ಅನ್ನದಾತೋ ಸುಖೀಭವ

ಕಲಬುರಗಿ:ನ.9:’ಕೃಷಿ ಎಂದರೆ ಕೇವಲ ಕೆಲಸವಲ್ಲ, ಕೃಷಿ ಎಂದರೆ ಜೀವಾಳ’ ಕೃಷಿ ಎಂಬುವುದು ಒಂದು ಕಲೆ ಎಲ್ಲರಿಗೂ ಅದು ತಿಳಿಯುವದಿಲ್ಲ. ಕೃಷಿಯಲ್ಲಿ ತೊಡಗಿ ದೇಶಕ್ಕೆ ಅನ್ನ ನೀಡುವುದು ನಮ್ಮೆಲ್ಲರ ಕರ್ತವ್ಯ ಎಂಬುವಂತೆ ಇಂದಿನ ಯುವ ಪೀಳಿಗೆಗೆ ತಿಳಿಸಿ ಹೊಸ ತಂತ್ರಜ್ಞಾನಗಳನ್ನು ಬಳಸಿ ವ್ಯವಸಾಯವನ್ನು ಅಭಿವೃದ್ಧಿ ಪಡಿಸಬೇಕಿದೆ. ಈ ನಿಟ್ಟಿನಲ್ಲಿ ಕೃಷಿ ಮಹಾವಿದ್ಯಾಲಯ ಭೀಮರಾಯನಗುಡಿಯ ಅಂತಿಮ ವರ್ಷದ ಬಿ.ಎಸ್ಸಿ(ಹಾನ) ಕೃಷಿ ವಿದ್ಯಾರ್ಥಿಗಳು 71 ದಿನಗಳ ಕಾಲ ಯಲಗೋಡ ಗ್ರಾಮದಲ್ಲಿದ್ದು ತಮ್ಮ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರವನ್ನು ಹಮ್ಮಿಕೊಂಡು ಈಗಾಗಲೇ ಯಶಸ್ವಿಯಾಗಿ ಮುಗಿಸಿ ನವಂಬರ್ 4 ಶುಕ್ರವಾರದಂದು ಕೃಷಿ ವಸ್ತು ಪ್ರದರ್ಶನ ಹಾಗೂ ಸಮಾರೋಪ ಸಮಾರಂಭದೊಂದಿಗೆ ಅಂತ್ಯಗೊಳಿಸಿದ್ದಾರೆ.

ಸುಮಾರು 71 ದಿನಗಳಿಂದ ಪ್ರಾರಂಭವಾದ ಈ ಶಿಬಿರದಲ್ಲಿ ಯೋಜನೆಯ ಅನುಸಾರವಾಗಿ
ದಿನನಿತ್ಯ ಹಾಗು ವಾರಾಂತ್ಯ ಚಟುವಟಿಕಗಳನ್ನು ನಿರ್ವಹಿಸಿ ರೈತರಿಗೆ ಉತ್ತಮ ಮಾಹಿತಿ ಒದಗಿಸುವಲ್ಲಿ ಸಫಲರಾಗಿದ್ದಾರೆ. ರೈತರಿಂದ ಪ್ರಾಯೋಗಿಕವಾಗಿ ಕೃಷಿ ಚಟುವಟಿಕೆಗಳನ್ನು ಸ್ವತಹ ತಾವೇ ಭಾಗಿಯಾಗಿ ಕಲಿತಿದ್ದಾರೆ, ಅಲ್ಲದೆ ರೈತರಿಗೆ ತಿಳಿಯದ ನೂತನ ತಂತ್ರಜ್ಞಾನಗಳನ್ನು ತಿಳಿಸಿಕೊಟ್ಟಿದ್ದಾರೆ. ತಮ್ಮ ಮೊದಲ ವಾರದಲ್ಲಿಯೇ ಊರಿನ ವಿಶ್ಲೇಷಣೆ ಮಾಡಿ, ಸಾಮಾನ್ಯ ಮಾಹಿತಿ ತಿಳಿದುಕೊಂಡು ಗ್ರಾಮದ ನಕ್ಷೆ ಹಾಗೂ ಋತು ಚಕ್ರ ನಕ್ಷೆಯನ್ನು ರಚಿಸಿದರು. ಜಾಥಾ ಕಾರ್ಯಕ್ರಮದೊಂದಿಗೆ ಪ್ರಾರಂಭಿಸಿ ಊರಿನ ಎಲ್ಲಾ ಸಂಸ್ಥೆಗಳಾದ ಶಾಲೆ, ಪಂಚಾಯಿತಿ,ಮಹಿಳಾ ಸಂಘಗಳಿಗೆ ಭೇಟಿ ನೀಡಿದರು.

ರೈತರಿಗೆ ಉಪಯುಕ್ತವಾಗುವಂತೆ ಮಣ್ಣಿನ ಮಾದರಿ ತೆಗೆಯುವ ವಿಧಾನವನ್ನು ತಿಳಿಸಿ, ಮಣ್ಣು ಪರೀಕ್ಷೆಯ ಮಹತ್ವವನ್ನು ತಿಳಿಸಿಕೊಟ್ಟಿದ್ದಾರೆ. ತೊಗರಿಯಲ್ಲಿ ಕುಡಿ ಚಿವುಟುವ ವಿಧಾನವನ್ನು ತಿಳಿಸಿದ್ದು ಈಗಾಗಲೇ ರೈತರು ಅಳವಡಿಸಿಕೊಂಡಿರುವುದು ವಿಶೇಷ. ಯಲಗೋಡ ಗ್ರಾಮದಲ್ಲಿ ಹತ್ತಿಯನ್ನು ಹೆಚ್ಚಾಗಿ ಬೆಳೆಯುವುದರಿಂದ ಹತ್ತಿಯಲ್ಲಿ ಗುಲಾಬಿಕಾಯಿಕೊರಕವನ್ನು ನಿರ್ವಹಿಸಲು ವಿವಿಧ ತಂತ್ರಜ್ಞಾನಗಳ ಬಗ್ಗೆ ಪ್ರಾತ್ಯಕ್ಷಿಕೆಯನ್ನು ಹಲವಾರು ರೈತರ ಹೊಲದಲ್ಲಿ ಮಾಡಿದ್ದಾರೆ.

ದಿನನಿತ್ಯ ಚಟುವಟಿಕೆಗಳ ಜೊತೆಜೊತೆಗೆ ಪ್ರತಿವಾರಾಂತ್ಯದಲ್ಲಿ ಬೆಳೆ ವಿಚಾರ ಸಂಕೀರ್ಣ ಕಾರ್ಯಕ್ರಮಗಳನ್ನು ಆಯೋಜಿಸಿ ಕಾಲೇಜಿನ ವಿಜ್ಞಾನಿಗಳಿಂದ ಬೆಳೆಯ ಸಂಪೂರ್ಣ ಮಾಹಿತಿ ನೀಡಿದ್ದಲ್ಲದೆ, ರೈತರ ಸಮಸ್ಯೆಗಳಿಗೆ ಪರಿಹಾರ ನೀಡುವ ಕಾರ್ಯಗಳನ್ನು ಮಾಡಿದ್ದಾರೆ. ಹಳ್ಳಿಯಲ್ಲಿ ಪೌಷ್ಟಿಕತೆ ಹಾಗೂ ಸಮತೋಲನ ಆಹಾರದ ಮಹತ್ವ ತಿಳಿಸಲು ಚಿಕಿತ್ಸಾ ಶಿಬಿರವನ್ನು ಏರ್ಪಡಿಸಿ ಊರಿನ ಜನರಿಗೆ ಮತ್ತು ಶಾಲಾ ಮಕ್ಕಳಿಗೆ ಉತ್ತಮ ಆರೋಗ್ಯದ ಅರಿವು ಮೂಡಿಸಿದ್ದಾರೆ.

ಅಷ್ಟೇ ಅಲ್ಲದೆ ನನ್ನ ಚಿಕಿತ್ಸಾಲಯವನ್ನು ನಿರ್ಮಿಸಿ ರೈತರಿಗೆ ಬೆಳೆಯ ಸಮಗ್ರ ರೋಗ ಮತ್ತು ಕೀಟ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿ, ರೈತರ ಸಮಸ್ಯೆಗಳಿಗೆ ಪರಿಹಾರಗಳನ್ನು ಸೂಚಿಸಿದ್ದಾರೆ. ಎರೆಹುಳು ಮತ್ತು ಸಗಣಿ ಗೊಬ್ಬರ ತಯಾರಿಕೆ ಪ್ರಾತ್ಯಕ್ಷಿಕೆಗಳನ್ನು ತೋರಿಸಿದ್ದಾರೆ.

ತಮ್ಮ ಕೊನೆಯ ದಿನದಂದು ಕೃಷಿ ವಸ್ತು ಪ್ರದರ್ಶನ ಹಾಗೂ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಸುಮಾರು 25ಕ್ಕೂ ಹೆಚ್ಚು ಮಳಿಗೆಗಳನ್ನು ಆಯೋಜಿಸಿ ವಿವಿಧ ರೀತಿಯ ಮಾದರಿಗಳನ್ನು ಪ್ರದರ್ಶಿಸಿದರು. ಮಳಿಗೆಗಳಿಗೆ ಊರಿನ ಜನರಿಂದ, ರೈತರಿಂದ ಹಾಗೂ ಶಾಲಾ ಮಕ್ಕಳಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು ಊರಿನ ಜನರು ಹರ್ಷ ವ್ಯಕ್ತ ಪಡಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಡೀನ್ ರಾದ ಡಾ|| ಎ.ಎಸ್.ಚನ್ನಬಸವಣ್ಣರವರು ಮಾತನಾಡಿ ಗ್ರಾಮದ ಜನರು ಮಾಡಿದ ಸಹಾಯ ಸಹಕಾರಗಳಿಗೆ ಧನ್ಯವಾದಗಳನ್ನು ತಿಳಿಸಿ, ಕೃಷಿಯಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ರೈತರು ಹೊಸಹೊಸ ತಳಿಗಳನ್ನು ಅನುಸರಿಸಿ ಯಶಸ್ವಿಯಾಗಬೇಕೆಂದು ಹೇಳಿದರು.

ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದ ಪೂಜ್ಯ ಶ್ರೀ ಮ. 3. ಪ್ರ ಗುರುಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ವಿದ್ಯಾರ್ಥಿಗಳು ಊರಿನ ಜನರು ನೀಡಿದ ಪ್ರೀತಿ, ವಾತ್ಸಲ್ಯ ಹಾಗೂ ಸಹಕಾರಕ್ಕೆ ಪ್ರತೀಕವಾಗಿ ಊರಿನವರನ್ನು ಮತ್ತು ತಮಗೆ ಸಹಕಾರ ನೀಡಿದ ಪ್ರತಿಯೊಬ್ಬರನ್ನು ಸನ್ಮಾನಿಸುವುದರ ಮೂಲಕ ಗೌರವ ಸೂಚಿಸಿದರು.

“ಕೃಷಿ ಸಂಭ್ರಮ” ಕಾರ್ಯಕ್ರಮವು ಆತೀ ಸೊಬಗಿನಿಂದ ನಡೆದು ಯಶಸ್ವಿಯಾಗಿದೆಯೆಂದು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಸಂಯೋಜಕರು ಹಾಗೂ ಇತರ ಪ್ರಾಧ್ಯಾಪಕರು ಹರ್ಷ ವ್ಯಕ್ತಪಡಿಸಿದರು. ಶಿಬಿರವು ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ಹೆಚ್ಚಿಸಿ ಬೆರೆಯುವ ಹಾಗೂ ಅವರ ಸಮಸ್ಯೆಗಳಿಗೆ ಪರಿಹಾರ ನೀಡುವ ಮನೋಭಾವವನ್ನು ಬೆಳೆಸಿಕೊಳ್ಳುವಲ್ಲಿ ಸಹಕಾರಿಯಾಗಿದೆ.