
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.04: ಹುಟ್ಟಿದ ಪ್ರತಿಮಗುವಿಗೂ ಆರಂಭದ ಆರು ತಿಂಗಳವರೆಗೆ ತಾಯಿ ಹಾಲನ್ನು ಬಿಟ್ಟು ಬೇರೆ ಏನನ್ನೂ ನೀಡಬಾರದು. ಆರು ತಿಂಗಳ ನಂತರ ಗಂಜಿ ಹಾಗೂ ಅನ್ನದಂತಹ ದ್ರವ ರೂಪದ ಮೆದು ಆಹಾರ ನೀಡಬೇಕು.ಪ್ರತಿ ಗರ್ಭಿಣಿ ಸ್ತ್ರೀಯರು ಪ್ರೋಟೀನ್ ಯುಕ್ತ ಪೌಷ್ಟಿಕ ಆಹಾರ ಸೇವನೆ ಮಾಡಬೇಕೆಂದು ಮುಖ್ಯ ಗುರುಗಳಾದ ರವಿಚೇಳ್ಳಗುರ್ಕಿ ಹೇಳಿದರು.
ಇಂದು ತಾಲ್ಲೂಕಿನ ಸಂಜೀವರಾಯನಕೋಟೆಯ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಅನ್ನಪ್ರಾಸನ ಹಾಗೂ ಪೋಷಣ ಅಭಿಯಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಗುವಿಗೆ ಹಾಲು ಅನ್ನ ಉಣಿಸಿ ಮೇಲಿನಂತೆ ಹೇಳಿದರು.
ಮಕ್ಕಳು ದೇಶದ ಅತ್ಯಮೂಲ್ಯವಾದ ಮಾನವ ಸಂಪತ್ತು. ಪ್ರತಿ ಮಗು ಕೂಡ ದೇಶದ ಆಸ್ತಿ. ಸದೃಢ ಮಕ್ಕಳಿಂದ ಸದೃಢ ಸಮಾಜ ಕಟ್ಟಲು ಸಾಧ್ಯ. ಆದ್ದರಿಂದ ಪ್ರತಿ ತಾಯಂದಿರು ತಮ್ಮ ಮಕ್ಕಳ ಕಡೆ ವಿಶೇಷ ಗಮನ ನೀಡಬೇಕೆಂದು ಹೇಳಿದರು.
ಎಸ್. ಡಿ.ಎಂ.ಸಿ ಮಾಜಿ ಅಧ್ಯಕ್ಷೆ ನಾಗಮ್ಮ, ಅಂಗನವಾಡಿ ಕಾರ್ಯಕರ್ತೆಯರಾದ ಪದ್ಮಾವತಿ, ಶ್ರೀದೇವಿ, ನಿಂಗಮ್ಮ, ಆಶಾ ಕಾರ್ಯಕರ್ತೆಯರಾದ ಯಶೋಧ, ಸುಶೀಲಾ ಹಾಗೂ ಮಕ್ಕಳ ತಾಯಂದಿರು ಉಪಸ್ಥಿತರಿದ್ದರು.