ಅನುಭವ ಮಂಟಪ ನಾಮಕರಣಕ್ಕೆ ವೀರಶೈವ ವೇದಿಕೆ ಆಗ್ರಹ

ಬೆಂಗಳೂರು,ಮಾ.೪:ದೆಹಲಿಯಲ್ಲಿ ನಿರ್ಮಾಣವಾಗಿರುವ ನೂತನ ಸಂಸತ್ ಭವನಕ್ಕೆ ’ಅನುಭವ ಮಂಟಪ’ ಎಂದು ನಾಮಕರಣ ಮಾಡುವಂತೆ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಆಗ್ರಹಿಸಿದೆ.
ಇಡೀ ಜಗತ್ತಿಗೆ ಪ್ರಜಾಪ್ರಭುತ್ವದ ಸಂಸತ್ ವ್ಯವಸ್ಥೆಯನ್ನು ತಮ್ಮ ಅನುಭವ ಮಂಟಪದ ಮೂಲಕ ಪರಿಚಯಿಸಿದ ೧೨ನೇ ಶತಮಾನದ ಸಮಾಜ ಸುಧಾರಕ ವಿಶ್ವಗುರು ಬಸವಣ್ಣ, ಹಾಗಾಗಿ, ಸಂಸತ್‌ಗೆ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪ ಹೆಸರಿಡುವುದು ಸೂಕ್ತ ಎಂದು ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ್ ಕಂಕನವಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಸತ್ ಭವನಕ್ಕೆ ಅನುಭವ ಮಂಟಪ ಎಂದು ಹೆಸರಿಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಸಂಘಟನೆಯ ನಿಯೋಗ ಈಗಾಗಲೇ ದೆಹಲಿಗೆ ತೆರಳಿ ರಾಜ್ಯದ ಕೇಂದ್ರ ಸಚಿವರು, ಸಂಸದರಿಗೂ ಮನವಿ ಸಲ್ಲಿಸಿದೆ. ಹಾಗೆಯೇ, ನಾಡಿನ ಮಠಾಧೀಶರುಗಳಿಗೂ ಈ ಬಗ್ಗೆ ಮನವಿಯನ್ನೂ ನೀಡಿದೆ ಎಂದು ಅವರು ತಿಳಿಸಿದ್ದಾರೆ.
ವಿಶ್ವಗುರು ಬಸವಣ್ಣನವರ ಬಗ್ಗೆ ಪ್ರಧಾನಿ ಮೋದಿ ಅವರು ಹತ್ತಾರು ಬಾರಿ ಪ್ರಸ್ತಾಪಿಸಿದ್ದಾರೆ. ಬಸವಣ್ಣನವರ ಸಮಾನತೆ, ಜಾತ್ಯಾತೀತ ಪರಿಕಲ್ಪನೆ, ಕೆಳ ವರ್ಗದವರ ಬಗ್ಗೆ ಅವರಿಗಿದ್ದ ಕಾಳಜಿ ಎಲ್ಲವೂ ಪ್ರೇರಣೆ ಎಂದು ಹೇಳಿದ್ದಾರೆ. ಅವರ ವಚನಗಳನ್ನೂ ಆಗಾಗ್ಗೆ ಮೋದಿ ಪ್ರಸ್ತಾಪಿಸಿದ್ದಾರೆ. ಹಾಗಾಗಿ, ಬಸವಣ್ಣನವರು ಜಗತ್ತಿಗೆ ಪರಿಚಯಿಸಿದ ಸಂಸತ್ ವ್ಯವಸ್ಥೆ, ಅವರ ಕಾಯಕ, ಸ್ಮರಣೆ ಮತ್ತು ಆದರ್ಶಗಳು ಮುಂದಿನ ಪೀಳಿಗೆಗೆ ಪರಿಚಯವಾಗಲು ನೂತನ ಸಂಸದ್ ಭವನಕ್ಕೆ ಅನುಭವ ಮಂಟಪ ಎಂದು ನಾಮಕರಣ ಮಾಡುವಂತೆ ಅವರು ಮನವಿ ಮಾಡಿದ್ದು, ಈ ಒತ್ತಾಯಕ್ಕೆ ಎಲ್ಲರೂ ಬೆಂಬಲಕ್ಕೆ ನಿಲ್ಲುವಂತೆ ಮನವಿ ಮಾಡಿದ್ದಾರೆ.