ಅನ್ಯಾಯದ ವಿರುದ್ಧ ಪ್ರತಿರೋಧ ಪ್ರಕೃತಿ ನಿಯಮ

ಬೆಂಗಳೂರು,ಜ.೯; ಪ್ರತಿರೋಧ ಪ್ರಕೃತಿ ನಿಯಮವಾಗಿದ್ದು, ಸ್ವ ರಕ್ಷಣೆಗಾಗಿ ಪ್ರತಿಯೊಂದು ಜೀವಿಯೂ ಪ್ರತಿರೋಧ ತೋರುತ್ತದೆ. ಅನ್ಯಾಯ, ದೌರ್ಜನ್ಯಗಳ ವಿರುದ್ಧ ಪ್ರತಿರೋಧ ತೋರುವುದು ತಪ್ಪಲ್ಲ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ, ಹಿರಿಯ ವಕೀಲ ಡಾ.ಸಿ.ಎಸ್.ದ್ವಾರಕನಾಥ್ ಹೇಳಿದ್ದಾರೆ.
ಬೆಂಗಳೂರಿನ ಕೃಷಿ ತಂತ್ರಜ್ಞರ ಸಂಸ್ಥೆಯ ಸಭಾಂಗಣದಲ್ಲಿ ಏರ್ಪಡಿಸಿದ್ದ “ಕೆ.ಎಂ.ಶರೀಫ್ – ಬದುಕು ಮತ್ತು ಹೋರಾಟ” ಕುರಿತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ಸಂವಿಧಾನದ ಮೂಲ ಆಶಯವಾದ ಜಾತ್ಯತೀತತೆ ನಾಶವಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಕೆ.ಎಂ.ಶರೀಫ್ ಅವರು ಸಂಘಟನೆಯ ಸಿದ್ಧಾಂತವನ್ನು ದೇಶದ ಮೂಲೆ ಮೂಲೆಗೂ ತಲುಪಿಸಿದರು. ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿದ್ದ ದೌರ್ಜನ್ಯದ ವಿರುದ್ಧ ಸರ್ಕಾರವಾಗಲೀ, ರಾಜಕಾರಣಿಗಳಾಗಲೀ, ಪೊಲೀಸ್ ಇಲಾಖೆಯಾಗಲೀ ರಕ್ಷಣೆ ಕೊಡದಿದ್ದಾಗ ಸ್ವಭಾವಿಕವಾಗಿ ಪ್ರತಿರೋಧ ಆರಂಭವಾಯಿತು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಯಾಸಿರ್ ಹಸನ್, ಮರ್ದಿತ ಸಮುದಾಯದ ಧ್ವನಿಯಾಗಿದ್ದ ಕೆ.ಎಂ.ಶರೀಫ್ , ಮುಸ್ಲಿಂ ಸಮುದಾಯದಲ್ಲಿ, ದಮನಿತರಲ್ಲಿ ಆತ್ಮವಿಶ್ವಾಸವನ್ನು ಬಿತ್ತಿ ಗೌರವ, ಸ್ವಾಭಿಮಾನದಿಂದ ಬದುಕುವ ದಾರಿ ತೋರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.ಎಂದು ಹೇಳಿದರು.ನಂತರ ಕರ್ನಾಟಕ ರೈತ ಸಂಘದ ಕಾರ್ಯಾಧ್ಯಕ್ಷ ಜಿ.ಎಂ.ವೀರಸಂಗಯ್ಯ,
ಪಿಎಫ್‌ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್ ಮಾತನಾಡಿ, ಓರ್ವ ಹೋರಾಟಗಾರದಲ್ಲಿ ಇರಬೇಕಾದ ಎಲ್ಲಾ ಗುಣಗಳು ಕೆ.ಎಂ.ಶರೀಫ್ ಅವರಲ್ಲಿತ್ತು. ಅವರ ಜೀವನವೇ ಒಂದು ಹೋರಾಟವಾಗಿತ್ತು. ಅವರು ಸ್ಫೂರ್ತಿಯ ಸೆಳೆಯಾಗಿದ್ದರು ಎಂದು ಬಣ್ಣಿಸಿದರು.
“ನಾವೇ ಕರ್ನಾಟಕ” ಸಂಘಟನೆಯ ಮುಖ್ಯಸ್ಥ ಪಾರ್ವತೀಶ ಬಿಳಿದಾಳೆ , ಪತ್ರಕರ್ತ ರಾ.ಚಿಂತನ್ ಪ್ರಸ್ತುತ ಪಾಕ್ಷಿಕದ ಪ್ರಧಾನ ಸಂಪಾದಕ ಅಬ್ದುಲ್ ರಝಾಕ್ ಕೆಮ್ಮಾರ ಮಾತನಾಡಿದರು.