ಅನುಮಾನಾಸ್ಪದ ರೀತಿಯಲ್ಲಿ ಮಹಿಳೆ ಮೃತ್ಯು: ತನಿಖೆ ಚುರುಕು  


ಉಡುಪಿ, ನ.೩- ಮಹಿಳೆಯೊಬ್ಬರು ತನ್ನ ಮನೆಯಲ್ಲಿ ಸುಟ್ಟ ಗಾಯಗಳೊಂದಿಗೆ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಬ್ರಹ್ಮಾವರದ ಹಾವಂಜೆಯಲ್ಲಿ ಬುಧವಾರ ಮುಂಜಾನೆ ವೇಳೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಮೃತ ಮಹಿಳೆಯನ್ನು ಹಾವಂಜೆಯ ಜಲಜಾ (೬೯) ಎಂದು ಗುರುತಿಸಲಾಗಿದೆ. ಇವರು ತನ್ನ ಮಗ ವಿಶ್ವನಾಥ ನಾಯಕ್ ಜೊತೆ ವಾಸವಾಗಿದ್ದರು. ಕಳೆದ ಎರಡು ಮೂರು ವರ್ಷಗಳಿಂದ ಅನಾರೋಗ್ಯದಿಂದ ಇದ್ದ ಜಲಜಾ, ಬೆಂಕಿ ಅಕಸ್ಮಿಕದಿಂದ ಸುಟ್ಟ ಗಾಯದಿಂದ ಮೃತಪಟ್ಟರು ಎಂದು ಈ ಬಗ್ಗೆ ಮೃತರ ಮಗ ವಿಶ್ವನಾಥ್ ನಾಯಕ್  ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಮಧ್ಯೆ ತಾಯಿಯ ಸಾವಿನ ಬಗ್ಗೆ ಸಂಶಯಿಸಿ ಮಗಳು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಮಣಿಪಾಲ ಕೆಎಂಸಿ ವಿಧಿವಿಜ್ಞಾನ ವಿಭಾಗ ಹಾಗೂ ಮಂಗಳೂರಿನ ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳನ್ನು ಆಗಮಿಸಿ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಜಲಜಾ ಅವರ ಸಾವು ಅಕಸ್ಮಿಕವೇ, ಕೊಲೆಯೇ ಅಥವಾ ಆತ್ಮಹತ್ಯೆಯೇ ಎಂಬುದು ವಿಧಿವಿಜ್ಞಾನ ಪ್ರಯೋಗಾಲಯ ವರದಿಯಿಂದ ತಿಳಿದುಬರಬೇಕಾಗಿದೆ ಎಂದು ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಅನಂತಪದ್ಮನಾಭ ತಿಳಿಸಿದ್ದಾರೆ.