್ಯಮಂಂತ್ರಿ ಯಡಿಯೂರಪ್ಪ ಅವರೇ ಅಂತಿಮ ತೀರ್ಮಾನ ಕೈಗೊಳ್ಳಲಿದ್ದು, ಶುಕ್ರವಾರ ಇಲ್ಲವೇ ಶನಿವಾರ ಮುಖ್ಯಮಂತ್ರಿಗಳು ತಜ್ಞರು ಹಾಗೂ ಸಚಿವರುಗಳ ಜತೆ ಸಭೆ ನಡೆಸಿ ಅನ್‌ಲಾಕ್-೨ ಜಾರಿ ಬಗ್ಗೆ ತೀರ್ಮಾನ ಮಾಡುವರು.
ಸೋಂಕು ಶೇ. ೫ಕ್ಕಿಂದ ಹೆಚ್ಚಿರುವ ೧೧ ಜಿಲ್ಲೆಗಳಲ್ಲಿ ಸೋಂಕು ಶೇ. ೫ಕ್ಕಿಂತ ಕಡಿಮೆಯಾದರೆ ಅಂತಹ ಜಿಲ್ಲೆಗಳಲ್ಲಿ ಲಾಕ್‌ಡೌನ್ ಸಡಿಲಿಸುವ ಬಗ್ಗೆಯೂ ಮುಖ್ಯಮಂತ್ರಿಗಳು ತೀರ್ಮಾನ ಕೈಗೊಳ್ಳಲಿದ್ದು, ಒಂದು ವೇಳೆ ಈ ೧೧ ಜಿಲ್ಲೆಗಳಲ್ಲಿ ಸೋಂಕು ಶೇ. ೫ಕ್ಕಿಂತ ಕಡಿಮೆಯಾಗದಿದ್ದರೆ ಲಾಕ್‌ಡೌನ್ ಮತ್ತೊಂದು ವಾರ ವಿಸ್ತರಣೆಯಾಗುವ ಸಾಧ್ಯತೆಗಳು ಇವೆ.

ಅನ್‌ಲಾಕ್-೨ ಯಾವುದಕ್ಕೆ ಅವಕಾಶ

  • ಶೇ. ೫೦ರ ಪ್ರಯಾಣಿಕರ ಮಿತಿಯೊಂದಿಗೆ ಬಸ್ ಸಂಚಾರಕ್ಕೆ ಅನುಮತಿ ಸಾಧ್ಯತೆ.
  • ಎಲ್ಲ ರೀತಿಯ ಅಂಗಡಿ-ಮುಂಗಟ್ಟು ತೆರೆಯಲು ಅವಕಾಶ.
  • ಮಾಲ್‌ಗಳ ಆರಂಭಕ್ಕೂ ಅನುಮತಿ ಸಾಧ್ಯತೆ.
  • ಹೋಟೆಲ್‌ಗಳಲ್ಲಿ ಶೇ. ೫೦ ರಷ್ಟು ಗ್ರಾಹಕರ ಮಿತಿಯೊಂದಿಗೆ ಆಹಾರ ಸೇವನೆಗೆ ಅವಕಾಶ.
  • ಖರೀದಿ ಅವಧಿ ವಿಸ್ತರಣೆ ಸಾಧ್ಯತೆ.
  • ಮಾರುಕಟ್ಟೆಗಳಲ್ಲಿ ವಾರಕ್ಕೆ ಮೂರು ದಿನ ಮಾತ್ರ ವ್ಯಾಪಾರಕ್ಕೆ ಅವಕಾಶ.
  • ಸಲೂನ್, ಬ್ಯೂಟಿ ಪಾರ್ಲರ್‌ಗೂ ಅವಕಾಶ ಸಾಧ್ಯತೆ.

ಅನ್‌ಲಾಕ್-೨ನಲ್ಲಿ ಯಾವುದಕ್ಕೆ ನಿರ್ಬಂಧ

  • ಬಾರ್ ಅಂಡ್ ರೆಸ್ಟೋರೆಂಟ್‌ಗಳ ಮೇಲಿನ ನಿರ್ಬಂಧ ಮುಂದುವರಿಕೆ.
  • ಮೆಟ್ರೊ ರೈಲು ಓಡಾಟಕ್ಕೆ ಅನುಮತಿ ಇಲ್ಲ.

ಸೋಂಕು ಕಡಿಮೆ ಇರುವ ರಾಜಧಾನಿ ಬೆಂಗಳೂರು ಸೇರಿದಂತೆ ಇತರೆಡೆ ೨ನೇ ಹಂತದ ಅನ್‌ಲಾಕ್ ಬಗ್ಗೆ ಪರಿಸ್ಥಿತಿ ನೋಡಿಕೊಂಡು ಇನ್ನು ೨-೩ ದಿನಗಳಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ರಾಜ್ಯದಲ್ಲಿ ಕೊರೊನಾ ಸೋಂಕು ಇಳಿಮುಖವಾಗುತ್ತಿದೆ. ಇವತ್ತು ನಾಳೆ ಪರಿಸ್ಥಿತಿಯನ್ನು ನೋಡಿಕೊಂಡು ೨ನೇ ಹಂತದಲ್ಲಿ ಯಾವುದಕ್ಕೆಲ್ಲ ವಿನಾಯಿತಿ ಕೊಡಬಹುದು ಎಂಬುದರ ಬಗ್ಗೆ ಯೋಚನೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದರು.