ಅನ್‌ಲಾಕ್ ಸಿಎಂ ನಿರ್ಧಾರ

ಬೆಂಗಳೂರು, ಜೂ. ೧- ರಾಜ್ಯದಲ್ಲಿ ಕೊರೊನಾ ಸೋಂಕಿನ ಪಾಸಿಟಿವಿಟಿ ದರ ಶೇ. ೫ಕ್ಕೆ ಬಂದ ನಂತರ ಲಾಕ್‌ಡೌನ್ ನಿರ್ಬಂಧಗಳನ್ನು ತೆರವು ಮಾಡಲು ತಜ್ಞರು ಸಲಹೆ ಮಾಡಿದ್ದಾರೆ. ಸದ್ಯ ಸೋಂಕು ಕಡಿಮೆಯಾಗಿದ್ದರೂ ಹಲವು ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ. ೫ಕ್ಕೆ ಬಂದಿಲ್ಲ. ಹಾಗಾಗಿ, ಲಾಕ್‌ಡೌನ್ ಮುಂದುವರೆಸುವ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಎಲ್ಲರೊಡನೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದರು.
ಕೊರೊನಾ ಸೋಂಕಿನ ಪಾಸಿಟಿವಿಟಿ ದರ ೫ಕ್ಕಿಂತ ಕಡಿಮೆಯಾದ ಮೇಲೆ ಲಾಕ್‌ಡೌನ್‌ನ್ನು ಏಕಾಏಕಿ ತೆರವು ಮಾಡದೆ ಅನ್‌ಲಾಕ್‌ನ್ನು ಹಂತ ಹಂತವಾಗಿ ಮಾಡುವಂತೆಯೂ ತಜ್ಞರು ತಮ್ಮ ವರದಿಯಲ್ಲಿ ಹೇಳಿದ್ದಾರೆ. ತಜ್ಞರ ವರದಿಯಾಧರಿಸಿಯೇ ಮುಖ್ಯಮಂತ್ರಿಗಳು ತೀರ್ಮಾನಗಳನ್ನು ಕೈಗೊಳ್ಳುವರು ಎಂದು ಬೆಂಗಳೂರಿನಲ್ಲಿಂದು ಸುದ್ದಿಗಾರರಿಗೆ ತಿಳಿಸಿದರು.
ಲಾಕ್‌ಡೌನ್-ಅನ್‌ಲಾಕ್ ಬಗ್ಗೆ ಯಾವುದೇ ಸಚಿವರುಗಳು ಏನೇ ಹೇಳಲಿ ಅಂತಿಮವಾಗಿ ನಮ್ಮ ನಾಯಕರಾದ ಯಡಿಯೂರಪ್ಪನವರೇ ತೀರ್ಮಾನ ತೆಗೆದುಕೊಳ್ಳುತ್ತಾರೆ. ಜನಹಿತದ ಅಭಿಪ್ರಾಯಗಳನ್ನು ಗಮನಿಸಿ ಅವರು ನಿರ್ಣಯ ಮಾಡುತ್ತಾರೆ. ನಾವ್ಯಾರು ನಿರ್ಧಾರ ತೆಗೆದುಕೊಳ್ಳೋಕೆ ಆಗೋದಿಲ್ಲ ಎಂದು ಅವರು ಹೇಳಿದರು.
ಕೊರೊನಾ ಪರೀಕ್ಷೆ, ಸಾವಿನ ಸಂಖ್ಯೆ ಯಾವುದನ್ನೂ ಮುಚ್ಚಿಡೋಕೆ ಸಾಧ್ಯವಿಲ್ಲ. ಎಲ್ಲವೂ ಐಸಿಎಂಆರ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡುತ್ತೇವೆ, ರಾಜ್ಯದಲ್ಲಂತೂ ಪಾರದರ್ಶಕತೆಯಿಂದ ಮಾಹಿತಿ ಕೊಡುತ್ತಿದ್ದೇವೆ. ಬೇರೆ ರಾಜ್ಯಗಳ ವಿಚಾರ ತಮಗೆ ಗೊತ್ತಿಲ್ಲ ಎಂದರು.
ವಿರೋಧ ಪಕ್ಷದ ನಾಯಕರು ಮಾಹಿತಿ ಕೇಳೋದು ಅವರ ಕರ್ತವ್ಯ. ಹಾಗೆಯೇ ಮಾಹಿತಿ ಕೊಡುವುದು ನಮ್ಮ ಜವಾಬ್ದಾರಿ. ಮಾಜಿ ಸಚಿವ ದೇಶ್‌ಪಾಂಡೆ ಸೇರಿದಂತೆ ಎಲ್ಲರೂ ಮಾಹಿತಿ ಕೇಳಿದರು, ನಾವು ಮಾಹಿತಿ ಕೊಟ್ಟಿದ್ದೇವೆ. ಮಾಹಿತಿ ಮುಚ್ಚಿಡಲಾಗಿದೆ ಎಂಬ ಮಾತುಗಳು ಬೇಸರ ತರಿಸಿವೆ ಎಂದರು.
ಬ್ಲಾಕ್ ಫಂಗಸ್ ರೋಗಕ್ಕೆ ೧೩೦೦ ವಯಲ್ಸ್ ನೀಡಿದ್ದಾರೆ. ಅದು ಸಾಕಾಗಲ್ಲ. ಈ ತಿಂಗಳ ೪ ಇಲ್ಲವೇ ೫ನೇ ತಾರೀಖೀನ ವೇಳೆಗೆ ಎಷ್ಟು ಔಷಧಿ ಕಳುಹಿಸುವುದಾಗಿ ಕೇಂದ್ರ ಸಚಿವ ಸದಾನಂದಗೌಡ ಹೇಳಿದ್ದಾರೆ ಎಂದರು.
ರಾಜ್ಯಕ್ಕೆ ನಿನ್ನೆ ೩ ಲಕ್ಷ ಡೋಸ್ ಕೊವ್ಯಾಕ್ಸಿನ್ ಲಸಿಕೆ ಬಂದಿದೆ. ಇದರಿಂದ ೪೫ ವರ್ಷ ಮೇಲ್ಪಟ್ಟವರಿಗೆ ೨ನೇ ಡೋಸ್ ಲಸಿಕೆಯನ್ನು ನೀಡಲಾಗುವುದು, ಜೂನ್ ಮೊದಲ ವಾರದೊಳಗೆ ಕೊವ್ಯಾಕ್ಸಿನ್ ೨ನೇ ಡೋಸ್ ಲಸಿಕೆಯನ್ನು ನೀಡುತ್ತೇವೆ ಎಂದು ನ್ಯಾಯಾಲಯಕ್ಕೆ ಹೇಳಿದ್ದೆವು. ಅದರಂತೆ ೨ನೇ ಡೋಸ್ ಲಸಿಕೆಯನ್ನು ನೀಡುವ ಕಾರ್ಯ ನಡೆದಿದೆ ಎಂದರು.