ಅನ್ನದಾತರ ಪಂಪ್‌ಸೆಟ್ ವೈರ್‌ಗೆ ಕನ್ನ!

ದೇವದುರ್ಗ,ಜು.೦೯-
ತಾಲೂಕಿನ ಜಾಲಹಳ್ಳಿ ಸಮೀಪದ ಲಿಂಗದಹಳ್ಳಿ ಗ್ರಾಮದ ರೈತರು ಕೃಷ್ಣಾನದಿಗೆ ಅಳವಡಿಸಿದ್ದ ಪಂಪ್‌ಸೆಟ್‌ನ ವಿದ್ಯುತ್ ವೈರ್‌ಗೆ ಖದೀಮರು ಕನ್ನ ಹಾಕಿದ್ದು ಅನ್ನದಾತರ ಆತಂಕಗೊಂಡಿದ್ದಾರೆ. ನದಿದಂಡೆ ಗ್ರಾಮದ ಸುಮಾರು ಹತ್ತಕ್ಕೂ ಹೆಚ್ಚು ರೈತರ ಪಂಪ್‌ಸೆಟ್‌ನ ವೈರ್ ಶುಕ್ರವಾರ ತಡರಾತ್ರಿ ಕಳ್ಳತನ ಮಾಡಿದ್ದು ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ.
ಕೃಷ್ಣಾನದಿ ನೀರು ಬಳಸಿಕೊಂಡು ಒಕ್ಕಲುತನ ಮಾಡುವ ಲಿಂಗದಹಳ್ಳಿ ರೈತರು ನದಿಯಿಂದ ನೀರು ಹರಿಸಿಕೊಳ್ಳುತ್ತಾರೆ. ಸ್ವತಂ ಖರ್ಚಲ್ಲೆ ಪಂಪ್‌ಸೆಟ್, ಟಿಸಿ, ವೈರ್ ಎಳೆದುಕೊಂಡಿದ್ದಾರೆ. ಮುಂಗಾರು ಕೈಕೊಟ್ಟಿದ್ದರಿಂದ ಕೃಷ್ಣಾನದಿಯಲ್ಲಿ ಅಳಿದುಳಿದ ನೀರನ್ನೆ ಬಳಸಿಕೊಂಡು ಭತ್ತದ ಸಸಿ ಮಡಿಹಾಕಿದ್ದಾರೆ. ಇನ್ನು ಕೆಲರೈತರು ಹತ್ತಿ, ಮೆಣಸಿನಕಾಯಿ, ತೊಗರಿ ಬಿತ್ತನೆ ಮಾಡಿದ್ದಾರೆ. ಬೆಳೆಗಳಿಗೆ ಮಳೆಯ ಅಗತ್ಯವಿದ್ದು ಸುಮಾರು ಒಂದು ತಿಂಗಳಿನಿಂದ ಸಮರ್ಪಕವಾಗಿ ಮಳೆಬಂದಿಲ್ಲ.
ಬೆಳೆ ರಕ್ಷಿಸಿಕೊಳ್ಳಲು ಕೃಷ್ಣಾನದಿಗೆ ಪಂಪ್‌ಸೆಟ್ ಹಾಕಿಸಿ ಜಮೀನಿಗೆ ನೀರು ಬಿಡುತ್ತಿದ್ದಾರೆ. ಗ್ರಾಮದ ರೈತರಾದ ಪರನಗೌಡ, ಸೋಮನಗೌಡ, ರಾಮಚಂದ್ರ, ಸ್ವಾಮಿರೆಡ್ಡಿ, ಬಸವರಾಜ ಸೇರಿ ಸುಮಾರು ಹತ್ತುಕ್ಕೂ ಹೆಚ್ಚು ರೈತರ ವಿದ್ಯುತ್ ವೈರ್ ಕಳ್ಳತನ ಮಾಡಲಾಗಿದೆ. ಕಳೆದ ವರ್ಷಕೂಡ ಇದೇ ರೀತಿ ಕಳ್ಳತನವಾಗಿತ್ತು. ನದಿಯಲ್ಲಿ ನೀರು ಕಡಿಮೆ ಇರುವುದರಿಂದ ಪಕ್ಕದ ಸುರಪುರ ತಾಲೂಕಿನ ಕೆಲವರು ರಾತ್ರಿನದಿ ದಾಟಿಬಂದು ಕಳ್ಳತನ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಕೃಷ್ಣಾನದಿಯಲ್ಲಿ ನೀರಿನ ಹರಿವು ಕಡಿಮೆ ಇರುವುದರಿಂದ ದಂಡೆಗೆ ಹೊಂದಿಕೊಂಡಿರುವ ರೈತರು ದೂರದಿಂದ ವಿದ್ಯುತ್ ಸಂಪರ್ಕ ಪಡೆದು ಪಂಪ್‌ಸೆಟ್ ಅಳವಡಿಸಲು ನೂರಾರುಅಡಿ ಉದ್ದದ ವೈರ್ ಎಳೆದಿದ್ದಾರೆ. ಹಗಲಿನಲ್ಲಿ ಮಾತ್ರ ಪಂಪ್‌ಸೆಟ್ ವಿದ್ಯುತ್ ಇರಲಿದ್ದು ರಾತ್ರಿ ಕಡಿತವಾಗಲಿದೆ. ಹೀಗಾಗಿ ರಾತ್ರಿವೇಳೆ ವೈರ್ ಕಳ್ಳತನ ಮಾಡಿದ್ದು, ಸದ್ಯ ನೀರು ಬಿಡಲು ಸಮಸ್ಯೆಯಾಗಿದೆ.
ಪ್ರತಿಪೀಟ್ ವಿದ್ಯುತ್ ವೈರ್‌ಗೆ ೩೦ ರೂ. ಬೆಲೆಯಿದ್ದು ಒಬ್ಬೊಬ್ಬ ರೈತ ಕನಿಷ್ಠ ೫೦೦ಅಡಿ ವೈರ್ ಅಳವಡಿಸಿಕೊಂಡಿದ್ದಾರೆ. ೧೫-೨೦ಸಾವಿರ ರೂ. ಬೆಲೆ ಬಾಳುವ ವೈರ್ ಕಳ್ಳತನವಾಗಿದೆ. ಒಂದೆಡೆ ಮುಂಗಾರು ಮಳೆ ಕೈಕೊಟ್ಟಿರುವುದು, ಇನ್ನೊಂದೆಡೆ ವಿದ್ಯುತ್ ಕಣ್ಣಾ ಮುಚ್ಚಾಲೆಆಟಕ್ಕೆ ಬೇಸತ್ತಿದ್ದ ರೈತರಿಗೆ ಈಗ ವಿದ್ಯುತ್ ವೈರ್ ಕಳ್ಳತನ ಗಾಯದ ಮೇಲೆ ಬರೆಎಳೆದಂತಾಗಿದೆ.

ಕೋಟ್=======
ಸುಮಾರು ೧೫ಸಾವಿರ ರೂ. ಖರ್ಚುಮಾಡಿ ಟಿಸಿಯಿಂದ ನದಿದಂಡೆಗೆ ಅಳವಡಿಸಿದ್ದ ಪಂಪ್‌ಸೆಟ್‌ಗೆ ೫೦೦ಫೀಟ್ ವೈರ್ ಹಾಕಿದ್ದೆವು. ತಡರಾತ್ರಿ ವೈರ್ ಕಟ್‌ಮಾಡಿ ಕಳ್ಳತನ ಮಾಡಿದ್ದಾರೆ. ಒಂದೆಡೆ ಮಳೆಯಿಲ್ಲ, ಇನ್ನೊಂದೆಡೆ ಕರೆಂಟ್ ಸರಿಯಿರಲ್ಲ. ಇದರ ನಡುವೆ ವೈರ್ ಕಳ್ಳತನ ಮಾಡಿದ್ದು ನೀರು ಹರಿಸದಂತಾಗಿದೆ. ಪೊಲೀಸರು ನದಿದಂಡೆ ಮೇಲೆ ರಾತ್ರಿ ಗಸ್ತುತಿರುಗಿ ಕಳ್ಳರ ಪತ್ತೆಹಚ್ಚಬೇಕು.
-ಮುತ್ತಣ್ಣ
ಲಿಂಗದಹಳ್ಳಿ ರೈತ