ಅನುಮತಿ ಇಲ್ಲದೆ ವಿಮಾನ ಟೇಕ್ ಆಫ್ ಆರೋಪ: ಬಿಜೆಪಿ ಸಂಸದರ ವಿರುದ್ದ ಎಫ್ ಐ ಆರ್

ನವದೆಹಲಿ,ಸೆ.3- ದಿಯೋಘರ್ ವಿಮಾನ ನಿಲ್ದಾಣದಲ್ಲಿ ಚಾರ್ಟರ್ಡ್ ವಿಮಾನವನ್ನು ಕಾನೂನುಬಾಹೀರವಾಗಿ ಟೇಕ್-ಆಫ್ ಮಾಡಲು ಯತ್ನಿಸಿದ ಆರೋಪದ ಮೇಲೆ ಬಿಜೆಪಿ ಸಂಸದರಾದ ನಿಶಿಕಾಂತ್ ದುಬೆ, ಮನೋಜ್ ತಿವಾರಿ ಮತ್ತು ಇತರ ಏಳು ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ,

ಜಾರ್ಖಂಡ್‌ನ ದಿಯೋಘರ್ ವಿಮಾನ ನಿಲ್ದಾಣದಲ್ಲಿ
ರಾತ್ರಿ ಟೇಕ್-ಆಫ್‌ ಮಾಡುವಂತೆ ಬಲವಂತಪಡಿಸಿದ ಹಿನ್ನೆಲೆಯಲ್ಲಿ ಈ ದೂರು ದಾಖಲಾಗಿದೆ.

ವಿಮಾನ ನಿಲ್ದಾಣದ ಡಿಎಸ್ಪಿ ಸುಮನ್ ಅನನ್ ಅವರ ದೂರಿನ ಆಧಾರದ ಮೇಲೆ ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಿಶಿಕಾಂತ್ ದುಬೆ, ಮನೋಜ್ ತಿವಾರಿ ಮತ್ತು ವಿಮಾನ ನಿಲ್ದಾಣದ ನಿರ್ದೇಶಕರು ಸೇರಿದಂತೆ ಒಂಬತ್ತು ಜನರ ಮೇಲೆ ಇತರರ ಜೀವ ಅಥವಾ ಸುರಕ್ಷತೆಗೆ ಅಪಾಯ ಮತ್ತು ಕ್ರಿಮಿನಲ್ ಅತಿಕ್ರಮಣದ ಆರೋಪ ಹೊರಿಸಲಾಗಿದೆ.

ಎಫ್ಐಆರ್ ಪ್ರಕಾರ, ಆಗಸ್ಟ್ 31 ರಂದು, ಗೊಡ್ಡಾದ ಲೋಕಸಭಾ ಸಂಸದ ನಿಶಿಕಾಂತ್ ದುಲ್ ಅವರ ಮಗ ಕಾನಿಷ್ಕ್ ಕಾಂತ್ ದುಬೆ, ಮಹಿಕಾಂತ್ ದುಬೆ, ಸಂಸದ ಮನೋಜ್ ತಿವಾರಿ, ಮುಖೇಶ್ ಪಾಠಕ್, ದೇವತಾ ಪಾಂಡೆ ಮತ್ತು ಪಿಂಟು ತಿವಾರಿ ದಿಯೋಘರ್ ವಿಮಾನ ನಿಲ್ದಾಣದಲ್ಲಿ ಅನುಮತಿಯಿಲ್ಲದೆ ತಮ್ಮ ಪ್ರಭಾವ ಬಳಸಿ ತಮ್ಮ ಚಾರ್ಟರ್ಡ್ ವಿಮಾನಕ್ಕೆ ಅನುಮತಿ ನೀಡುವಂತೆ ಅಧಿಕಾರಿಗಳಿಗೆ ಒತ್ತಡ ಹೇರಿದದ್ದೂ ಅಲ್ಲದೆ ಟೇಕಾಫ್ ಆಗಲು ಬಲವಂತ ಪಡಿಸಿದ ಆರೋಪ ಹೊತ್ತಿದ್ದಾರೆ.

ಹೊಸದಾಗಿ ಉದ್ಘಾಟನೆಗೊಂಡ ವಿಮಾನ ನಿಲ್ದಾಣವನ್ನು ರಾತ್ರಿ ಕಾರ್ಯಾಚರಣೆಗೆ ಇನ್ನೂ ಅನುಮತಿ ನೀಡಲಾಗಿಲ್ಲ. ವಿಮಾನ ನಿಲ್ದಾಣದಲ್ಲಿ ವಿಮಾನ ಸೇವೆಗಳನ್ನು ಪ್ರಸ್ತುತ ಸೂರ್ಯಾಸ್ತದ 30 ನಿಮಿಷಗಳ ಮೊದಲು ಅನುಮತಿಸಲಾಗಿದೆ.

ದೂರುದಾರರ ಹೇಳಿಕೆಯಂತೆ ಘಟನೆ ನಡೆದ ದಿನ ಸೂರ್ಯಾಸ್ತದ ಸಮಯ ಸಂಜೆ 6:03 ಆಗಿತ್ತು. ಬಿಜೆಪಿ ನಾಯಕರೊಂದಿಗೆ ಚಾರ್ಟರ್ಡ್ ಫ್ಲೈಟ್ ಸಂಜೆ 6:17ಕ್ಕೆ ಟೇಕಾಫ್ ಆಗಿತ್ತು ಎಂದು ಎಫ್ ಐಆರ್ ನಲ್ಲಿ ತಿಳಿಸಲಾಗಿದೆ.

ಎಫ್‌ಐಆರ್‌ಗೆ ಪ್ರತಿಕ್ರಿಯಿಸಿದ ನಿಶಿಕಾಂತ್ ದುಬೆ, “ವಿಮಾನ ನಿಲ್ದಾಣ ಪ್ರಾಧಿಕಾರ ಆಕ್ಷೇಪಿಸಲಿಲ್ಲ. ನಾವು ವಿಮಾನ ನಿಲ್ದಾಣದ ನಿರ್ದೇಶಕರಿಂದ ಅನುಮತಿ ಪಡೆದಿದ್ದೇವೆ,ಪ್ರಕರಣದ ವಿರುದ್ಧ ಹೋರಾಡಲು ಸಿದ್ಧನಿದ್ದೇನೆ ಎಂದಿದ್ದಾರೆ.

ದಿಯೋಘರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಮಂಜುನಾಥ್ ಭಜಂತ್ರಿ ಬಜೆಪಿ ನಾಯಕರು ಸುರಕ್ಷತಾ ನಿಯಮ ಉಲ್ಲಂಘಿಸುವ ಮೂಲಕ “ರಾಷ್ಟ್ರೀಯ ಭದ್ರತೆಯನ್ನು ಉಲ್ಲಂಘಿಸಿದ್ದಾರೆ” ಎಂದು ಹೇಳಿದ್ದಾರೆ.