ಅನುಭವ ಮಂಟಪ ಪ್ರಜಾಪ್ರಭುತ್ವಕ್ಕೆ ಪ್ರೇರಣೆ

ನವದೆಹಲಿ,ಮೇ.೨೮-ಭಾರತದ ವಿಕಾಸ ಯಾತ್ರೆಗೆ ಸಂಸತ್ ಭವನ ಸಾಕ್ಷಿಯಾಗಿದೆ. ಸರ್ವಧರ್ಮಗಳ ಪ್ರಾರ್ಥನೆಯಿಂದ ಸಂಸತ್ ಭವನ ನಿರ್ಮಾಣವಾಗಿದೆ. ಇದು ಪ್ರಜಾಪ್ರಭುತ್ವದ ಮಂದಿರ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ನೂತನ ಸಂಸತ್ ಭವನದ ಉದ್ಘಾಟಿಸಿ ಮಾತನಾಡಿದ ಅವರು, ರಾಜದಂಡವನ್ನು ಸಂಸತ್‌ನಲ್ಲಿ ಪ್ರತಿಷ್ಠಾಪಿಸಲಾಗಿದೆ. ರಾಜದಂಡ ಪ್ರಜಾಪ್ರಭುತ್ವಕ್ಕೆ ಮಾದರಿಯಾಗಿದೆ ಎಂದರು. ಜಗಜ್ಯೋತಿ ಬಸವೇಶ್ವರರ ಅನುಭವ ಮಂಟಪ ನಮಗೆಲ್ಲಾ ಪ್ರೇರಣೆ ಎಂದು ಪ್ರಧಾನಿ ಮೋದಿಯವರು ಹೇಳಿದರು.
ಸವಣ್ಣನವರ ಅನುಭವ ಮಂಟಪದ ಬಗ್ಗೆ ನಮಗೆಲ್ಲರಿಗೂ ಗೌರವವಿದೆ. ನಮಗೆಲ್ಲರಿಗೂ ಸಂವಿಧಾನ ಪ್ರೇರಣೆ ಎಂದ ಪ್ರಧಾನಿ ಮೋದಿ, ದೇಶದಲ್ಲಿ ಗುಲಾಮಿ ಸಂಸ್ಕೃತಿಯ ಮನಸ್ಥಿತಿ ಹೋಗುತ್ತಿದೆ. ಗುಲಾಮಿ ಮನಸ್ಥಿತಿಯನ್‌ನು ಒಪ್ಪುವಂತದ್ದಲ್ಲ ಭಾರತ ವಿಕಾಸದತ್ತ ಸಾಗುತ್ತಿದೆ ಎಂದರು.
ನೂತನ ಸಂಸತ್ ಭವನ ಪ್ರತಿಯೊಬ್ಬ ಭಾರತೀಯನ ಹೆಮ್ಮೆ, ಸಂಸತ್ ಭವನದಿಂದ ಭಾರತದ ಗೌರವ ಹೆಚ್ಚಲಿದೆ ಸಂಸತ್ ಭವನ ಭಾರತದ ಸಂಸ್ಕೃತಿ, ಕಲೆ, ಕೌಶಲ್ಯವನ್ನು ಸಾರುತ್ತಿದೆ ಎಂದರು. ಇಂದಿನಿಂದ ಹೊಸ ಯಾತ್ರೆ ಆರಂಭವಾಗಲಿದೆ ಜನರ ಕನಸುಗಳನ್ನು ಈಡೇರಿಸುವ ಅಮೃತ ಕಾಲ ಬಂದಿದೆ ಎಂದರು.
ಸಂಸತ್ ಭವನಕ್ಕೆ ವಿವಿಧ ರಾಜ್ಯಗಳ ವಸ್ತು, ಸಾಮಾಗ್ರಿಗಳನ್ನು ಬಳಸಲಾಗಿದೆ. ಮಹಾರಾಷ್ಟ್ರದಿಂದ ಮರವನ್ನು ತರಿಸಲಾಗಿದ್ದರೆ, ರಾಜಸ್ಥಾನದಿಂದ ಗ್ರಾನೆಟ್ ತರಿಸಲಾಗಿದೆ. ಉತ್ತರ ಪ್ರದೇಶದಿಂದ ನೆಲಹಾಸು ತಂದಿದ್ದೇವೆ. ಸಂಸತ್ ಭವನ ನಮ್ಮೆಲ್ಲರ ಗರ್ವ ಎಂದರು.
ಸಂಸತ್ ಭವನ ರಾಷ್ಟ್ರಪಕ್ಷಿ ನವಿಲಿನ ಆಕಾರದಲ್ಲಿದೆ. ಸಂಸತ್ ಭವನ ನಿರ್ಮಾಣಕ್ಕೆ ಕಾರ್ಮಿಕರು ಬೆವರು ಹರಿಸಿದ್ದಾರೆ. ಸಂಸತ್ ಭವನದ ನಿರ್ಮಾಣದ ಬಗ್ಗೆ ನನಗೆ ಹೆಮ್ಮೆಯಿದೆ ಸಂಸತ್ ಭವನದ ಮೂಲಕ ದೇಶ ಹಾಗೂ ಜನರ ವಿಕಾಸ ಎಂದು ಅವರು ಹೇಳಿದರು.
ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಸಂಸತ್ ಭವನವನ್ನು ನಿರ್ಮಿಸಲಾಗಿದೆ. ಸಂಸತ್‌ನಲ್ಲಿ ಡಿಜಿಟಲ್ ಗ್ಯಾಲರಿಯೂ ಇದೆ. ಬೇರೆ ಯಾವುದೇ ದೇಶದ ಸಂಸತ್‌ನಲ್ಲಿ ಇದು ಇಲ್ಲ. ನೂತನ ಸಂಸತ್‌ನಿಂದ ನವ ಭಾರತ ನಿರ್ಮಾಣ ಆಗಲಿದೆ ಎಂದರು.
ಪ್ರಜಾಪ್ರಭುತ್ವ ನಮ್ಮೆಲರಿಗೂ ಸಂಸ್ಕೃತಿ, ಸಂಸ್ಕಾರ, ವಿಚಾರ, ಪರಂಪರೆ ಎಲ್ಲವನ್ನೂ ಕಲಿಸಿದೆ. ಸಂಸತ್ ಭವನದಲ್ಲಿ ಸಂಸ್ಕೃತಿಯೂ ಇದೆ, ಸಂವಿಧಾನದ ಸ್ವರವೂ ಇದೆ ಎಂದರು. ನೂತನ ಸಂಸತ್ ಭವನ ನೋಡಿದ ಮೇಲೆ ನನ್ನ ಸಂತಸ ಹೆಚ್ಚಿದೆ. ನೂತನ ಸಂಸತ್ ಭವನದಿಂದ ನನ್ನ ಮನಸ್ಸು ತುಂಬುವಂತೆ ಮಾಡಿದೆ ಎಂದು ಅವರು ಹೇಳಿದರು.
ಸಂಸತ್ ಭವನ ಮೂರು ದ್ವಾರಗಳನ್ನು ಹೊಂದಿದೆ ಜ್ಞಾನ ದ್ವಾರ, ಶಕ್ತಿ ದ್ವಾರ ಹಾಗೂ ಕರ್ಮ ದ್ವಾರಗಳಿದ್ದು, ಜ್ಞಾನ, ಶಕ್ತಿ, ಕರ್ತವ್ಯದ ಸಂಕೇತ ಈ ಸಂಸತ್ ಭವನ ಎಂದರು.