ಅನೈತಿಕ ಸಂಬಂಧ ಪತ್ನಿ ಕೊಂದು ಅತ್ತೆಗೆ ವಿಷಯ ತಿಳಿಸಿದ ಪತಿ

ಬೆಂಗಳೂರು,ಜು.೨೭-ಅಕ್ರಮ ಸಂಬಂಧದಿಂದ ಆಕ್ರೋಶಗೊಂಡ ಪತಿಯೊಬ್ಬ ಪತ್ನಿಯನ್ನು ಕೊಲೆ ಮಾಡಿ ನಾನು ನಿಮ್ಮ ಮಗಳನ್ನ ಕೊಲೆ ಮಾಡಿರುವುದಾಗಿ ಅತ್ತೆಗೆ ಫೋನ್ ಕರೆ ಮಾಡಿ ಹೇಳಿದ ದುರ್ಘಟನೆ ಚಂದ್ರ ಲೇಔಟ್ ನ ಮೂಡಲಪಾಳ್ಯದಲ್ಲಿ ನಡೆದಿದೆ. ಮೂಡಲಪಾಳ್ಯದ ಶಿವಾನಂದ ನಗರದ ಗೀತಾ (೩೩) ಕೊಲೆಯಾದವರು.ಕೃತ್ಯ ನಡೆಸಿದ ಪತಿ ಶಂಕರ್ (೪೩)ನನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಕಳೆದ ೧೩ ವರ್ಷಗಳ ಹಿಂದೆ ಗೀತಾಳನ್ನು ಶಂಕರ್ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿವೆ,ಇತ್ತೀಚಿಗೆ ಗೀತಾ ಪರಪುರುಷನೊಂದಿಗೆ ಸಂಬಂಧ ಹೊಂದಿದ್ದರು.
ವಿಷಯ ತಿಳಿದ ಪತಿ ಶಂಕರ್ ಅವರು ಗೀತಾಗೆ ಬುದ್ಧಿ ಹೇಳಿದ್ದರು. ಆದರೂ ಗೀತಾ ಅನೈತಿಕ ಸಂಬಂಧ ಮುಂದುವರಿಸಿದ್ದರು. ಅಷ್ಟೇ ಅಲ್ಲದೇ ತಮ್ಮ ಪ್ರಿಯಕರನೊಂದಿಗೆ ಸೇರಿ ಪತಿಗೆ ಕೊಲೆ ಬೆದರಿಕೆ ಒಡ್ಡಿದ್ದರು. ಕಳೆದ ಹದಿನೈದು ದಿನಗಳಿಂದ ದಂಪತಿ ಜಗಳ ವಿಕೋಪಕ್ಕೆ ತಿರುಗಿತ್ತು.
ಅನೈತಿಕ ಸಂಬಂಧದ ವಿಚಾರವಾಗಿಯೇ ನಿನ್ನೆ ರಾತ್ರಿ ಮತ್ತೆ ನಡೆದ ಜಗಳ ವಿಕೋಪಕ್ಕೆ ತಿರುಗಿದಾಗ ಆಕ್ರೋಶಕ್ಕೊಳಗಾದ ಶಂಕರ್ ಹರಿತವಾದ ಆಯುಧದಿಂದ ಗೀತಾಳ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ.
ಪತ್ನಿಯನ್ನು ಕೊಂದು ಶವವನ್ನು ಸೋಫಾ ಸೆಟ್ ಮೇಲೆ ತಂದಿಟ್ಟು, ಬಳಿಕ ಅತ್ತೆಗೆ ಕರೆ ಮಾಡಿ ಕೊಲೆ ಮಾಡಿರುವುದಾಗಿ ಹೇಳಿದ್ದಾನೆ. ಬಳಿಕ ಸಂಬಂಧಿಕರಿಗೆ, ಸ್ನೇಹಿತರಿಗೆ ವಿಷಯ ತಿಳಿಸಿ ಪೊಲೀಸರಿಗೆ ಶರಣಾಗಿದ್ದಾನೆ. ಚಂದ್ರಾಲೇಔಟ್ ಪೊಲೀಸರು ಕೇಸು ದಾಖಲಿಸಿಕೊಂಡು ಶಂಕರ್‌ನನ್ನು ಬಂಧಿಸಿದ್ದಾರೆ.
ಅವರ ಮನೆಯಲ್ಲಿ ಸಣ್ಣಪುಟ್ಟ ಗಲಾಟೆ ಆಗ್ತಿತ್ತು. ಒಂದು ತಿಂಗಳಿನಿಂದ ಮನೆಯಲ್ಲಿ ಗಲಾಟೆ ಜಾಸ್ತಿಯಾಗಿತ್ತು. ಗೀತಾ ಹಾಗೂ ಪತಿ ಎಲ್ಲರ ಜೊತೆ ಚೆನ್ನಾಗಿ ಮಾತಾಡುತ್ತಿದ್ದರು. ಪತ್ನಿ ಬೇರೆಯವರ ಸಹವಾಸ ಮಾಡಿದ್ದಾಳೆ. ಮನೆಗೆ ಯಾರೋ ಬಂದು ಹೋಗುತ್ತಿದ್ದಾರೆ ಎಂದು ಹೇಳುತ್ತಿದ್ದ. ಅವರ ಮನೆಯಲ್ಲಿ ಯಾವಾಗಲೂ ತಡರಾತ್ರಿವರೆಗೂ ಟಿವಿ ಆನ್ ಆಗಿರುತ್ತದೆ. ನಿನ್ನೆ ಟಿವಿ ಧ್ವನಿ ಜಾಸ್ತಿ ಇಟ್ಟಿದ್ದರು. ಹೀಗಾಗಿ ಜಗಳ ಆಡಿರುವುದು ನಮಗೆ ಗೊತ್ತಾಗಿಲ್ಲ. ಮರ್ಯಾದೆಗೆ ಅಂಜಿ ಕೊಲೆ ಮಾಡಿದೆ ಅಂದಿದ್ದಾರೆ. ಬೇರೆ ಸಂಬಂಧದ ಬಗ್ಗೆ ನಮಗೆ ಏನೂ ಗೊತ್ತಿಲ್ಲ ಎಂದು ಮೃತಳ ಸಂಬಂಧಿ ರಾಜೇಶ್ವರಿ ಹೇಳಿಕೆ ನೀಡಿದ್ದಾರೆ.