ಅನೈತಿಕ ಸಂಬಂಧ ಮಚ್ಚಿನೇಟಿಗೆ ಪತ್ನಿ ಬಲಿ

ಬೆಂಗಳೂರು,ಜು.೧೬-ಅನೈತಿಕ ಸಂಬಂಧದ ಶಂಕೆಯ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಪತಿಯೊಬ್ಬ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದ ದುರ್ಘಟನೆ ಆನೇಕಲ್ ಹೂವಾಡಿಗಾರ ಬೀದಿಯಲ್ಲಿ ನಡೆದಿದೆ.
ಹೂವಾಡಿಗಾರ ಬೀದಿಯ ಪ್ರೇಮ (೨೫) ಕೊಲೆಯಾದವರು, ಕೃತ್ಯವೆಸಗಿ ಪರಾರಿಯಾಗಿರುವ ಪತಿ ವೆಂಕಟೇಶಾಚಾರಿ ಪತ್ತೆಗೆ ತೀವ್ರ ಶೋಧ ನಡೆಸಲಾಗಿದೆ.
ಕಳೆದ ೯ ವರ್ಷದ ಹಿಂದೆ ಪ್ರೇಮ ಮತ್ತು ವೆಂಕಟೇಶಾಚಾರಿ ಪ್ರೀತಿಸಿ ಮದುವೆಯಾಗಿದ್ದು ದಂಪತಿಗೆ ೭ ವರ್ಷದ ಮಗಳಿದ್ದಾಳೆ. ನಿನ್ನೆ ರಾತ್ರಿ ಅನೈತಿಕ ಸಂಬಂಧದ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ಆಗಿದೆ.
ಪತ್ನಿ ಮೊಬೈಲ್‌ನಲ್ಲಿ ಬೇರೊಬ್ಬನ ಜೊತೆ ಮಾತನಾಡುತ್ತಿರುವುದನ್ನು ಕೇಳಿಸಿಕೊಂಡಿದ್ದ ವೆಂಕಟೇಶಾಚಾರಿ ರೊಚ್ಚಿಗೆದ್ದು ಇಂದು ಬೆಳಗ್ಗೆ ೬ ಗಂಟೆ ಸುಮಾರಿಗೆ ಪತ್ನಿಯ ಕತ್ತು ಹಾಗೂ ಕೈ ಭಾಗಕ್ಕೆ ಮಚ್ಚಿನಿಂದ ಕ್ರೂರವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.
ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಪ್ರೇಮ ಅವರನ್ನು ಅಕ್ಕಪಕ್ಕದ ಮನೆಯವರು ಗಮನಿಸಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರಾದರೂ ಆ ವೇಳೆಗಾಗಲೇ ಮೃತಪಟ್ಟಿದ್ದರು.
ಸುದ್ದಿ ತಿಳಿದ ತಕ್ಷಣವೇ ಘಟನಾ ಸ್ಥಳಕ್ಕೆ ಆನೇಕಲ್ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಆರೋಪಿ ಪತ್ತೆಗೆ ಶೋಧ ಕೈಗೊಂಡಿದ್ದಾರೆ.