ಅನ್ನಭಾಗ್ಯ ಯೋಜನೆಗೆ ಇಂದು ಚಾಲನೆ

ಬೆಂಗಳೂರು, ಜು. ೧೦-ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆ ಅನ್ನಭಾಗ್ಯಕ್ಕೆ ಇಂದು ಸಂಜೆ ಅಧಿಕೃತ ಚಾಲನೆ ದೊರೆಯಲಿದೆ. ವಿಧಾನನೌಧದ ಸಮ್ಮೇಳನಾ ಸಭಾಂಗಣದಲ್ಲಿ ಇಂದು ಸಂಜೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡುವ ಮೂಲಕ ೫ಕೆಜಿ ಅಕ್ಕಿಯ ಜೊತೆಗೆ, ೧೭೦ ರೂ., ಬಿಪಿಎಲ್ ಕಾರ್ಡ್‌ದಾರರ ಮತ್ತು ಅಂತ್ಯೋದಯ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ.
ಅನ್ನಭಾಗ್ಯ ಯೋಜನೆ ಜುಲೈ ೧ ರಿಂದಲೇ ಅನುಷ್ಟಾನಕ್ಕೆ ಬರಬೇಕಾಯಿತು. ಆದರೆ ಕೇಂದ್ರ ಸರ್ಕಾರದಿಂದ ಅಕ್ಕಿ ಬಾರದ ಕಾರಣ ವಿಳಂಬವಾಗಿತ್ತು. ಈ ವಿಚಾರ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ವಾಕ್ಸಮರಕ್ಕೂ ಕಾರಣವಾಗಿತ್ತು. ಈಗ ಅಕ್ಕಿ ದೊರೆಯದ ಕಾರಣ ಉಳಿದ ೫ ಕೆಜಿಗೆ ಹಣ ನೀಡಲು ಸರ್ಕಾರ ತೀರ್ಮಾನಿಸಿದೆ.
ಇಂದು ಕೋಲಾರ ಮತ್ತು ಮೈಸೂರು ಜಿಲ್ಲೆಯ ಬಿಪಿಎಲ್ ಕಾರ್ಡ್‌ದಾರರ ಖಾತೆಗೆ ಹಣ ಹಾಕಿ ಅನ್ನಭಾಗ್ಯ ಯೋಜನೆ ಉದ್ಘಾಟಿಸಲಿದ್ದಾರೆ. ನಾಳೆಯಿಂದ ಉಳಿದ ಜಿಲ್ಲೆಯ ಬಿಪಿಎಲ್ ಕಾರ್ಡ್‌ದಾರರಿಗೂ ಖಾತೆಗೆ ಹಣ ಹಾಕಲಾಗುವುದು ಎಂದು ಆಹಾರ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಒಟ್ಟು ೧.೨೮ ಕೋಟಿ ಬಿಪಿಎಲ್ ಕಾರ್ಡ್‌ದಾರರಿದ್ದಾರೆ. ಶೇ. ೯೯.೯ ರಷ್ಟು ಕಾರ್ಡ್‌ದಾರರು ಆಧಾರ್ ಲಿಂಕ್ ಆಗಿದ್ದು, ಅವರ ಬ್ಯಾಂಕ್ ಅಕೌಂಟ್ ಲಿಂಕ್ ಕೂಡ ಆಗಿದೆ. ಬಾಕಿ ಉಳಿದ ೬ಲಕ್ಷ ಕಾರ್ಡ್‌ಗಳ ಆಧಾರ್ ಲಿಂಕ್ ಆಗಬೇಕಾಗಿದೆ. ಪ್ರತಿ ಕೆಜಿ ೩೪ ರೂ. ನಂತೆ ತಲಾ ಒಬ್ಬರಿಗೆ ೫ ಕೆಜಿ ೧೭೦ ರೂ. ಜಮೆ ಆಗಲಿದೆ.
ಹಣ ಪಡೆಯುವುದು ಹೇಗೆ
ಬಿಪಿಎಲ್ ಕಾರ್ಡ್‌ದಾರರಾಗಬೇಕು. ರೇಷನ್ ಕಾರ್ಡ್ ಆಧಾರ ಕಾರ್ಡ್ ಲಿಂಕ್ ಆಗಿರಬೇಕು. ಆಧಾರ-ಬ್ಯಾಂಕ್ ಖಾತೆ ಲಿಂಕ್ ಆಗದೆ ಇದ್ದರೆ, ಹಣ ಫಲಾನುಭವಿಗಳ ಖಾತೆಗೆ ಬರುವುದಿಲ್ಲ. ಕಾರ್ಡ್‌ನಲ್ಲಿ ಮನೆಯ ಜಮಾನನ ಖಾತೆಗೆ ಡಿಬಿಟಿ ಮೂಲಿಕ ಹಣ ಜಮೆಯಾಗಿಲಿದೆ. ಅನ್ನಭಾಗ್ಯ ಯೋಜನೆಗೆ ಯಾವುದೇ ಅರ್ಜಿ ಸಲ್ಲಿಸಬೇಕಿಲ್ಲ.