ಅನುಭವ ಮಂಟಪ ನಿರ್ಮಾಣ: ಸನಾತನ ಪದ ಬಳಕೆ ಹಿಂಪಡೆಯಲು ಚನ್ನಬಸವಾನಂದ್ ಸ್ವಾಮೀಜಿ ಆಗ್ರಹ

ಕಲಬುರಗಿ:ಜ.8:ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ 600 ಕೋಟಿ ರೂ.ಗಳ ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭೂಮಿ ಪೂಜೆ ನೆರವೇರಿಸಿದ್ದು, ಈ ಸಂಬಂಧ ನೀಡಲಾದ ಜಾಹೀರಾತಿನಲ್ಲಿ ಸನಾತನ ಪ್ರಗತಿಪರ ಚಿಂತನೆಗಳ ಮರುಸೃಷ್ಟಿ ಎಂಬ ಉಲ್ಲೇಖವನ್ನು ಮಾಡಲಾಗಿದ್ದು, ಕೂಡಲೇ ಬಸವಾದಿ ಶರಣರ ಆಶಯಗಳಡಿ ಆ ಉಲ್ಲೇಖವನ್ನು ಸಂಪೂರ್ಣವಾಗಿ ಹಿಂಪಡೆಯಬೇಕು ಎಂದು ಬೆಂಗಳೂರು ಕುಂಬಳಗೋಡಿನ ಗಂಗೋತ್ರಿ ಚೆನ್ನಬಸವೇಶ್ವರ್ ಜ್ಞಾನಪೀಠದ ಪೀಠಾಧ್ಯಕ್ಷ ಚನ್ನಬಸವಾನಂದ್ ಸ್ವಾಮೀಜಿ ಒತ್ತಾಯಿಸಿದರು.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಾದಿ ಶರಣರು 12ನೇ ಶತಮಾನದಲ್ಲಿ ವರ್ಣಬೇಧ, ವರ್ಗಬೇಧ, ಲಿಂಗಬೇಧದ ವಿರುದ್ಧ ಹೋರಾಡಿ ಸಮಾನತೆಯ ಸಮಾಜವನ್ನು ನಿರ್ಮಿಸಲು ಅನುಭವ ಮಂಟಪ ಸ್ಥಾಪಿಸಿದರು. ಅಲ್ಲದೇ ಅಸ್ಪøಶ್ಯತೆಯನ್ನು ನಿವಾರಿಸಲು ಸಹ ಪ್ರಯತ್ನಿಸಿದರು. ಅದಕ್ಕೆ ಸನಾತನ ಪದವು ತದ್ವಿರುದ್ಧವಾಗಿದೆ ಎಂದು ಆಕ್ಷೇಪಿಸಿದರು.
ಅನುಭವ ಮಂಟಪವನ್ನು ಬಸವಾದಿ ಶರಣರು ಸನಾತನ ಚಿಂತನೆಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸ್ಥಾಪಿಸಿದರೆ ಹೊರತು ಬೇರೆಯದಕ್ಕಲ್ಲ ಎಂದು ಹೇಳಿದ ಅವರು, ಸನಾತನ ಹಾಗೂ ಪ್ರಗತಿಪರ ಪರಸ್ಪರ ತದ್ವಿರುದ್ಧವಾಗಿದ್ದು, ಎರಡನ್ನೂ ಒಂದು ಕಡೆ ಉಲ್ಲೇಖಿಸುವ ಮೂಲಕ ರಾಜ್ಯ ಸರ್ಕಾರವು ಜನರಿಗೆ ದಾರಿ ತಪ್ಪಿಸುತ್ತಿದೆ. ಆದ್ದರಿಂದ ರಾಜ್ಯ ಸರ್ಕಾವು ಪದ ಬಳಕೆಯ ಕುರಿತು ಕೂಡಲೇ ಸ್ಪಷ್ಟೀಕರಣ ಕೊಡಬೇಕು ಎಂದು ಅವರು ಒತ್ತಾಯಿಸಿದರು.
ಶರಣಮೇಳ: ಕೂಡಲಸಂಗಮದಲ್ಲಿ ಜನವರಿ 12ರಿಂದ ಮೂರು ದಿನಗಳ ಕಾಲ ಶರಣಮೇಳ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಉಪ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವ ಗೋವಿಂದ್ ಕಾರಜೋಳ್ ಅವರು ಉದ್ಘಾಟಿಸುವರು ಎಂದು ಚೆನ್ನಬಸವಾನಂದ್ ಸ್ವಾಮೀಜಿ ಹೇಳಿದರು.
ಜಗದ್ಗುರು ಗಂಗಾದೇವಿ ಅವರ ಸಾನಿಧ್ಯದಲ್ಲಿ ಜರುಗುವ ಶರಣಮೇಳದಲ್ಲಿ ವಿವಿಧ ಮಠಾಧೀಶರು, ಗಣ್ಯರು, ಶರಣ ಬಂಧುಗಳು ಪಾಲ್ಗೊಳ್ಳುವರು. ಸಾಮೂಹಿಕ ಪ್ರಾರ್ಥನೆ, ಸಾಮೂಹಿಕ ಇಷ್ಟಲಿಂಗ ಪೂಜೆ, ಗಣಲಿಂಗ ದರ್ಶನ ಮುಂತಾದ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಚಿಂತನಗೋಷ್ಠಿ, ಗ್ರಂಥ ಬಿಡುಗಡೆ, ಪ್ರಶಸ್ತಿ ಪ್ರದಾನ, ಉಪನ್ಯಾಸ, ಧಾರ್ಮಿಕ ರಸಪ್ರಶ್ನೆ ಮುಂತಾದ ಕಾರ್ಯಕ್ರಮಗಳನ್ನೂ ಸಹ ಆಯೋಜಿಸಲಾಗಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಬಸವದಳದ ಆರ್.ಜಿ. ಶೆಟಗಾರ್, ರೇವಣಪ್ಪ ಹೆಗ್ಗಣೆ, ಜಗನ್ನಾಥ್ ಪಣಸಾಲಿ, ಬಿ.ಎಂ. ಏರಿ, ನಾಗರಾಜ್ ನಿಂಬರ್ಗಿ, ಸಿದ್ರಾಮಪ್ಪ ಲದ್ದೆ, ಸತೀಶ್ ಸಜ್ಜನ್, ರವೀಂದ್ರ ಮುಂತಾದವರು ಉಪಸ್ಥಿತರಿದ್ದರು.