
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.26: ಹನ್ನೆರಡನೇ ಶತಮಾನದ ಶಿವಶರಣರು ಕೇವಲ ಧರ್ಮಪ್ರಚಾರಕ ರಾಗಿರಲಿಲ್ಲ.ನೈತಿಕ ನೆಲೆಗಟ್ಟಿನಮೇಲೆ ಸವಾರ್ಂಗೀಣ ಪ್ರಗತಿಪರ ಸುಂದರ ಸಮಾಜದ ನಿರ್ಮಾಣ ಅವರ ಗುರಿಯಾಗಿದ್ದಿತು. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಧಾರ್ಮಿಕ ಮೌಲ್ಯಗಳಿಂದ ಒಡಗೂಡಿದ ಸುಖೀ ಸಮಾಜದ ಸ್ಥಾಪನೆಗಾಗಿ ಹಗಲಿರುಳು ಶ್ರಮಿಸಿದ ರೆಂದು ಶ್ರೀಸತ್ಯಂ ಶಿಕ್ಷಣ ಮಹಾ ವಿದ್ಯಾಲಯದ ಇತಿಹಾಸ ಉಪನ್ಯಾಸಕ ರಾದ ಆಲಂಭಾಷ ರವರು ನುಡಿದರು.
ಎಂ.ವಿ.ನಗರದ ಸತ್ಯಂ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ 280 ನೇ ಮಹಾಮನೆ ಲಿಂಟಟರಾವ್ ಬಹದ್ದೂರ್ ವೈ.ಮಹಾಬಲೇಶ್ವರಪ್ಪ ದತ್ತಿ ಕಾರ್ಯಕ್ರಮದ ಚಿಂತನ ಗೋಷ್ಟಿಯಲ್ಲಿ ಶರಣರ ಶೈಕ್ಷಣಿಕ ನೆಲೆಗಳು ವಿಷಯದ ಸಮಾರೋಪ ನುಡಿಗಳನ್ನಾಡುತ್ತ,ಅನುಭವ ಮಂಟಪವೆಂಬ ಅನೌಪಚಾರಿಕ ಶಿಕ್ಷಣ ಕೇಂದ್ರವೇ ಇವರ ವ್ಯಕ್ತಿ ಹಾಗೂ ಸಮಾಜ ಅಭಿವೃದ್ಧಿಯ ಕಾರ್ಯ ಕ್ಷೇತ್ರ ವಾಗಿದ್ದಿತೆಂದರು.
ಚಿಂತನ ಗೋಷ್ಟಿಯಲ್ಲಿ ಶರಣರು-ವಯಸ್ಕರ ಶಿಕ್ಷಣ ವಿಷಯ ಕುರಿತು ಮಾತನಾಡಿದ ಪ್ರಶಿಕ್ಷಣಾರ್ಥಿ ಸುನಿಲ್ ಕುಮಾರ್ , ಜನರಲ್ಲಿ ಅರಿವನ್ನು ಮೂಡಿಸಲು ಶರಣರು ಅನೌಪಚಾರಿಕ ಶಿಕ್ಷಣದ ಮೂಲಕ ವಯಸ್ಕರಿಗೆ ಶಿಕ್ಷಣ ನೀಡಿದರೆಂದರು.
ಶರಣರು-ಸ್ತ್ರೀ ಸಬಲೀಕರಣ ವಿಷಯ ಕುರಿತು ಮಾತನಾಡಿದ ಎಸ್.ಎ ವೀರಮ್ಮ ಶರಣರು ಸ್ತ್ರೀಯರನ್ನು ಕೇವಲ ಸ್ತ್ರೀಯನ್ನಾಗಿ ಕಾಣದೇ ತಮ್ಮ ಸಹಚರರು,ತಮ್ಮಸಮಾನರೆಂದು ಕಂಡರು. ಇದರಿಂದ ಅನುಭವ ಮಂಟಪದಲ್ಲಿ ಸ್ತ್ರೀಯರಿಗೆ ತಮ್ಮ ಸಂವೇದನೆಗಳನ್ನು ಹಂಚಿಕೊಳ್ಳಲು ಸಾಧ್ಯವಾಯಿತು ಎಂದರು.
ಶರಣರು-ಮೌಲ್ಯಶಿಕ್ಷಣ ಕುರಿತು ಮಾತನಾಡಿದ ಪ್ರಸಾದ್ ಪಿ,ಮಾಲಗತ್ತಿ ಮಠರು ಶರಣರು ಜನರಲ್ಲಿ ಯಾವ ನಡವಳಿಕೆಗಳು ತನಗೂ ಮತ್ತು ಸಮಾಜಕ್ಕೂ ಒಳಿತನ್ನು ಉಂಟು ಮಾಡುವವೂ ಅಂತಹ ಸಾರ್ವಕಾಲಿಕ ದಾಖಲೆಯಾಗಿ ಉಳಿಯುವ ಮೌಲ್ಯ ಗಳನ್ನು ಬಿತ್ತಿ ಬೆಳೆಸುವುದರ ಮೂಲಕ ಸುಖೀ ಸಮಾಜಕ್ಕೆ ಕಾರಣ ಕರ್ತರಾದರೆಂದರು.
ಉಪನ್ಯಾಸಕರಾದ ಎಂ,ನಾಗೇಶಬಾಬು ಸಸಿಗೆ ನೀರೆರೆಯುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಅರಿವು, ಅನ್ನ, ಆಶ್ರಯಗಳನ್ನು ಮಾನವ ಹೊಂದಲು ಕಾಯಕವೆಂಬ ಊರುಗೋಲನ್ನು ಶರಣರು ಸಮಾಜಕ್ಕೆ ನೀಡಿದರೆಂದು ಮಾತನಾಡಿದರು.
ಶಿಕ್ಷಣ ಮಹಾ ವಿದ್ಯಾಲಯದ ಪ್ರಾಂಶುಪಾಲರಾದ ಡಾ.ಅಶ್ವರಾಮು ಅಧ್ಯಕ್ಷತೆಯನ್ನು ವಹಿಸಿದ್ದರು.ಹಿರಿಯ ಉಪನ್ಯಾಸಕರಾದ ಎಂ,ವಿ,ಜಯದೇವಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಶಿಕ್ಷಣಾರ್ಥಿ ಸಂಗೀತ ಸುಕನ್ಯಾ ವಚನ ಪ್ರಾರ್ಥನೆ ಮಾಡಿದರು. ಹರಿಶ್ರೀ ಸ್ವಾಗತ ಕೋರಿದರು. ಪರಿಷತ್ ಅಧ್ಯಕ್ಷ ಕೆ.ಬಿ.ಸಿದ್ಧಲಿಂಗಪ್ಪ ಪ್ರಾಸ್ತಾವಿಕ ನುಡಿಗಳೊಂದಿಗೆ ದತ್ತಿ ಧಾತೃಗಳನ್ನು ಪರಿಚಯಿಸಿದರು. ಫೈರೋಜ್ ಮತ್ತು ಸಂತೋಷ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಎಸ್.ಪಿ.ಹೊಂಬಳ, ಪುರುಷೋತ್ತಮ, ಕೆ,ಬಿ,ಕೊಟ್ರೇಶ್, ಮೋದಕ, ಬೋಧಕೇತರ ಸಿಬ್ಬಂದಿ ಹಾಗು ಎಂಇಡಿ ಪ್ರಶಿಕ್ಷಣಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.