‘ಅನ್ವಯಿಕ’ ವಿಜ್ಞಾನ, ಗಣಿತ ವಿಷಯದ ಮಾಸ ಪತ್ರಿಕೆ ವಿತರಣೆ

ಕಲಬುರಗಿ,ಡಿ.1: ವಿಜ್ಞಾನ ವಿಷಯದಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುತ್ತಿರುವ ಕಮಲಾಪುರ ತಾಲೂಕಿನ ಭೂಷಣಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿಜ್ಞಾನ ಶಿಕ್ಷಕ ಮಲ್ಲಿಕಾರ್ಜುನ ಎಸ್.ಸಿರಸಗಿ ಅವರ ಪ್ರಧಾನ ಸಂಪಾದಕತ್ವದಲ್ಲಿ ‘ಅನ್ವಯಿಕ’ ಎಂಬ ವಿಜ್ಞಾನ ಮತ್ತು ಗಣಿತ ವಿಷಯಗಳುಳ್ಳ ಮಾಸ ಪತ್ರಿಕೆಯನ್ನು ಗುರುವಾರ ಆರಂಭಿಸಲಾಗಿದ್ದು, ಶುಕ್ರವಾರ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲಾಯಿತು.
ಮಲ್ಲಿಕಾರ್ಜುನ ಎಸ್.ಸಿರಸಗಿ ಮಾತನಾಡಿ, ನಮ್ಮ ಭಾಗದ ಮಕ್ಕಳಿಗೆ ವಿಜ್ಞಾನ ಮತ್ತು ಗಣಿತ ವಿಷಯಗಳ ಬಗ್ಗೆ ಇರುವ ಭಯ ನಿವಾರಿಸಲು, ಹೆಚ್ಚಿನ ಜ್ಞಾನ ಬರಲು, ವಿಷಯದ ಆಸಕ್ತಿ ಹೆಚ್ಚಿಸಲು, ವಿಜ್ಞಾನ ಜನಸಮುದಾಯಕ್ಕೆ ಮುಟ್ಟಿಸಬೇಕು ಎಂಬ ಉದ್ದೇಶದಿಂದ ಇದನ್ನು ಪ್ರಾರಂಭಿಸಲಾಗಿದ್ದು, ಜಿಲ್ಲೆಯ ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಉಪನ್ಯಾಸಕ ಎಚ್.ಬಿ.ಪಾಟೀಲ, ನಿವೃತ್ತ ಕೃಷಿ ಅಧಿಕಾರಿ ಶಿವಯೋಗಪ್ಪ ಬಿರಾದಾರ, ಶಾಲೆಯ ಮುಖ್ಯ ಶಿಕ್ಷಕಿ ಸುಮಿತಾದೇವಿ ವಗ್ಗೆ, ಶಿಕ್ಷಕರಾದ ಜಗನಾಥ ರಾಯಕೋಡ್, ಸೋಮಶೇಖರ ಮರಪಳ್ಳಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.