ದಾವಣಗೆರೆ.ಜೂ.೧೫; ಚುನಾವಣೆಯಲ್ಲಿ ಗೆಲ್ಲುವ ಗುರಿ ಇಟ್ಟುಕೊಂಡು ಕಾರ್ಯಸಾಧ್ಯವಿಲ್ಲದ ಗ್ಯಾರಂಟಿ ಯೋಜನೆಗಳ ಭರವಸೆ ನೀಡಿ, ಜನರನ್ನು ನಂಬಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ 10 ಕೆ ಜಿ ಅಕ್ಕಿ ಕೊಡುವ ಅನ್ನಭಾಗ್ಯ ಯೋಜನೆಗೆ ಇತಿಶ್ರೀ ಹಾಡುವ ಪ್ಲಾನ್ ಮಾಡುತ್ತಿದೆ ಎಂದು ಬಿಜೆಪಿ ಮುಖಂಡ ಬಿ ಎಂ ಸತೀಶ್ ಕೊಳೇನಹಳ್ಳಿ ಆರೋಪಿಸಿದ್ದಾರೆ.ತಾನು ವಾಗ್ದಾನ ಮಾಡಿದಂತೆ 10 ಕೆ ಜಿ ಅಕ್ಕಿ ಕೊಡಲು ತಿಂಗಳಿಗೆ 2 ಲಕ್ಷ 28 ಸಾವಿರ ಮೆಟ್ರಿಕ್ ಟನ್ ಅಕ್ಕಿ ಅವಶ್ಯಕತೆ ಇದೆ. ಇಷ್ಟು ಪ್ರಮಾಣದ ಅಕ್ಕಿಗೆ ಕೇಂದ್ರ ಆಹಾರ ನಿಗಮಕ್ಕೆ ಪತ್ರ ಬರೆದು ಕೈ ತೊಳೆದು ಕೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರದೊಂದಿಗೆ ಅಥವಾ ಕೇಂದ್ರ ಆಹಾರ ಸಚಿವರೊಂದಿಗೆ ಮಾತನಾಡದೆ ದಿವ್ಯ ನಿರ್ಲಕ್ಷ್ಯ ಧೋರಣೆ ಅನುಸರಿಸಿ, ಈಗ ಅಕ್ಕಿ ಪೂರೈಕೆ ಮಾಡಲು ಕೇಂದ್ರದ ಬಿಜೆಪಿ ಸರ್ಕಾರ ನಿರಾಕರಿಸಿದೆ. ಇದು ಬಡವರ ವಿರೋಧಿ ಧೋರಣೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ದೂಷಿಸುವುದು ಸರಿಯಲ್ಲ.ನಮ್ಮ ಕರ್ನಾಟಕ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕ್ವಿಂಟಾಲ್ ಒಂದರ ಎ ಗ್ರೇಡ್ ಭತ್ತಕ್ಕೆ ₹2203 ನಿಗಧಿ ಮಾಡಿದೆ. ತಕ್ಷಣವೇ ಭತ್ತ ಖರೀದಿ ಕೇಂದ್ರಗಳನ್ನು ತೆರೆದು ಖರೀದಿ ಮಾಡುವ ಬದಲು ಇಲ್ಲ ಸಲ್ಲದ ಕಾರಣಗಳನ್ನು ಹೇಳಿ ಕೇಂದ್ರದ ಬಿಜೆಪಿ ಸರ್ಕಾರದ ಕಡೆ ಬೊಟ್ಟು ಮಾಡುತ್ತಿದೆ.ಈಗಾಗಲೇ ಭತ್ತದ ಕೊಯ್ಲು ಪ್ರಾರಂಭವಾಗಿ ಒಂದು ತಿಂಗಳಾಗಿದೆ.ತನ್ನ ಗ್ಯಾರಂಟಿ ಭರವಸೆ ಈಡೇರಿಸುವ ಬದ್ಧತೆ ಇದಿದ್ದರೆ ಅಧಿಕಾರಕ್ಕೆ ಬಂದ ತಕ್ಷಣವೇ ಭತ್ತ ಖರೀದಿ ಕೇಂದ್ರಗಳನ್ನು ತೆರೆದು ಭತ್ತ ಖರೀದಿಸಿ ದಾಸ್ತಾನು ಮಾಡಿಕೊಳ್ಳಬೇಕಾಗಿತ್ತು. ಉದ್ದೇಶ ಪೂರ್ವಕವಾಗಿ ಭತ್ತದ ಅವಕ ಮುಗಿದ ಮೇಲೆ ಬೇರೆ ರಾಜ್ಯಗಳ ಕಡೆ ಕೈ ತೋರಿಸಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಲಾಯನವಾದ ನಡೆ ಅನುಸರಿಸುತ್ತಿದೆ ಎಂದು ಬಿ ಎಂ ಸತೀಶ್ ತೀವ್ರವಾಗಿ ಖಂಡಿಸಿದ್ದಾರೆ.