ಅನ್‌ಲಾಕ್ ಮಾಡದಿದ್ದರೆ ಕೋವಿಡ್‌ಗಿಂತ ಗಂಭೀರ ಪರಿಸ್ಥಿತಿ


ಉಡುಪಿ, ಜೂ.೧೦- ಕೋವಿಡ್ ಪರಿಸ್ಥಿತಿ ಸುಧಾರಿಸುತ್ತಿದೆ, ಸಂಪೂರ್ಣ ಲಾಕ್ ಡೌನ್ ಅನಗತ್ಯ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಾಸಕ ಭಟ್, ಕೆಲವು ನಿಬಂಧನೆಗಳೊಂದಿಗೆ ಜನಜೀವನ ಪ್ರಾರಂಭಿಸಬೇಕು. ಧಾರ್ಮಿಕ ಮತ್ತು ಸಾಮಾಜಿಕ, ರಾಜಕೀಯ ಕಾರ್ಯಕ್ರಮಗಳು ನಡೆಸುವುದು ಬೇಡ. ಕನಿಷ್ಠ ಮೂರು ತಿಂಗಳು ಈ ಚಟುವಟಿಕೆ ಬಂದ್ ಮಾಡಬೇಕು. ಜನಜೀವನಕ್ಕೆ ಅನುಕೂಲ ಮಾಡಿಕೊಡಬೇಕು. ಗೂಡಂಗಡಿ, ಹೋಟೆಲ್ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಅವಕಾಶ ಕೊಡಬೇಕು. ಜೂನ್ ೧೪ ನಂತರ ಲಾಕ್ ಡೌನ್ ಮುಂದುವರೆದರೆ ಆರ್ಥಿಕ ಸಂಕಷ್ಟವಾಗುತ್ತದೆ. ಆರ್ಥಿಕ ಪ್ಯಾಕೇಜು ಕೊಟ್ಟು ಪೂರೈಸುವುದಿಲ್ಲ. ಜೂನ್ ೧೪ರ ನಂತರ ಲಾಕ್ ಡೌನ್ ವಾಪಸ್ ಪಡೆಯಲು ಸಿಎಂಗೆ ಮನವಿ ಮಾಡುತ್ತೇವೆ. ಪಾಸಿಟಿವಿಟಿ ರೇಟ್ ಶೇಕಡ ೧೦ರಿಂದ ೧೫ ಕಡಿಮೆಯಾದ ಜಿಲ್ಲೆಗೆ ಲಾಕ್ ಡೌನ್ ಬೇಡ. ರಾಜ್ಯದಲ್ಲಿ ಪಾಸಿಟಿವ್ ಕೇಸ್ ೫೦ ಸಾವಿರದಿಂದ ೧೨ ಸಾವಿರಕ್ಕೆ ಇಳಿದಿದೆ. ಅನ್ ಲಾಕ್ ಮಾಡದಿದ್ದರೆ ಕೋವಿಡ್ ಗಿಂತ ಗಂಭೀರ ಪರಿಸ್ಥಿತಿ ಉಂಟಾಗುತ್ತದೆ ಎಂದು ಶಾಸಕ ರಘುಪತಿ ಭಟ್ ಹೇಳಿಕೆ ನೀಡಿದ್ದಾರೆ.