ಅನ್ನಭಾಗ್ಯ ಯೋಜನೆಯಡಿ ಹಣದ ಬದಲು ಶೀಘ್ರ ಅಕ್ಕಿ ವಿತರಣೆ

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ನ.೨೮; ಸರ್ಕಾರದ ಪ್ರಮುಖ ಯೋಜನೆಯಾಗಿರುವ ಅನ್ನಭಾಗ್ಯ ಯೋಜನೆಯಡಿ ಪ್ರಸ್ತುತ ಪ್ರತಿ ಫಲಾನುಭವಿಗೆ 05 ಕೆ.ಜಿ. ಅಕ್ಕಿ ಹಾಗೂ ಉಳಿದಂತೆ 05 ಕೆ.ಜಿ. ಅಕ್ಕಿಯ ಬದಲಿಗೆ ಅಕ್ಕಿಯ ಮೊತ್ತಕ್ಕೆ ಹಣ ಪಾವತಿಸಲಾಗುತ್ತಿದ್ದು, ಶೀಘ್ರವೇ ಹಣದ ಬದಲಿಗೆ ಪೂರ್ಣ ಪ್ರಮಾಣದಲ್ಲಿ ಅಕ್ಕಿಯನ್ನೇ ನೀಡಲಾಗುವುದು ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಅವರು ಹೇಳಿದರು.ಹಿರಿಯೂರು ತಾಲ್ಲೂಕಿನ ಧರ್ಮಪುರದ ವಾಸವಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಿರಿಯೂರು ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಧರ್ಮಪುರ ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಆಡಳಿತ ಚುರುಕುಗೊಳಿಸುವ ಜತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.  ಮುಖ್ಯಮಂತ್ರಿಗಳ ನೆಚ್ಚಿನ ಜನತಾ ದರ್ಶನ ಕಾರ್ಯಕ್ರಮವು ಅತ್ಯುತ್ತಮ ಹಾಗೂ ಯಶಸ್ವಿಯತ್ತ ಸಾಗುತ್ತಿದೆ.  ಜನತಾ ದರ್ಶನ ಕಾರ್ಯಕ್ರಮದಲ್ಲಿ ಜನರ ಅಹವಾಲು ಆಲಿಸಿ ಸಮಸ್ಯೆಗಳಿಗೆ ಪರಿಹಾರೋಪಾಯ ಒದಗಿಸಲಾಗುತ್ತಿದೆ. ಜನರ ಮನೆಬಾಗಿಲಿಗೆ ಸರ್ಕಾರದ ಯೋಜನೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದರು.ಬಡವರಿಗೆ ಅನ್ನವನ್ನು ನೀಡುವ ಅನ್ನಭಾಗ್ಯ ಯೋಜನೆಯಡಿ ಪ್ರಸ್ತುತ ಪ್ರತಿ ಫಲಾನುಭವಿಗೆ ಪ್ರತಿ ತಿಂಗಳು 05 ಕೆ.ಜಿ. ಅಕ್ಕಿಯನ್ನು ನೀಡಿ, ಉಳಿದ 05 ಕೆ.ಜಿ. ಅಕ್ಕಿಯ ಮೊತ್ತ ರೂ. 170 ಗಳನ್ನು ಫಲಾನುಭವಿಯ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತಿದೆ.  ಶೀಘ್ರವೇ ಒಂದೆರಡು ತಿಂಗಳಿನಲ್ಲಿ ಫಲಾನುಭವಿಗೆ ಹಣದ ಬದಲಿಗೆ ಪೂರ್ಣ ಪ್ರಮಾಣದಲ್ಲಿ ಅಕ್ಕಿಯನ್ನೇ ನೀಡಲಾಗುವುದು ಎಂದರು.ಸರ್ಕಾರದ ವಿವಿಧ ಇಲಾಖೆಗಳಿಗೆ ಜನರ ಅಲೆದಾಟ ತಪ್ಪಿಸಲು,  ತ್ವರಿತಗತಿಯಲ್ಲಿ ಜನರ ಸಮಸ್ಯೆ ಬಗೆಹರಿಸಬೇಕೆಂಬುದು ಜನತಾ ದರ್ಶನ ಕಾರ್ಯಕ್ರಮದ ಆಶಯವಾಗಿದೆ. ಬರಗಾಲದ ಹಿನ್ನಲೆಯಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮವಾಗಿ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಹಾಗೂ ಜಾನುವಾರುಗಳಿಗೆ ಮೇವು ಹಾಗೂ ನೀರಿನ ತೊಂದರೆಯಾಗದಂತೆ ಕ್ರಮವಹಿಸಲಾಗಿದ್ದು,ಬರ ಎದುರಿಸಲು ಬರಪರಿಹಾರ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮಸಭೆ ಮಾಡುವ ಮೂಲಕ ಜನರ ಸಮಸ್ಯೆ ಬಗೆಹರಿಸಲು ಕ್ರಮವಹಿಸಲಾಗುವುದು ಎಂದರು.ಸರ್ಕಾರ ನೀಡಿರುವ ಭರವಸೆಯಂತೆ ಐದು ಗ್ಯಾರಂಟಿಗಳಲ್ಲಿ ಈಗಾಗಲೇ ನಾಲ್ಕು ಗ್ಯಾರಂಟಿಗಳನ್ನು ಈಡೇರಿಸಲಾಗಿದೆ. ಉಳಿದಂತೆ ಯುವನಿಧಿ ಯೋಜನೆಯನ್ನು ಜನವರಿ ಮಾಹೆಯಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದರು.ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಮಾತನಾಡಿ, ಜನಸಾಮಾನ್ಯರಿಗೆ ಉಪಯೋಗವಾಗುವಂತಹ ಯೋಜನೆಗಳನ್ನು  ಸರ್ಕಾರ ಅನುಷ್ಠಾನಕ್ಕೆ ತಂದಿದೆ. ಸರ್ಕಾರದ ವಿವಿಧ ಯೋಜನೆಗಳ ಜತೆಗೆ ಜನಸಾಮಾನ್ಯರ ಕುಂದುಕೊರತೆ ಆಲಿಸಲು, ಅಲೆದಾಟ ತಪ್ಪಿಸಲು ಮನೆ ಬಾಗಿಲಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಜಿಲ್ಲಾಮಟ್ಟದ ಜನತಾ ದರ್ಶನ ಕಾರ್ಯಕ್ರಮವನ್ನು ಗ್ರಾಮಮಟ್ಟದಲ್ಲಿ ನಡೆಸಬೇಕು ಎಂಬ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ ಮೇರೆಗೆ ಧರ್ಮಪುರ ಗ್ರಾಮದಲ್ಲಿ ಜನತಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.
.