ಅನೈತಿಕ ಸಂಬಂಧಕ್ಕೆ ಮಹಿಳೆ ಬಲಿ

ಬೆಂಗಳೂರು,ಏ.೨೭-ಅನೈತಿಕ ಸಂಬಂಧಕ್ಕೆ ಮಹಿಳೆ ಬಲಿಯಾಗಿರುವ ದಾರುಣ ಘಟನೆ ಬಸವೇಶ್ವರನಗರದ ಜೆಸಿ ನಗರದಲ್ಲಿ ನಡೆದಿದೆ.
ಜೆಸಿ ನಗರದ ಸರಗುಣಂ (೩೫) ಕೊಲೆಯಾದವರು,ಮನೆ ಕೆಲಸ ಮಾಡುತ್ತಿದ್ದ ಸರಗುಣಂ, ಆಟೋ ಚಾಲಕನಾಗಿದ್ದ ಗಣೇಶ್ (೨೨) ಜೊತೆ ಅನೈತಿಕ ಸಂಬಂಧ ಹೊಂದಿದ್ದಳು.
ಇದಲ್ಲದೆ ಆತನಿಗೆ ೫೦ ಸಾವಿರ ಹಣವನ್ನು ನೀಡಿ ಬಾಡಿಗೆ ಮನೆ ಕೂಡ ಮಾಡಿಕೊಟ್ಟಿದ್ದಳು. ಈ ಮಧ್ಯೆ ಬೇರೆ ಮಹಿಳೆ ಜೊತೆ ಗಣೇಶ್ ಸಲುಗೆಯಿಂದ ಇರುವ ಮಾಹಿತಿ ತಿಳಿದು ನಿನ್ನೆ ಯುವಕನ ಮನೆಗೆ ಸರಗುಣಂ ಬಂದಿದ್ದಳು.
ಈ ವೇಳೆ ನಾನೇ ಹಣಕೊಟ್ಟು, ಮನೆ ಮಾಡಿಕೊಟ್ಟು ನಿನ್ನ ನೋಡಿಕೊಳ್ಳುತ್ತಿದ್ದರೂ ಬೇರೆ ಮಹಿಳೆ ನೋಡಿಕೊಳ್ಳುತ್ತಿಯಾ ನನ್ನ ಹಣ ವಾಪಸ್ ಕೊಡು, ಸಲುಗೆಯಿಂದಿರುವ ಮಹಿಳೆ ಯಾರೆಂದು ಹೇಳು ಎಂದು ಪ್ರಶ್ನೆ ಮಾಡಿದಾಗ ಗಲಾಟೆ ಜೋರಾಗಿದೆ.
ಈ ವೇಳೆ ಗಣೇಶ್ ನಾನು ಸಾಯುವುದಾಗಿ ಹಗ್ಗದಿಂದ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಮುಂದಾಗಿದಾಗ ಸರಗುಣಂ
ಅಡ್ಡ ಬಂದಿದ್ದು, ಯುವಕ ಕೆಳಗಿಳಿದಿದ್ದ. ಇದೇ ಸಮಯದಲ್ಲಿ ತಾನು ಸಾಯುವೆ ಎಂದು ಸರಗುಣಂ ನೇಣಿನ ಕುಣಿಕೆಯನ್ನು ಕುತ್ತಿಗೆಗೆ ಹಾಕೊಂಡಿದ್ದಾಳೆ.
ಇದೇ ವೇಳೆ ಗಣೇಶ್ ಹಗ್ಗ ಎಳೆದು ಚೇರ್ ಒದ್ದಿದ್ದು, ಹಗ್ಗ ಕತ್ತಿಗೆ ಬಿಗಿದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಳು.
ನಂತರ ಆಕೆಯನ್ನು ಗಣೇಶ್ ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಪೊಲೀಸರ ದಿಕ್ಕು ತಪ್ಪಿಸಲು ಆತ್ಮಹತ್ಯೆ ಯತ್ನ ಮಾಡಿದ್ದಾಳೆಂದು ಡ್ರಾಮಾ ಮಾಡಿದ್ದ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಬಸವೇಶ್ವರನಗರ ಪೊಲೀಸರು ಅನುಮಾನದ ಮೇಲೆ ಆರೋಪಿ ಗಣೇಶ್?ನನ್ನ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕೃತ್ಯವನ್ನು ಬಾಯ್ಬಿಟ್ಟಿದ್ದಾನೆ.
ಇನ್ನು ಸರಗುಣಂಗೆ ಈಗಾಗಲೇ ಮದುವೆಯಾಗಿ ೧೭ ವರ್ಷದ ಮಗು ಕೂಡ ಇದೆ. ಆದರೂ ಕೂಡ ಗಣೇಶ್ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದು, ಇದೀಗ ಸಾವಿನ ಮನೆ ಸೆರಿದ್ದಾಳೆ. ಈ ಕುರಿತು ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.