ಅನ್ನದಾತ ಸಮೃದ್ಧಿಯಾಗಿದ್ದರೆ ಲೋಕ ಕಲ್ಯಾಣ ಸಾಧ್ಯ

ಅರಸೀಕೆರೆ, ಜು. ೨೯- ಕಾಲ ಕಾಲಕ್ಕೆ ಮಳೆಯಾಗುತ್ತಿದ್ದಲ್ಲಿ ಕೆರೆಗಳು ಭರ್ತಿಯಾಗುವುದರ ಮೂಲಕ ದೇವರ ಸ್ವರೂಪಿ ಅನ್ನದಾತನು ಸಮೃದ್ಧಿಯಾಗಿದ್ದರೆ ಮಾತ್ರ ಲೋಕ ಕಲ್ಯಾಣವಾಗುತ್ತದೆ. ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಬಿಜೆಪಿ ಮುಖಂಡ ಎನ್.ಆರ್.ಸಂತೋಷ್ ಹೇಳಿದರು.
ತಾಲ್ಲೂಕಿನ ಹಾರನಹಳ್ಳಿ ದೊಡ್ಡಕೆರೆಗೆ ಮಳೆ ನೀರು ತುಂಬಿ ಕೋಡಿ ಬಿದ್ದ ಪರಿಣಾಮ ಕೋಡಿಮಠ ಸಂಸ್ಥಾನದ ಉತ್ತರಾಧಿಕಾರಿ ಚೇತನ್ ಮರಿದೇವರು ಸ್ವಾಮಿಜಿಯವರ ಸಾನಿಧ್ಯದಲ್ಲಿ ಗ್ರಾಮಸ್ಥರೊಂದಿಗೆ ಸಾಂಪ್ರದಾಯಿಕವಾಗಿ ಬಾಗಿನ ಅರ್ಪಿಸಿ ಅವರು ಮಾತನಾಡಿದರು.
ನಮ್ಮ ಪೂರ್ವಿಕರು ಸ್ಥಳಿಯ ಜನತೆ ಮತ್ತು ಜೀವ ಸಂಕುಲಗಳ ಒಳಿತಿಗಾಗಿ ಅಂದಿನ ದಿನಗಳಲ್ಲಿಯೇ ಕೆರೆ ಕಟ್ಟೆಗಳನ್ನು ನಿರ್ಮಾಣ ಮಾಡಿದ್ದಾರೆ. ಮಳೆ ನೀರಿನಿಂದ ತುಂಬಿ ಹರಿಯುವ ಕೆರೆಗಳಿಗೆ ನಮ್ಮ ಭಾರತೀಯ ಸಂಸ್ಕೃತಿಯ ಅಡಿಯಲ್ಲಿ ಗಂಗಾ ಮಾತೆಯ ಸ್ಥಾನವನ್ನು ನೀಡಿ ಬಾಗಿನ ಅರ್ಪಿಸುವ ಸಂಪ್ರದಾಯ ಬೆಳೆದುಕೊಡು ಬಂದಿದೆ. ಎಂತಹ ವೈಜ್ಞಾನಿಕತೆ ಬೆಳೆದಿದ್ದರೂ ಕಾಲ ಕಾಲಕ್ಕೆ ಮಳೆ ಆದರೆ ಮಾತ್ರ ನಮ್ಮ ರೈತಾಪಿ ಜನತೆ ಬೆಳೆ ಬೆಳೆದು ಅನ್ನವನ್ನು ನೀಡಲು ಸಾಧ್ಯ ಎಂದರು.
ನಾಡಿನಲ್ಲಿ ತನ್ನದೇ ಆದಂತಹ ವಿಶಿಷ್ಟತೆ ಹೊಂದಿರುವ ಪುಣ್ಯ ಕ್ಷೇತ್ರ ನಮ್ಮ ಹಾರನಹಳ್ಳಿ ಕೋಡಿಮಠ ಕ್ಷೇತ್ರವಾಗಿದ್ದು, ಈ ಕ್ಷೇತ್ರದ ಎಲ್ಲ ಗುರುವರ್ಯರ ಆಶೀರ್ವಾದ ಹಾಗೂ ಪೀಠಾಧ್ಯಕ್ಷರಾದ ಡಾ. ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಗಳ ದಿವ್ಯ ಸಂದೇಶ ಹಾಗು ಸ್ಥಳ ಮಹಿಮೆಯ ಪ್ರಭಾವ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿ, ರಾಜ್ಯಾದ್ಯಂತ ಕೆರೆ ಕಟ್ಟೆಗಳು ಭರ್ತಿಯಾಗಿವೆ. ತಾಲ್ಲೂಕಿಗೆ ಶಾಶ್ವತ ನೀರಾವರಿ ಯೋಜನೆಗಳು ಶೀಘ್ರವಾಗಿ ಅನುಷ್ಠಾನ ಮಾಡುವಲ್ಲಿ ರಾಜ್ಯ ಸರ್ಕಾರ ಬದ್ದವಾಗಿದೆ. ಬಾಗಿನ ಅರ್ಪಣೆಯಂತಹ ಈ ಧಾರ್ಮಿಕ ಕಾರ್ಯಕ್ರಮದಿಂದ ಸರ್ವೇ ಜನಃ ಸುಖಿನೋ ಭವತುಃ ನುಡಿಯಂತೆ ಲೋಕ ಕಲ್ಯಾಣವಾಗಲಿ ಎಂದರು.
ಕೋಡಿಮಠದ ಉತ್ತರಾಧಿಕಾರಿ ಶ್ರೀ ಚೇತನ್ ಮರಿದೇವರು ಸ್ವಾಮಿಜಿ ಮಾತನಾಡಿ, ಪ್ರಕೃತಿ ತನ್ನ ಕೆಲಸವನ್ನು ತಾನು ಮಾಡುತ್ತಿರುತ್ತದೆ. ಆದರ ಸ್ವಾಭಾವಿಕ ಚಟುವಟಿಕೆಗಳಿಗೆ ಮಾನವನು ಅಡಚಣೆ ಉಂಟು ಮಾಡಿದಾಗ ಮಳೆ ಕ್ಷೀಣಿಸಿ ಬರಗಾಲದಂತಹ ಭೀಕರ ಅನುಭವವನ್ನು ನಾವು ಕಾಣಬೇಕಾಗುತ್ತದೆ. ಪ್ರಕೃತಿಯಲ್ಲಿ ಯಾವುದು ಆಸಾಧ್ಯವಲ್ಲ. ಆರೋಗ್ಯಕರ ಪರಿಸರವನ್ನು ನಾವು ಸದಾ ಸಂರಕ್ಷಿಸಿದಲ್ಲಿ ಪ್ರಕೃತಿ ನಮ್ಮನ್ನು ಸದಾ ರಕ್ಷಿಸುತ್ತದೆ. ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗುವುದರ ಮೂಲಕ ಕೆರೆ ಕಟ್ಟೆಗಳು ಭರ್ತಿಯಾಗುವ ಹಂತದಲ್ಲಿದ್ದರೆ, ಅನೇಕ ಕೆರೆಗಳು ಭರ್ತಿಯಾಗಿ ಅಂತರ್ಜಲ ಹೆಚ್ಚಾಗಿದೆ. ರೈತಾಪಿ ಜನತೆ ವ್ಯವಸಾಯ ಮತ್ತು ಉಪ ಕೃಷಿಗಳನ್ನು ನಡೆಸಿಕೊಂಡು ತಮ್ಮ ಜೀವನವನ್ನು ಸಾರ್ಥಕಪಡಿಸಿಕೊಳ್ಳಲಿ. ಭಗವಂತನ ಕೃಪಾಕಟಾಕ್ಷ ಸದಾ ಎಲ್ಲರ ಮೇಲಿರಲಿ. ಸಕಲ ಜೀವ ಸಂಕುಲಗಳು ನೆಮ್ಮದಿ ಜೀವನವನ್ನು ಸಾಗಿಸಲಿ ಎಂದು ಹಾರೈಸಿದರು.