ಅನ್ವೇಷಣೆಗಳು ಕೇವಲ ಮಂಡನೆಗೆ ಸೀಮಿತವಾಗದಿರಲಿ

ದಾವಣಗೆರೆ.ಜ.೯: ಅನ್ವೇಷಣೆಗಳು ಕೇವಲ ಮಂಡನೆಗೆ ಸೀಮಿತವಾಗದೆ ವಿನೂತನ ಕೊಡುಗೆಗಳನ್ನು ದೇಶ, ಸಮಾಜಕ್ಕೆ ನೀಡುವಂತಾಗಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವಿಜ್ಞಾನ ವಿಷಯ ಪರಿವೀಕ್ಷಕಿ ಆರ್.ಬಿ.ವಸಂತಕುಮಾರಿ ಹೇಳಿದರು.ನಗರದ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ಆಯೋಜಿಸಿದ್ದ 30ನೇ ದಾವಣಗೆರೆ ಜಿಲ್ಲಾ ಮಟ್ಟದ ಮಕ್ಕಳ ರಾಷ್ಟ್ರೀಯ ವಿಜ್ಞಾನ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.ವೈಜ್ಞಾನಿಕ ಚಿಂತನೆಗಳನ್ನು ಮಂಡಿಸುವ ಇಂತಹ ಸಮಾವೇಶಗಳ ಮೂಲಕ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟಕ್ಕೂ ಹೆಸರು ತನ್ನಿ ಎಂದು ಹೇಳಿದರು.. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಗೌರವಾಧ್ಯಕ್ಷ ಡಾ.ಜೆ.ಬಿ.ರಾಜ್ ಮಾತನಾಡಿ ಥಾಮಸ್ ಆಲ್ವಾ ಎಡಿಸನ್ ಬಲ್ಬ್ ಕಂಡುಹಿಡಿಯುವ ಸಾವಿರ ಪ್ರಯತ್ನಗಳಲ್ಲಿ ಸೋತರೂ ನಿರಾಸೆ ಆಗುವುದಿಲ್ಲ. ಅಂತಹ ಸಹನೆ ಇಂದಿನ ವಿದ್ಯಾರ್ಥಿಗಳಲ್ಲಿ ಬೇಕು ಎಂದು ಸೂಕ್ಷ್ಮವಾಗಿ ಹೇಳಿದರು.ವಿಜ್ಞಾನಿಗಳು ಅನೇಕ ಸಂಶೋಧನೆಗಳನ್ನು ಕಂಡುಹಿಡಿದು ಜಗತ್ತಿಗೆ ನೀಡುತ್ತಾರೆ. ಹೆಸರು ಗಳಿಸುತ್ತಾರೆ, ಆದರೆ ದುಡ್ಡು ಮಾಡುವುದಿಲ್ಲ. ವಿದ್ಯಾರ್ಥಿಗಳೂ ದುರಾಸೆಗಳಿಂದ ದೂರವುಳಿದು ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.ವಿದ್ಯಾರ್ಥಿಗಳು ಅಧ್ಯಯನ ಹಾಗೂ ಜೀವನ ಎರಡರಲ್ಲೂ ಕ್ರಿಯಾಶೀಲತೆ ಉಳಿಸಿಕೊಳ್ಳಬೇಕು ಎಂದು ಬಾಲವಿಜ್ಞಾನಿ ಪ್ರಶಸ್ತಿ ಪುರಸ್ಕೃತೆ ಹಾಗೂ ರೇಡಿಯಾಲಜಿ ವಿಭಾಗದ ವಿದ್ಯಾರ್ಥಿನಿ ಡಾ. ಎ.ಟಿ.ಪ್ರೇರಣಾ ಹೇಳಿದರು.ಸಣ್ಣ ವಿಚಾರಗಳನ್ನು ತಲೆಯಿಂದ ದೂರ ಮಾಡಿ, ಸಮಾವೇಶದಲ್ಲಿ ಪ್ರದರ್ಶಿಸಿದ ಚಿಂತನೆ ಚಿಕ್ಕದು ಎಂಬ ಹಿಂಜರಿಕೆ ಕೈಬಿಟ್ಟು ಕ್ರಿಯಾಶೀಲರಾಗಿ ಯೋಚನೆ ಮಾಡಿ ಎಂದು ಕಿವಿಮಾತು ಹೇಳಿದರು.ವಿಜ್ಞಾನ ಕೇವಲ ಪಠ್ಯದಲ್ಲಿಲ್ಲ. ನಮ್ಮ ಸುತ್ತಲಿನ ಪರಿಸರದ ಪ್ರತಿ ವಸ್ತುಗಳಲ್ಲಿಯೂ ಇದೆ. ಅದನ್ನು ಓದುವುದು ಮಾತ್ರವಲ್ಲ, ಜೀವನದಲ್ಲಿ ಬಳಸುವುದು, ಅನುಷ್ಠಾನಗೊಳಿಸುವುದು ಬಲು ಅಗತ್ಯವಿದೆ ಎಂದರು.ವಿಜ್ಞಾನ ಸಮಾವೇಶಗಳಲ್ಲಿ ಭಾಗವಹಿಸುವಿಕೆ ಮುಖ್ಯ. ಒತ್ತಾಯಪೂರ್ವಕ ಪ್ರವೇಶ ನೀಡಿದರೂ ನಿಮ್ಮ ಸಾಮರ್ಥ್ಯ ಕಂಡುಕೊಳ್ಳಿ. ಸಿಕ್ಕ ಅವಕಾಶ ಸರಿಯಾಗಿ ಬಳಸಿಕೊಳ್ಳಿ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಬಿಐಇಟಿ ಪ್ರಾಧ್ಯಾಪಕ ಡಾ.ಎಂ.ಆರ್. ಜಗದೀಶ್, ವಿಜ್ಞಾನ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಎಂ.ಗುರುಸಿದ್ದಸ್ವಾಮಿ, ಖಜಾಂಚಿ ಅಂಗಡಿ ಸಂಗಮೇಶ್, ಜಿಲ್ಲಾ ಸಂಯೋಜಕ ಕೆ. ಸಿದ್ದೇಶ್, ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಕಾರ್ಯದರ್ಶಿ ಎಚ್. ಜಯಣ್ಣ ಇದ್ದರು.