ಅನ್ಯ ಊರುಗಳ ಕೊರೋನಾ ಶವಗಳ ಸಂಸ್ಕಾರ ಮಾಡದಂತೆ ಮನವಿ

ಕಂಪ್ಲಿ, ಮೇ.21- ಪಟ್ಟಣದ ತುಂಗಭದ್ರಾ ನದಿ ಬಳಿಯ ಕಂಪ್ಲಿ-ಕೋಟೆ ಪ್ರದೇಶದಲ್ಲಿರುವ ಸ್ಮಶಾನದಲ್ಲಿ ಕಳೆದ ಕೆಲ ದಿನಗಳಿಂದ ಅನ್ಯ ಊರುಗಳ ಸೋಂಕಿತರ ಶವಗಳನ್ನು ಸಂಸ್ಕಾರ ಮಾಡುತ್ತಿದ್ದು ಇದನ್ನು ಕೂಡಲೆ ತಡೆಗಟ್ಟುವಂತೆ ಆಗ್ರಹಿಸಿ ಕೋಟೆ ಪ್ರದೇಶದ ಮುಖಂಡರು ಶುಕ್ರವಾರ ತಹಸಿಲ್ ಕಚೇರಿ ಆವರಣದಲ್ಲಿ ತಹಸೀಲ್ದಾರ್ ಗೌಸಿಯಾಬೇಗಂ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಕೆ ಬಳಿಕ ಬಿಎಸ್ ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಣ್ಣೂರು ನಾಗರಾಜ ಮಾತನಾಡಿ, ಸದ್ಯ ಎಲ್ಲೆಡೆ ಕೊರೋನಾ ಸೋಂಕಿಗೆ ಬಲಿಯಾಗುತ್ತಿರು ಪ್ರಕರಣಗಳು ಹೇರಳವಾಗಿವೆ. ಅಂತೆಯೇ ಕಂಪ್ಲಿ ತಾಲೂಕಿನಲ್ಲಿಯೂ ಕೊರೋನಾ ಸಾವಿನ ಸಂಖ್ಯೆ ಹೆಚ್ಚುತ್ತಿದ್ದು, ಸೋಂಕಿನಿಂದ ಮೃತರಾದವರ ಮೃತದೇಹಗಳನ್ನು ಹೆಚ್ಚಾನುಹೆಚ್ಚಾಗಿ ಕಂಪ್ಲಿ ಕೋಟೆ ಪ್ರದೇಶದ ಸ್ಮಶಾನದಲ್ಲಿ ಊಳುವುದು ಹಾಗು ಸುಡಲಾಗುತ್ತಿದೆ. ಹೀಗೆ ಸುಡಲಾದ ಶವಗಳು ಅರೆಬರೆ ಸುಟ್ಟಿದ್ದು ಅಥವಾ ನಾಯಿ ನರಿಗಳು ಹೂತ್ತಿಟ್ಟ ಹೆಣಗಳನ್ನು ಹೊರಗೆಳೆದು ಹಾಕುವ ಸನ್ನಿವೇಶ ಸೃಷ್ಟಿಯಾಗಿದೆ. ಇದರಿಂದ ಕೋಟೆ ಪ್ರದೇಶದ ಜನರು ಸಾಕಲಾದ ನಾಯಿಗಳು ಸ್ಮಶಾನದಲ್ಲಿ ಹೊರಬಿದ್ದ ಹೆಣಗಳು ಹಾಗು ಅರೆಬರೆ ಸುಟ್ಟ ಶವಗಳ ತುಣುಕುಗಳನ್ನು ಬಾಯಿಯಲ್ಲಿ ಕಚ್ಚಿಕೊಂಡು ಊರಲ್ಲಿ ತಂದು ಬೀಸಾಡುತ್ತಿವೆ‌. ಇದರಿಂದ ಅಲ್ಲಿನ ನಿವಾಸಿಗಳಿಗೆ ಹೊಸ ತಲೆಬೇನೆ ಸೃಷ್ಟಿಯಾದಂತಾಗಿದ್ದು, ಕೊರೋನಾ ಸೇರಿದಂತೆ ಅನ್ಯ ರೀತಿಯ ಸಾಂಕ್ರಾಮಿಕ ಕಾಯಿಲೆಗಳು ಹಬ್ಬುವ ಭಯ ಶುರುವಾಗಿದೆ. ಹೀಗಾಗಿ, ಕಂಪ್ಲಿ-ಕೋಟೆಯ ಸ್ಮಶಾನದಲ್ಲಿ ಹೂಳಲು ಹಾಗು ಸುಡಲು ಈ ಮೊದಲಿನಿಂದ ಅನುಮತಿಸಲಾಗಿದ್ದ ಸಮುದಾಯಕ್ಕೆ ಸೇರಿದ ಮೃತ ದೇಹಗಳನ್ನು ಮಾತ್ರ ಸಂಸ್ಕಾರ ಮಾಡಲು ಅವಕಾಶ ನೀಡಬೇಕು. ಬೇರೆ ಊರುಗಳಿಗೆ ಸೇರಿದ ಜನರ ಹಾಗು ಕೊರೋನಾ ಸೋಂಕಿತರ ಶವಗಳ ಸಂಸ್ಕಾರಕ್ಕೆ ನಿರ್ಬಂಧ ಹೇರಬೇಕು. ಅಲ್ಲದೇ ಈಗಾಗಲೇ ಕೊರೋನಾ ಸೋಂಕಿತರ ಮೃತದೇಹಗಳನ್ನು ಶವಸಂಸ್ಕಾರ ಮಾಡಲಾಗಿದ್ದು ಆ ಜಾಗಗಳಲ್ಲಿ ಬ್ಲೀಚಿಂಗ್ ಪೌಡರ್ ಸಿಂಪರಣೆ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹಬ್ಬದಂತೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಲಾಯಿತು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಕಂಪ್ಲಿ-ಕೋಟೆ ಪ್ರದೇಶದ ಮುಖಂಡರಾದ ಕಟ್ಟೆ ಸಣ್ಣ ದುರುಗಪ್ಪ, ಕಂಬತ್ ಸಿದ್ದಪ್ಪ, ಫಣಿ ಸೋಮಪ್ಪ, ಶೆರಗಾರ ನಾಗರಾಜ,ಕೋಟೆ ಮ್ಯಾಗಳ ಹನುಮಂತಪ್ಪ, ಅದ್ದಪ್ಪ ನಾಗಲಾರೆಪ್ಪ, ಕಂಬತ್ ಕೃಷ್ಣ,ಲಡ್ಡು ಹೊನ್ನೂರ್ ವಲಿ ಸೇರಿದಂತೆ ಅನೇಕರಿದ್ದರು.