ಅನ್ನದಾತರ ಜತೆ ನಾಳೆ ಸಭೆ

ನವದೆಹಲಿ, ಜ.೩- ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ಜನವರಿ ೨೬ರಂದು ದೆಹಲಿಗೆ ಪ್ರವೇಶ ಮಾಡಬೇಕಾಗುತ್ತದೆ ಎಂದು ರೈತರು ನೇರವಾಗಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ರೈತರು ದೆಹಲಿಯ ಗಡಿಭಾಗದಲ್ಲಿ ೪೦ ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು ಹಿನ್ನೆಲೆ ನಾಳೆ ೭ನೇ ಸುತ್ತಿನ ಮಾತುಕತೆಗೆ ಕೇಂದ್ರ ಸರ್ಕಾರ ಕರೆದಿದೆ.
ರೈತ ನಾಯಕರ ಎಚ್ಚರಿಕೆಯ ಹಿನ್ನೆಲೆಯಲ್ಲಿ ನಾಳಿನ ಸಭೆ ಮಹತ್ವ ಪಡೆದುಕೊಂಡಿದೆ..ನಾಳೆ ನಡೆಯುವ ಕೇಂದ್ರ ಸರ್ಕಾರದ ಏಳನೇ ಸುತ್ತಿನ ಮಾತುಕತೆ ಮತ್ತೊಮ್ಮೆ ವಿಫಲವಾದರೆ ಜನವರಿ ೨೬ರಂದು ಸಹಸ್ರಾರು ಸಂಖ್ಯೆಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ನಡೆಸುವುದಾಗಿ ಸಂಯುಕ್ತ ಮೋರ್ಚಾ ಹೇಳಿದೆ.
ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಕಳೆದ ೩೯ ದಿನಗಳಿಗೂ ಹೆಚ್ಚು ಸಮಯದಿಂದ ಹೋರಾಟ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಮೀನಾಮೇಷ ಎಣಿಸುತ್ತಿದೆ ಇದರಿಂದ ತಿರುಗಿ ಬಿದ್ದಿರುವ ರೈತರು ಅಂತಿಮ ಗಡುವು ನೀಡಿದ್ದಾರೆ.
ನಾಳಿನ ಮಾತುಕತೆ ಹಿನ್ನಲೆಯಲ್ಲಿ ದೆಹಲಿಯಲ್ಲಿಂದು ಸಂಯುಕ್ತ ಕಿಸಾನ್ ಮೋರ್ಚಾದ ಏಳು ಸದಸ್ಯರ ಸಮನ್ವಯ ಸಮಿತಿ ವಿಷಯವನ್ನು ತಿಳಿಸಿದೆ.
ಕೇಂದ್ರ ಸರ್ಕಾರ ರೈತರ ಹೆಸರಲ್ಲಿ ರೈತರಿಗೆ ವಂಚನೆ ಮಾಡಲು ಮುಂದಾಗಿದೆ ಇದನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಲು ಸಾಧ್ಯವಿಲ್ಲ ಕೂಡಲೇ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.
ನಾಳೆ ನಡೆಯಲಿರುವ ಮಾತುಕತೆಯಲ್ಲಿ ಕೇಂದ್ರ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸಬೇಕು ಇಲ್ಲದಿದ್ದರೆ ಅದರ ಪರಿಣಾಮವನ್ನು ಕೇಂದ್ರ ಸರ್ಕಾರವೇ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ