ಅನ್ನಭಾಗ್ಯ ಜಾರಿ:5 ಕೆಜಿ ಅಕ್ಕಿ ಬದಲಿಗೆ ಹಣ

ಕೋಲಾರ,ಜು,೧೧-ಕಾಂಗ್ರೆಸ್ ಸರ್ಕಾರದ “ಗ್ಯಾರಂಟಿ” ಯೋಜನೆಗಳಲ್ಲಿ ಒಂದಾದ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಈಗ ನೀಡಲಾಗುತ್ತಿರುವ ೫ ಕೆಜಿ ಅಕ್ಕಿ ಜೊತೆಗೆ ಉಳಿದ ೫ ಕೆಜಿ ಅಕ್ಕಿ ಬದಲಾಗಿ ಪ್ರತಿ ವ್ಯಕ್ತಿಗೆ ೧೭೦ ರೂಗಳನ್ನು ಪಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ಹಣ ಸಂದಾಯ ಮಾಡುವ ಕಾರ್ಯಕ್ರಮಕ್ಕೆ ಸೋಮವಾರ ಸಂಜೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಆಹಾರ ಸಚಿವ ಕೆ.ಎಹಚ್.ಮುನಿಯಪ್ಪ ಚಾಲನೆ ನೀಡಿದ್ದು ಇದರ ಅಂಗವಾಗಿ ಕೋಲಾರ ಜಿಲ್ಲೆಯಲ್ಲಿ ೨,೬೪,೬೧೦ ಬಿಪಿಎಲ್ ಮತ್ತು ಅಂತ್ಯೋ ದಯ ಕಾರ್ಡುದಾರರಿಗೆ ಇದು ಅನ್ವಯವಾಗಿದೆ.
ಮೈಸೂರು ಮತ್ತು ಕೋಲಾರವನ್ನು ನೋಡಲ್ ಜಿಲ್ಲೆಗಳನ್ನಾಗಿ ನೇಮಕ ಮಾಡಿಕೊಂಡಿರುವ ಸರ್ಕಾರ ಪ್ರಾಯೋಗಿಕವಾಗಿ ಈ ಎರಡು ಜಿಲ್ಲೆಗಳ ಬಿಪಿಎಲ್ ಮತ್ತು ಅಂತ್ಯೋ ದಯ ಕಾರ್ಡುದರರ ಬ್ಯಾಂಕ್ ಖಾತೆಗಳಿಗೆ ೧೭೦ ರೂಗಳ ವರ್ಗಾವಣೆ ಮಾಡುವ ಕಾರ್ಯಕ್ರಮ ಸೋಮವಾರ ಬೆಂಗಳೂರಿನಲ್ಲಿ ನೆರವೇರಿತು.
ಕೋಲಾರ ಜಿಲ್ಲೆಯಲ್ಲಿ ೩.೧೧ ಲಕ್ಷ ಕುಟುಂಬಗಳು ಬಿಪಿಎಲ್ ಕಾರ್ಡು ಮತ್ತು ೨೯,೭೬೯ ಅಂತ್ಯೋದಯ ಪಲಾನುಭವಿಗಳಿದ್ದು ಇದರಲ್ಲಿ ೨,೬೪,೬೧೦ ಫಲಾನುಭವಿಗಳು ಮೊದಲನೆ ಹಂತದಲ್ಲಿ ಇದರ ಉಪಯೋಗ ಪಡೆದುಕೊಂಡಿದ್ದಾರೆ.
೨,೬೪,೬೧೦ ಲಕ್ಷ ಕುಟುಂಬದ ಪಡಿತರ ಚೀಟಿಗೆ ಬ್ಯಾಂಕ್ ಖಾತೆ ಜೋಡಣೆ ಯಶಸ್ವಿಯಾಗಿ ನಡೆದಿದ್ದು, ಇಡೀ ರಾಜ್ಯದಲ್ಲೇ ಕೋಲಾರದಲ್ಲಿ ತ್ವರಿತಗತಿಯಲ್ಲಿ ಕೆಲಸ ನಡೆದಿದೆ.
ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಅಕ್ರಂ ಪಾಷ ನೇತೃತ್ವದಲ್ಲಿ ಆಹಾರ ಇಲಾಖೆಯ ಉಪನಿರ್ದೇಶಕಿ ಎಂ.ಕೆ.ಶ್ರುತಿ, ಡಿಬಿಟಿ ವ್ಯವಸ್ಥೆಗಾಗಿ ಅಲ್ಪಾವಧಿಯಲ್ಲಿ ೨,೬೪,೬೧೦ ಬಿಪಿಎಲ್ ಕುಟುಂಬಗಳ ಪಡಿತರ ಚೀಟಿಗೆ ಬ್ಯಾಂಕ್ ಖಾತೆ ಜೋಡಣೆ ಮಾಡಿ ಕುಟುಂಬ ಮುಖ್ಯಸ್ಥರನ್ನು ಗುರುತಿಸಿರುವುದನ್ನು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಶ್ಲಾಘಿಸಿದ್ದಾರೆ.