ಅನ್ಯ ಭಾಷೆ ನಾಮಫಲಕ ತೆರವಿಗೆ ಆಗ್ರಹ

(ಸಂಜೆವಾಣಿ ವಾರ್ತೆ)
ಬ್ಯಾಡಗಿ,ಜು20: ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ತಾಲೂಕ ಘಟಕದ ವತಿಯಿಂದ ಪಟ್ಟಣದಲ್ಲಿ ಎಪಿಎಂಸಿ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ತೆಲುಗು ಮತ್ತು ಇಂಗ್ಲೀಷ್ ಭಾಷೆ ಸೇರಿದಂತೆ ಅನ್ಯ ಭಾಷೆಗಳು ರಾರಾಜಿಸುತ್ತಿದ್ದು, ಅಂತಹ ನಾಮಫಲಕಗಳನ್ನು ತೆರವುಗೊಳಿಸಿ ಕನ್ನಡ ಭಾಷೆ ಅನುಷ್ಠಾನಕ್ಕೆ ಆಗ್ರಹಿಸಿ ಬುಧವಾರ ತಾಲೂಕ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರಲ್ಲದೇ ಆಗಸ್ಟ್ 10ರೊಳಗಾಗಿ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ಜಿಲ್ಲಾ ಸಮಿತಿ ಅಧ್ಯಕ್ಷ ರಾಮು ತಳವಾರ ಅವರು, ಬ್ಯಾಡಗಿ ಪಟ್ಟಣವು ವಿಶ್ವವಿಖ್ಯಾತ ಮೆಣಸಿನಕಾಯಿ ಮಾರುಕಟ್ಟೆಯನ್ನು ಹೊಂದಿದ್ದು, ಮಾರುಕಟ್ಟೆಯಲ್ಲಿ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿ ತೆಲುಗು ತಮಿಳು ಇಂಗ್ಲಿಷ್ ಭಾಷೆ ಸೇರಿದಂತೆ ಅನ್ಯ ಭಾಷೆಗಳನ್ನು ಬಳಸಿ ನಾಮಫಲಕಗಳನ್ನು ಅಳವಡಿಸಲಾಗಿದೆ. ಈ ಬಗ್ಗೆ ಕನ್ನಡ ಪರ ಸಂಘಟನೆಗಳು ಹಲವು ಬಾರಿ ತಾಲೂಕಾಡಳಿತದ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗಿರುವುದಿಲ್ಲ, ಈ ಬಗ್ಗೆ ಆಗಸ್ಟ್ 10ರೊಳಗಾಗಿ ನಾಮಫಲಕಗಳನ್ನು ತೆರೆವುಗೊಳಿಸದಿದ್ದರೆ ಅನ್ಯ ಭಾಷೆಗಳ ನಾಮಫಲಕಗಳಿಗೆ ಮಸಿ ಬಳೆಯುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು.

ತಾಲೂಕಾಧ್ಯಕ್ಷ ಮಂಜುನಾಥ ದಾನಪ್ಪನವರ ಮಾತನಾಡಿ, ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಪ್ರಥಮ ಆದ್ಯತೆಯನ್ನು ನೀಡಬೇಕು. ಅನ್ಯ ಭಾಷೆಯ ನಾಮಫಲಕಗಳನ್ನು ಕನ್ನಡ ಭಾಷೆಗಿಂತ ಹೆಚ್ಚಾಗಿ ರಾರಾಜಿಸುವಂತೆ ಮಾಡುತ್ತಿರುವುದು ಕನ್ನಡತನಕ್ಕೆ ಅವಮಾನ ಮಾಡಿದಂತೆ, ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ತಾಲೂಕಾಡಳಿತವು ಈ ಬಗ್ಗೆ ನಿರ್ಲಕ್ಷ್ಯತನವನ್ನು ತೋರದೇ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡುವ ನಿಟ್ಟಿನಲ್ಲಿ ಶೀಘ್ರವೇ ಕಠಿಣ ಕ್ರಮವನ್ನು ವಹಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಹಿಳಾ ಸಮಿತಿ ಜಿಲ್ಲಾಧ್ಯಕ್ಷೆ ಸುಮಾ ಪುರದ, ಉಪಾಧ್ಯಕ್ಷೆ ಪ್ರೇಮಾ ಮುದಿಗೌಡ್ರ, ತಾಲೂಕಾಧ್ಯಕ್ಷೆ ಚನ್ನಮ್ಮ ಕುರಿಗೆರ, ವೀರೇಶ ಹಡಪದ, ಉಮೇಶ ಮುದಿಗೌಡ್ರ, ಶಿವಪ್ಪ ಬಳಲಕೊಪ್ಪ, ವಿನಾಯಕ ಬಡಿಗೇರ, ಸುಮಿತ್ರ ಕರಡಿ, ಶಿವಾನಂದ ಚಿಕ್ಕಳ್ಳಿ, ವೀರಭದ್ರಪ್ಪ ಹರಿಕಟ್ಟಿ ನಿಂಗಪ್ಪ ಕಚವಿ, ಹೊನ್ನಮ್ಮ ಕರಡಿ, ಲಲಿತಾ ಮತ್ತೂರ, ರೇಣುಕಾ ಕೊಪ್ಪದ, ಸವಿತಾ ಬಡಿಗೇರ, ಬಸವರಾಜ ಬಳೆಗಾರ, ಅನ್ನಪೂರ್ಣ ಬಡಿಗೇರ, ಕರಬಸಪ್ಪ ಮೇಗಳಮನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.