ಅನ್ನದಾನ,ಪಾನಕ ಪಣ್ಯಾರಗಳೊಂದಿಗೆ ವಿಜೃಂಭಣೆ ಶ್ರೀ ರಾಮನವಮಿ ಆಚರಣೆ

ವಿಜಯಪುರ,ಏ೧೮: ನೆತ್ತಿಯ ಮೇಲೆ ಸುಡು ಬಿಸಿಲಿದ್ದರೂ, ಕುಡಿಯುವ ನೀರಿಗೆ ಹಾಹಾಕಾರವಿದ್ದರೂ, ಜನತೆಯ ಶ್ರೀರಾಮನವಮಿ ಆಚರಣೆಗೆ ಯಾವುದೇ ಕೊರತೆಯಾಗದೇ, ಪಟ್ಟಣದ ಶ್ರೀ ರಾಮಮಂದಿರಗಳು, ಹಾಗೂ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಶ್ರೀ ರಾಮನವಮಿ ಪ್ರಯುಕ್ತ ವಿಶೇಷ ಪೂಜೆ, ಅಲಂಕಾರ, ಅಭಿಷೇಕ, ಅನ್ನದಾನ, ಪಾನಕ, ಪಣ್ಯಾರ ವ್ಯವಸ್ಥೆಗಳು ನಡೆಯುತ್ತಿದ್ದವು.
ಪಟ್ಟಣದ ಇತಿಹಾಸ ಪ್ರಸಿದ್ದ ಆನೆಕಲ್ಲು ಛತ್ರದ ಭಕ್ತಾಂಜನೇಯಸ್ವಾಮಿ ದೇವಾಲಯದಲ್ಲಿ ಶ್ರೀಸ್ವಾಮಿರವರಿಗೆ ವಿಶೇಷ ಅಲಂಕಾರ ಏರ್ಪಡಿಸಿದ್ದು, ವಿಶೇಷವಾಗಿ ಎಲ್ಲರ ಮನ ಸೆಳೆಯಿತು.ಸಾರ್ವಜನಿಕರೆಲ್ಲರಿಗೂ ಹೆಸರಬೇಳೆ,ಮಜ್ಜಿಗೆ,ಪಾನಕ,ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ವಾಗ್ದೇವಿ ಮಹಿಳಾ ತಂಡದ ಉಮಾ, ಅನ್ನಪೂರ್ಣ, ಅನುಪಮಾ ಮತ್ತಿತರ ಮಹಿಳಾ ತಂಡದವರು ರಾಮ ನಾಮ ಭಜನೆಯನ್ನು ಹಾಡಿದರು.
ಶ್ರೀ ರಾಮ ಮಂದಿರ ರಸ್ತೆಯ ಪ್ರಸನ್ನ ಸೀತಾರಾಮ ದೇವಾಲಯದಲ್ಲಿ ಶ್ರೀ ಸ್ವಾಮಿಯವರಿಗೆ ಹಾಗೂ ಉತ್ಸವ ಮೂರ್ತಿಗಳಿಗೆ ವಿಶೇಷ ಹೂವಿನ ಅಲಂಕಾರ ನಡೆಸಿದ್ದು, ಮಜ್ಜಿಗೆ ಪಾನಕ, ಪಣ್ಯಾರದ ವ್ಯವಸ್ಥೆ, ಏರ್ಪಡಿಸಲಾಗಿತ್ತು. ಗುರಪ್ಪನ ಮಠದ ಬಳಿಯ ಮೂಡಲ ಆಂಜನೇಯಸ್ವಾಮಿ ದೇವಾಲಯದಲ್ಲಿ, ಸೀತಾರಾಮ ಲಕ್ಷ್ಮಣ, ಆಂಜನೇಯ ಸಮೇತ ನೂತನ ಉತ್ಸವ ಮೂರ್ತಿಗಳನ್ನು ತಂದು ಪೂಜೆ ಏರ್ಪಡಿಸಿದ್ದರು.
ಹಾಗೂ ಪಡುವಣ ಆಂಜನೇಯಸ್ವಾಮಿ ಮತ್ತು ಗಾಂಧಿ ಚೌಕದಲ್ಲಿನ ಶ್ರೀಕೋದಂಡರಾಮಸ್ವಾಮಿ ಮಂದಿರದಲ್ಲಿ ಸಹ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಶಿಡ್ಲಘಟ್ಟ ಡಿವೀಯೇಷನ್ ರಸ್ತೆಯ ಅಭಯಾಂಜನೇಯಸ್ವಾಮಿ ಸೇವಾ ಸಮಿತಿ ವತಿಯಿಂದಲೂ, ಸಂತೆ ಮೈದಾನದ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ, ಮಂಡಿಬೆಲೆ ರಸ್ತೆಯ ಶ್ರೀ ವಾಲ್ಮೀಕಿ ಉದ್ಯಾನವನದಲ್ಲಿ ವಾಲ್ಮೀಕಿ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಕೆ.ಎಂ.ಸರ್ಕಲ್, ಸಂಗಮೇಶ್ವರ ಚಿತ್ರಮಂದಿರದ ಮುಂಭಾಗ, ಹೀಗೆ ಪಟ್ಟಣದ ಹಲವೆಡೆ ಶ್ರೀರಾಮದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕೋಸಂಬರಿ, ಹೆಸರು ಬೇಳೆ, ಪಾನಕ, ಪಣ್ಯಾರ, ವ್ಯವಸ್ಥೆಗಳನ್ನು ಹತ್ತು-ಹಲವು ಭಕ್ತ ಮಂಡಳಿಗಳವರು ಏರ್ಪಡಿಸಿದ್ದು, ಒಟ್ಟಾರೆ ಪಟ್ಟಣದಲ್ಲೆಡೆ ಶ್ರೀರಾಮನವಮಿ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು.
ರಸ್ತೆ ಬದಿಗಳಲ್ಲಿ ಒತ್ತಾಯಪೂರ್ವಕವಾಗಿ ವಾಹನಗಳನ್ನು ನಿಲ್ಲಿಸಿ, ಪ್ರಯಾಣಿಕರಿಗೆ ಹಾಗೂ ಚಾಲಕರುಗಳಿಗೆ ಮಜ್ಜಿಗೆ ಪಾನಕಗಳನ್ನು ಭಕ್ತಾದಿಗಳು ನೀಡುತ್ತಿರುವುದು. ಎಲ್ಲೆಡೆ ಕಂಡು ಬಂದಿತು.