ಅನುಮತಿ ಆದೇಶ ಮರು ಪರಿಶೀಲನೆಗೆ ನೀರಲಕೇರಿ ಆಗ್ರಹ

ಧಾರವಾಡ ಮೇ.31-ಜಿಲ್ಲೆಯಾದ್ಯಂತ ಕರೋನಾ ಪಾಸಿಟಿವ್ ಸಂಖ್ಯೆ ಹೆಚ್ಚಾಗಿದ್ದರಿಂದ ಜಿಲ್ಲೆಯಲ್ಲಿ ಕಠಿಣ ಲಾಕ್ ಡೌನ್ ಘೋಷಿಸಲಾಗಿದೆ.ಹೀಗಾಗಿ ಬೆಳಗ್ಗೆ 6ರಿಂದ 8 ಗಂಟೆಯವರೆಗೆ ಮಾತ್ರ ಹಾಲು, ಹಣ್ಣು, ತರಕಾರಿ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು.ಇದೀಗ ಹೋಟೆಲ್ ಒಡೆಯರ ಸಂಘದ ಮನವಿ ಮೇರೆಗೆ ಜಿಲ್ಲೆಯಲ್ಲಿ ಜೂನ್ 1 ರಿಂದ 6 ರವರೆಗೆ ಬೆಳಿಗ್ಗೆ 6 ರಿಂದ 8 ರವರೆಗೆ ಹೋಟೆಲ್ ಅಂಗಡಿಗಳು ಕೇವಲ ಪಾರ್ಸೆಲ್ ನೀಡಲು ಅವಕಾಶ ಕಲ್ಪಿಸಲಾಗಿದೆ.
ಜೂನ್ 1 ರಿಂದ 6 ರವರೆಗೆ ಬೆಳಿಗ್ಗೆ 8 ರಿಂದ ಸಂಜೆ 4 ರವರೆಗೆ ಕೇವಲ ಹೋಂ ಡೆಲೆವರಿ ನೀಡುವ ಅವಕಾಶವಿದೆ.ಅದೇ ರೀತಿ ಜೂನ್ 1 ರಿಂದ 6 ರವರೆಗೆ ಬೆಳಿಗ್ಗೆ 6 ರಿಂದ 8 ರವರೆಗೆ ಮದ್ಯದಂಗಡಿಗಳನ್ನು ತೆಗೆದು ಕೇವಲ ಪಾರ್ಸಲ್ ನೀಡಲು ಅವಕಾಶ ಕಲ್ಪಿಸಿ ಧಾರವಾಡ ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ ಆದೇಶ ಹೊರಡಿಸಿದ್ದಾರೆ.
ಆದರೆ ದುರಾದೃಷ್ಟವಶಾತ್ ಅಗತ್ಯ ಸೇವೆಯಲ್ಲಿ ಬರುವ ಕಿರಾಣಿ ಅಂಗಡಿಗಳ ಮಾರಾಟಕ್ಕೆ ಅವಕಾಶ ನೀಡದಿರುವುದು ವ್ಯಾಪಾರಸ್ಥರ ಹಾಗೂ ವರ್ತಕರ ಅಸಮಾಧಾನಕ್ಕೆ ಕಾರಣವಾಗಿದೆ.ಸಣ್ಣಪುಟ್ಟ ವ್ಯಾಪಾರಸ್ಥರು ಜೀವನ ನಡೆಸುವುದು ಬಹಳ ಕಷ್ಟಕರವಾಗಿದೆ. ಅದರ ಮೇಲೆ ಅವಲಂಬಿತರಾಗಿರುವವರಿಗೆ ಜಿಲ್ಲಾಧಿಕಾರಿ ಆದೇಶ ತೀವ್ರ ನೋವುಂಟು ಮಾಡಿದೆ.ಈ ಹಿಂದೆ ನೀಡಿದ್ದ ಮೂರು ದಿನಗಳ ಅವಕಾಶವನ್ನೇ ಮುಂದೆ ಇಟ್ಟುಕೊಂಡು ಈಗ ಅವರಿಗೆ ನಿರಾಶೆ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ತಮ್ಮ ಆದೇಶವನ್ನು ಪುನರ್ ಪರಿಶೀಲನೆ ನಡೆಸಿ, ಕಿರಾಣಿ ಮಾರಾಟಕ್ಕೆ ಅವಕಾಶ ನೀಡಬೇಕು.ಇದರಲ್ಲಿ ಮಧ್ಯಮ ವರ್ಗ, ಕೂಲಿ ಕಾರ್ಮಿಕರು, ಶ್ರಮಿಕ ವರ್ಗದ ಜನರ ಸಂಕಷ್ಟವನ್ನು ಕೂಡ ಪರಿಗಣಿಸಿ, ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡಲು ಕಿರಾಣಿ ವ್ಯಾಪಾರ ನಡೆಸಲು ಅವಕಾಶ ನೀಡಬೇಕು.ಅಲ್ಲದೆ ಈ ನಿಟ್ಟಿನಲ್ಲಿ ನಮ್ಮ ಜಿಲ್ಲೆಯ ಜನಪ್ರತಿನಿಧಿಗಳು ಕೂಡ ಎಚ್ಚೆತ್ತುಕೊಂಡು ಅವರ ನೋವಿಗೆ ಸ್ಪಂದಿಸಬೇಕಿದೆ ಎಂದು ಪಿ.ಎಚ್ ನೀರಲಕೇರಿ ಆಗ್ರಹಿಸಿದ್ದಾರೆ