ಅನೇಕ ವಾಹನ ಜಪ್ತಿ – ದಂಡ : ಕೆಲ ಯುವಕರಿಗೆ ಬೆನ್ನು ಬಾಗಿಸಿ ನಿಲ್ಲುವ ಶಿಕ್ಷೆ

ವೀಕೆಂಡ್ ಕರ್ಫ್ಯೂ : ಅನಗತ್ಯ ಓಡಾಟ, ಲಾಠಿ ರುಚಿ – ಬಹುತೇಕ ಕಡೆ ರಸ್ತೆಗಳು ಬಿಕೋ

 • ರಾಯಚೂರು.ಏ.೨೪- ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಆದೇಶದನ್ವಯ ಮೊದಲ ವೀಕೆಂಡ್ ಕರ್ಫ್ಯೂ ಇಂದು ಭಾರೀ ಕಟ್ಟುನಿಟ್ಟಿನಿಂದ ಅನುಷ್ಠಾನಗೊಳಿಸಲಾಯಿತು.
  ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಅಧಿಕಾರಿಗಳು ಲಾಕ್ ಡೌನ್ ಮಾದರಿಯಲ್ಲಿಯೇ ಎಲ್ಲಾವನ್ನು ಬಂದ್ ಮಾಡಿಸುವ ಮೂಲಕ ಕೊರೊನಾ ಹರಡುವಿಕೆ ತಡೆಯುವ ಮಹಾ ಸಂಘರ್ಷ ನಡೆಸಲಾಯಿತು. ಮುಂಜಾನೆ ೬ ಗಂಟೆಯಿಂದ ೧೦ ಗಂಟೆವರೆಗೆ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಿದ ಅಧಿಕಾರಿಗಳು ನಂತರ ಸಂಪೂರ್ಣ ಲಾಕ್ ಡೌನ್ ನಿರ್ವಹಿಸಿದರು. ಇಂದು ವಾರದ ಕೊನೆದಿನವಾಗಿದ್ದರೂ ಯಾವುದೇ ಅಂಗಡಿ ಮುಂಗಟ್ಟು ತೆಗೆದಿರಲಿಲ್ಲ. ಔಷಧಿ ಅಂಗಡಿ ಹೊರತು ಪಡಿಸಿದರೇ, ಉಳಿದಂತೆ ಎಲ್ಲಾ ವ್ಯಾಪಾರಿ ಕೇಂದ್ರಗಳು ವಹಿವಾಟು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಜನರ ಓಡಾಟವೂ ಗಣನೀಯವಾಗಿ ಕಡಿಮೆಯಾಗಿತ್ತು.
  ಆದರೂ, ಕೆಲ ಜನರು ವಾಹನಗಳಲ್ಲಿ ಸುತ್ತಾಡುತ್ತಿರುವುದನ್ನು ಪೊಲೀಸರು ಲಾಠಿ ರುಚಿ ಮತ್ತು ಬೆನ್ನು ಬಾಗಿಸುವ ಶಿಕ್ಷೆಗಳ ಮೂಲಕ ಜಾಗೃತಿ ಮೂಡಿಸಲಾಯಿತು. ನಗರದ ಪ್ರಮುಖ ವೃತ್ತಗಳಾದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಶ್ರೀ ಬಸವೇಶ್ವರ ವೃತ್ತ, ತೀನ್ ಖಂದೀಲ್, ನೇತಾಜಿ ನಗರ, ಜಿಲ್ಲಾಧಿಕಾರಿಗಳ ನಿವಾಸದ ಹತ್ತಿರ ಹೀಗೆ ಜನ ಓಡಾಟದ ಸಾಧ್ಯತೆಗಳ ಪ್ರದೇಶಗಳಲ್ಲಿ ಭಾರೀ ನಿರ್ಬಂಧವೇರಲಾಗಿತ್ತು. ಅಂಬೇಡ್ಕರ್ ವೃತ್ತದಲ್ಲಿ ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕಂ ಅವರೇ ಕಾರ್ಯಾಚರಣೆಗಿಳಿಯುವ ಮೂಲಕ ವೀಕೆಂಡ್ ಬಂದ್ ಯಶಸ್ವಿಗೆ ಗಂಭೀರ ಪ್ರಯತ್ನ ನಡೆಸಲಾಯಿತು.
  ನೇತಾಜಿ ವೃತ್ತದಲ್ಲಿ ವಿಜಯ ಮಹಾಂತೇಶ ಮತ್ತು ಪತ್ನಿಯ ಮೇಲೆ ಪೊಲೀಸರ ದುರ್ವರ್ತನೆ ಬಗ್ಗೆ ಈಗ ಐಎಂಎಗೆ ದೂರು ನೀಡಲಾಗಿದೆ. ರಿಮ್ಸ್ ವೈದ್ಯಾಧಿಕಾರಿಗಳಾದ ದಂಪತಿಗಳು ಕರ್ತವ್ಯ ನಿಮಿತ್ಯ ಆಸ್ಪತ್ರೆಗೆ ಹೋಗಿ ಮನೆಗೆ ಬರುವಾಗ ನೇತಾಜಿ ಠಾಣೆ ಪಿಎಸ್‌ಐ ದುರ್ವರ್ತನೆ ಮಾಡಿ, ಹಲ್ಲೆಗೆ ಯತ್ನಿಸಿದರು ಎನ್ನುವ ಆರೋಪವಿದೆ. ಈ ಕುರಿತು ಭಾರತೀಯ ವೈದ್ಯಕೀಯ ಸಂಘಕ್ಕೆ ದೂರು ನೀಡಲಾಗಿದೆ. ಇದು ಕೊರೊನಾ ವಾರಿಯರ್ಸ್‌ಗಳ ಆತ್ಮಸ್ಥೈರ್ಯವನ್ನೇ ಕುಸಿಯುವಂತೆ ಮಾಡಿದೆ.
  ಕೆಲವೆಡೆ ಪೊಲೀಸರು ಲಾಠಿ ಹಿಡಿದು ವಾಹನಗಳಲ್ಲಿ ಸಂಚರಿಸುವವರ ಮೇಲೆ ಪ್ರಹಾರ ಮಾಡುವ ಮೂಲಕ ಭಯ ಭೀತ ಹುಟ್ಟಿಸಿದರು. ಅನಗತ್ಯವಾಗಿ ಜನ ಹೊರಗೆ ಓಡಾಡುವುದನ್ನು ತಡೆಯಲು ಪೊಲೀಸರು ಏನೆಲ್ಲಾ ಕ್ರಮ ಅನುಸರಿಸಿದರೂ, ಅಲ್ಲಲ್ಲಿ ಜನರ ಓಡಾಟ ಮಾತ್ರ ಸಣ್ಣ ಪ್ರಮಾಣದಲ್ಲಿ ಕಂಡು ಬಂದಿತು. ಮಧ್ಯಾಹ್ನದ ವೇಳೆಗೆ ಜನರ ಓಡಾಟ ಸಂಪೂರ್ಣವಾಗಿ ಕಡಿಮೆಯಾಗಿತ್ತು. ಬಹುತೇಕರು ಇಂದು ಮಾಸ್ಕ್ ಧರಿಸುವ ಮೂಲಕ ಓಡಾಡುತ್ತಿರುವುದು ಕಂಡು ಬಂದಿತು. ನಾಳೆಯೂ ಸಹ ಇದೇ ರೀತಿಯಲ್ಲಿ ಸಂಪೂರ್ಣ ಬಂದ್ ಜಾರಿಗೊಳಿಸಿದರಿಂದ ಜನರು ಹೊರಗೆ ಬಾರದಂತೆ ಮನವಿ ಮಾಡಲಾಯಿತು.
  ಹೊರಗೆ ಬರುತ್ತಿರುವ ಜನರನ್ನು ನಿಯಂತ್ರಿಸಲು ಪೊಲೀಸರು ಸಾಮಾ, ದಂಡ ನಿಯಮ ಅನುಸರಿಸಬೇಕಾಯಿತು. ಕೊರೊನಾ ಗಂಭೀರತೆಯನ್ನು ಜನರಿಗೆ ಮಾಹಿತಿ ನೀಡಿದರು. ನಿಯಮ ಉಲ್ಲಂಘಿಸಿ ಓಡಾಡುವವರ ವಾಹನ ಜಪ್ತಿ ಮಾಡಲಾಗಿದೆ. ನೂರಾರು ವಾಹನಗಳು ಪೊಲೀಸ್ ಠಾಣೆಗಳಲ್ಲಿ ಸಂಗ್ರಹಿಸಲಾಗಿದೆ.
  ಮತ್ತೇ ಮತ್ತೇ ಹೊರಗೆ ಬರುತ್ತಿರುವುದರಿಂದ ಪೊಲೀಸರು ಲಾಠಿ ಬೀಸುವುದೊಂದಿಗೆ ಅನಿವಾರ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ವಿವಿಧ ವೃತ್ತಗಳಲ್ಲಿ ಅನೇಕರು ಪೊಲೀಸ್ ಲಾಠಿ ರುಚಿ ಕಾಣಬೇಕಾಯಿತು. ಎರಡು ದಿನಗಳ ಲಾಕ್ ಡೌನ್ ಮತ್ತಷ್ಟು ಮುಂದುವರೆಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಸೋಮವಾರ ಸಂಪುಟ ಸಭೆಯಲ್ಲ ಈ ಬಗ್ಗೆ ಚರ್ಚೆ ನಡೆಯುವ ನಿರ್ಧಾರಗಳಿವೆಂದು ಹೇಳಲಾಗುತ್ತಿದೆ.
  ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಸಾವು, ನೋವು ತೀವ್ರವಾಗಿದ್ದರಿಂದ ದಯವಿಟ್ಟು ಯಾರು ಹೊರಗೆ ಬೇಡವೆಂದು ಮನೆಯಲ್ಲಿಯೇ ಉಳಿಯುವ ಮೂಲಕ ಈ ಮಹಾಮಾರಿಯನ್ನು ತಡೆಯಲು ಜಿಲ್ಲಾಡಳಿತ ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ಸಹಕರಿಸಲು ಅಗತ್ಯವಿದೆ.