ಅನ್ಯೋನ್ಯತೆ ಹಾಗು ಐಕ್ಯತೆ ಜೀವನಕ್ಕೆ ಮಹತ್ವ ನೀಡಿಃ ಹಾಸಿಂಪೀರ

ವಿಜಯಪುರ, ಜ.1-ಗ್ರಾಮ ಪಂಚಾಯತ್ ಚುನಾವಣೆ ಆಯ್ಕೆ ಪ್ರಕ್ರಿಯೆ ಮುಗಿದು ಹೋಗಿದೆ. ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ಈಗ ಗ್ರಾಮದಲ್ಲಿ ಸಾಮಾಜಿಕ ಜೀವನ ಮೌಲ್ಯಯುತವಾಗಿದ್ದು ಅದನ್ನು ಕಾಪಾಡಿಕೊಂಡು ಬದುಕಬೇಕು ಎಂದು ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ರಾಜ್ಯಾಧ್ಯಕ್ಷ ಹಾಸಿಂಪೀರ ವಾಲೀಕಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಜಾತಿಭೇದ ಪಕ್ಷಭೇಧ ಮರೆತು ಗ್ರಾಮೀಣ ಜೀವನದಲ್ಲಿ ಸಾಮರಸ್ಯ, ಸಹೋದರತೆ, ಮನೋಭಾವದಿಂದ ಬದುಕನ್ನು ಸಾಗಿಸಬೇಕು. ಅಭ್ಯರ್ಥಿಗಳು ಗೆಲುವು ಸಾಧಿಸಲು ಜಾತಿ, ಮತ, ಪಂಥ, ಭಾಷೆ, ಲಿಂಗ, ಧರ್ಮ ಮುಂತಾದ ಭಿನ್ನ ಭಿನ್ನ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿರುತ್ತಾರೆ. ಈಗ ಅವನ್ನೆಲ್ಲವನ್ನು ಮರೆತು ಸದ್ಬಾವನೆಯಿಂದ ಸಾಗಬೇಕು. ಗ್ರಾಮೀಣ ಪ್ರದೇಶದಲ್ಲಿ ಐಕ್ಯತೆಯ ಜೀವನಕ್ಕೆ ಮಹತ್ವವಿದೆ.
ಆದ್ದರಿಂದ ಗ್ರಾಮೀಣ ಪ್ರದೇಶದ ಹಿರಿಯರು ಮುಖಂಡರು ಎಲ್ಲ ವರ್ಗದವರು ಅನ್ಯೋನ್ಯತೆಯಿಂದ ಜೀವನ ಸಾಗಿಸಲು ಜವಾಬ್ದಾರಿ ವಹಿಸಿಕೊಳ್ಳಬೇಕೆಂದು ಹಾಸಿಂಪೀರ ವಾಲೀಕಾರ ಮನವಿ ಮಾಡಿದ್ದಾರೆ.