ಅನ್ಯ ಕೆಲಸಗಳಿಗೆ ಶಿಕ್ಷಕರ ನಿಯೋಜನೆ ರದ್ದುಪಡಿಸುವ ಹೊಸ ಸುತ್ತೋಲೆಗೆ ಅಮರನಾಥ್ ಪಾಟೀಲ್ ಆಗ್ರಹ

ಕಲಬುರಗಿ,ಆ.18: ಶಿಕ್ಷಕರಿಗೆ ಶೈಕ್ಷಣಿಕ ಚಟುವಟಿಕೆಗಳನ್ನು ಹೊರತುಪಡಿಸಿ ಬಿಸಿಯೂಟ ಯೋಜನೆ ಸೇರಿದಂತೆ ಅನ್ಯ ಕೆಲಸಗಳಿಗೆ ಬಳಕೆ ಮಾಡದಂತೆ ರಾಜ್ಯ ಸರ್ಕಾರವು ಹೊಸ ಸುತ್ತೋಲೆಯನ್ನು ಹೊರಡಿಸಬೇಕು ಎಂದು ರಾಜ್ಯ ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ, ಬಿಜೆಪಿಯ ಹಿರಿಯ ಮುಖಂಡ ಅಮರನಾಥ್ ಪಾಟೀಲ್ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಕರಿಗೆ ಕಲಿಕಾ ಚಟುವಟಿಕೆಗಳಿಗೆ ಸಮಯ ನಿಗದಿ ಮಾಡಬೇಕು. ಆದರೆ ಮಧ್ಯಾಹ್ನ ಬಿಸಿಯೂಟ, ಸಮವಸ್ತ್ರ, ಪಠ್ಯಪುಸ್ತಕ, ಕಟ್ಟಡ ಮೇಲುಸ್ತುವಾರಿ, ಜನಗಣತಿ, ಚುನಾವಣಾ, ಜಾತಿ ಗಣತಿ ಮುಂತಾದ ಅನ್ಯ ಕೆಲಸಗಳಿಗೆ ನಿಯೋಜಿಸುವ ಮೂಲಕ ಅವರೆಲ್ಲ ಮಾನಸಿಕವಾಗಿ ಕುಗುತ್ತಿದ್ದಾರೆ. ಇದರಿಂದ ಗುಣಾತ್ಮಕ ಶಿಕ್ಷಣ ಸಿಗುತ್ತಿಲ್ಲ. ಆದ್ದರಿಂದ ಅದಮ್ಯ ಚೇತನ, ಇಸ್ಕಾನ್ ಸಂಸ್ಥೆ ಮೂರನೇ ವ್ಯಕ್ತಿಯ ಏಜೆನ್ಸಿ ಮೂಲಕ ನಿರ್ವಹಣೆ ಮಾಡಬೇಕು ಇಲ್ಲವೇ ನಿರುದ್ಯೋಗಿ ಪದವೀಧರರಿಗೆ ನಿಯೋಜಿಸಬೇಕು ಎಂದು ಆಗ್ರಹಿಸಿದರು.
ಬಿಸಿಯೂಟ ಯೋಜನೆಯು ಈಗಾಗಲೇ ಒಂದರಿಂದ 8ನೇ ತರಗತಿಯವರೆಗೆ ಜಾರಿಯಾಗಿತ್ತು. ಈಗ ಯೋಜನೆಯನ್ನು 9 ಮತ್ತು ಹತ್ತನೇ ತರಗತಿಯವರೆಗೂ ವಿಸ್ತರಿಸಿದ್ದು ಅತ್ಯಂತ ಸ್ವಾಗತಾರ್ಹವಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ಅಭಿವೃದ್ಧಿ ಹೊಂದುವುದರಲ್ಲಿ ಎರಡು ಮಾತೇ ಇಲ್ಲ. ಯೋಜನೆಯ ಜಾರಿಯ ಸಂದರ್ಭದಲ್ಲಿ ಇದರ ಪರಿಣಾಮ ಮತ್ತು ನಿರ್ವಹಣೆಯ ಸಂದರ್ಭದಲ್ಲಿ ಶಿಕ್ಷಕರಿಗೆ ಸರಿಯಾದ ದಿಕ್ಕು ತೋಚುತ್ತಿಲ್ಲ ಎಂದು ಅವರು ಹೇಳಿದರು.
ಬಿಸಿಯೂಟ ಯೋಜನೆಯ ಜವಾಬ್ದಾರಿಯನ್ನು ಮುಖ್ಯ ಗುರುಗಳಿಗೆ ಹಾಗೂ ಶಿಕ್ಷಕರಿಗೆ ಜಂಟಿಯಾಗಿ ವಹಿಸಲಾಗಿದೆ. ಈ ವ್ಯವಸ್ಥೆ ಜಾರಿಗೆ ತರಬೇಕಾದರೆ ಪ್ರತಿನಿತ್ಯ ತರಕಾರಿ ಮಾರುಕಟ್ಟೆ, ಬಾಂಡೆ ಖರೀದಿಸಬೇಕು. ಧವಸ, ಧಾನ್ಯಗಳು, ತರಕಾರಿ, ದಿನಸಿಗಳು ಹಾಗೂ ಮೊಟ್ಟೆಗಳನ್ನು ತರಬೇಕಾಗುತ್ತದೆ. ಮೊಟ್ಟೆಗಳು ಎಲ್ಲಿ ಸಿಗುತ್ತವೆ ಎಂಬುದು ಎಲ್ಲರಿಗೂ ಗೊತ್ತು. ಹೀಗಾಗಿ ಶಿಕ್ಷಕರು ಸಾಕಷ್ಟು ಪರಿಣಾಮಗಳನ್ನು ಎದುರಿಸುತ್ತಾರೆ. ಇದರಿಂದಾಗಿ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಭಾರೀ ಹೊಡೆತ ಬೀಳುತ್ತಿದೆ. ಅದರಲ್ಲಿಯೂ ಮೊದಲೇ ಕಲ್ಯಾಣ ಕರ್ನಾಟಕದಲ್ಲಿ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿದೆ. ಶೈಕ್ಷಣಿಕ ಫಲಿತಾಂಶ ಕುಸಿಯುತ್ತಿದೆ. ಹಾಗಾಗಿ ಶಿಕ್ಷಕರನ್ನು ಪಾಠ ಬೋಧನೆ ಹೊರತುಪಡಿಸಿ ಬೇರೆ ಕೆಲಸ ಕಾರ್ಯಗಳಿಗೆ ಯಾವುದೇ ಕಾರಣಕ್ಕೂ ಬಳಕೆ ಮಾಡಿಕೊಳ್ಳಬಾರದು ಎಂದು ಅವರು ಒತ್ತಾಯಿಸಿದರು.
ಇನ್ನು ಬಿಸಿಯೂಟ ಯೋಜನೆಯು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಶಿಕ್ಷಕರಿಗೆ ಕಡಿಮೆ ಅನುದಾನ ನೀಡಿ, ಅದರಲ್ಲಿಯೇ ಯೋಜನೆ ಜಾರಿ ಮಾಡಿದರೆ ಅದು ಸಫಲವಾಗುವುದಿಲ್ಲ. ಇದರಿಂದಾಗಿ ಧವಸ, ಧಾನ್ಯಗಳು, ಮೊಟ್ಟೆ ಖರೀದಿ ಸೇರಿದಂತೆ ಕಳಪೆ ಮಟ್ಟದ ಖರೀದಿಯನ್ನು ಕೈಗೊಳ್ಳುವ ಮೂಲಕ ಕಳಪೆ ಬಿಸಿಯೂಟ ಸಿಗುವಂತಾಗುತತದೆ. ಈಗಾಗಲೇ ಅನೇಕ ಕಡೆಗಳಲ್ಲಿ ಕೊಳೆತ ಮೊಟ್ಟೆಗಳು ಪೂರೈಕೆಯಾಗಿರುವ ಕುರಿತು ವರದಿಗಳು ಆಗಿವೆ. ಆದ್ದರಿಂದ ರಾಜ್ಯ ಸರ್ಕಾರವು ಹೀಗಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಮೇಲ್ಮನೆಗೆ ಸ್ಪರ್ಧೆ: ಕಳೆದ ಬಾರಿಯ ಈಶಾನ್ಯ ವಲಯ ಪದವೀಧರ ಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್‍ಗೆ ಜರುಗಿದ ಚುನಾವಣೆಯಲ್ಲಿ ನನಗೆ ಪಕ್ಷದ ವರಿಷ್ಠರು ಟಿಕೆಟ್ ಕೊಡದೇ ಇದ್ದುದರಿಂದ ಸ್ಪರ್ಧಿಸಿರಲಿಲ್ಲ. ಈ ಬಾರಿ ನಾನು ಸ್ಪರ್ಧಿಸಲು ಇಚ್ಛಿಸಿದ್ದೇನೆ ಎಂದು ಅಮರನಾಥ್ ಪಾಟೀಲ್ ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಈಗಾಗಲೇ ನಾನು ಎರಡು ಬಾರಿ ರಾಜ್ಯ ವಿಧಾನ ಪರಿಷತ್ ಸದಸ್ಯನಾಗಿ ಈ ಭಾಗದ ಪದವೀಧರರ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಬಿಜೆಪಿ ವರಿಷ್ಠರು ನಿರ್ಧರಿಸಿದರೆ ನಾನು ಈ ಬಾರಿ ಸ್ಪರ್ಧೆ ಮಾಡುವುದಾಗಿ ಅವರು ಹೇಳಿದರು.
ಈಶಾನ್ಯ ಪದವೀಧರರ ಮತದಾರರ ನೊಂದಣಿ ಕಾರ್ಯ ಈಗಾಗಲೇ ಆರಂಭಗೊಂಡಿದೆ. ಆದ್ದರಿಂದ ಪದವೀಧರರು ಫಾರಂ ನಂಬರ್ 18 ಪಡೆದು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಬೇಕು ಎಂದು ಅವರು ಕೋರಿದರು. ಸುದ್ದಿಗೋಷ್ಠಿಯಲ್ಲಿ ಮುರುಗೇಂದ್ರ ವೀರಶೆಟ್ಟಿ, ಹರ್ಷವರ್ಧನ್ ಗೂಗಲೆ, ಎಂ.ವಿ. ಧುತ್ತರಗಾಂವ್, ಬಾಬುರಾವ್ ಹಾಗರಗುಂಡಗಿ ಮುಂತಾದವರು ಉಪಸ್ಥಿತರಿದ್ದರು.