ಅನುಭವದಿಂದ ದಕ್ಕಿದ ಜ್ಞಾನ ಅತ್ಯಂತ ಶ್ರೇಷ್ಠ: ಜೆಸಿಎಂ

ಹುಳಿಯಾರು, ಆ. ೧- ಜ್ಞಾನ ಶ್ರೇಷ್ಠ. ಜ್ಞಾನಕ್ಕೆ ಸಮಾನವಾದುದು ಯಾವುದೂ ಇಲ್ಲ. ಆದರೆ, ಅನುಭವದಿಂದ ದಕ್ಕಿದ ಜ್ಞಾನ ಅತ್ಯಂತ ಶ್ರೇಷ್ಠ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳು ಬದುಕು ಕಟ್ಟಿಕೊಳ್ಳುವುದನ್ನು ಕಲಿತುಕೊಳ್ಳುತ್ತಾರೆ ಎಂದು ಸಚಿವರಾದ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಹುಳಿಯಾರಿನ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಘಟಕ-೧ ಮತ್ತು ಘಟಕ-೨ ರ ವತಿಯಿಂದ ೨೦೨೧-೨೨ನೆಯ ಸಾಲಿನ “ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರ”ವನ್ನು ಗುರುವಾಪುರ ಗ್ರಾಮದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ವೈಯುಕ್ತಿಕ ನೆಲೆಯಲ್ಲಿಯೂ, ಸಾಮಾಜಿಕ ನೆಲೆಯಲ್ಲಿಯೂ ಗ್ರಾಮಗಳು ಅಭಿವೃದ್ಧಿ ಹೊಂದಬೇಕಾಗಿದೆ. ಈ ನಿಟ್ಟಿನಲ್ಲಿ ಜಾತಿ-ಧರ್ಮದ ಸಂಕೋಲೆಯನ್ನು ತೊಡೆದು ಹಾಕಬೇಕು ಹಾಗೂ ಗಾಂಧೀಜಿಯವರ ಕನಸಿನಂತೆ ಗ್ರಾಮ ಸ್ವರಾಜ್ಯವಾಗಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಹಲವಾರು ರೋಗ ರುಜಿನಗಳನ್ನು ಕೇವಲ ಸ್ವಚ್ಚತೆಯಿಂದಲೇ ದೂರವಿಡಬಹುದು. ಸ್ವಚ್ಚ, ಸದೃಢ ಗ್ರಾಮಗಳ ನಿರ್ಮಾಣ ನಮ್ಮ ಗುರಿಯಾಗಿರಬೇಕು ಎಂದು ಅವರು ಹೇಳಿದರು.
ಗ್ರಾಮಗಳು ಸಶಕ್ತವಾಗಲು ಯುವ ಶಕ್ತಿಯ ಒಳಗೊಳ್ಳುವಿಕೆ ಅಗತ್ಯವಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಗ್ರಾಮಗಳ ಬಗ್ಗೆ ಅನುಭವ ಅಗತ್ಯ. ಶ್ರಮದಾನದ ಸಮಯದಲ್ಲಿ ವಿದ್ಯಾರ್ಥಿಗಳು ಶಿಸ್ತು ಕಾಪಾಡಿಕೊಳ್ಳಬೇಕು ಎಂದ ಅವರು, ವಿದ್ಯಾರ್ಥಿಗಳಿಗೆ ಗ್ರಾಮಸ್ಥರು ಸಹಕಾರ ಮತ್ತು ಸುರಕ್ಷತೆ ನೀಡಿ ಕೃಷಿ ಹಾಗೂ ಇನ್ನಿತರ ಗ್ರಾಮೀಣ ಚಟುವಟಿಕೆಗಳ ಕುರಿತು ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು.
ಬಿ.ಎಂ.ಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವೀರಣ್ಣ ಎಸ್.ಸಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸೇವಾ ಯೋಜನೆ ಘಟಕ-೧ ರ ಶಿಬಿರಾಧಿಕಾರಿ ಡಾ. ಮೋಹನ್ ಕುಮಾರ್ ಮಿರ್ಲೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಬಿ.ಎಂ.ಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಜೀವ ಸದಸ್ಯರಾದ ಕೆ.ಬಿ.ಮರುಳಸಿದ್ದಪ್ಪ, ಗಾಣಧಾಳು ಗ್ರಾ.ಪಂ. ಅಧ್ಯಕ್ಷೆ ಭಾಗ್ಯಮ್ಮ ನಟರಾಜು, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಿ.ಕೆ. ಶಿವಕುಮಾರ್, ಪಂಚಾಯತ್ ಸದಸ್ಯ ಶ್ರೀನಿವಾಸ ಜಿ.ಎಸ್, ತಾಲ್ಲೂಕು ಕಾರ್ಯ ನಿರ್ವಹಣಾಧಿಕಾರಿ ವಸಂತ ಕುಮಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜ್ಞಾನ ಮೂರ್ತಿ, ಬಿ.ಎಂ.ಎಸ್. ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕೆ.ಎಂ. ನವೀನ್ ಮತ್ತಿತರರು ಉಪಸ್ಥಿತರಿದ್ದರು.
ರಂಜಿತಾ.ಕೆ ಮತ್ತು ತಂಡದವರು ಪ್ರಾರ್ಥಿಸಿದರು. ಪ್ರಾಧ್ಯಾಪಕರಾದ ಸೋಮಶೇಖರಪ್ಪ.ಎಂ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರೀಯ ಸೇವಾ ಯೋಜನೆ ಘಟಕ-೨ ರ ಸಂಯೋಜನಾಧಿಕಾರಿ ಡಾ. ಜಯಶ್ರೀ ಬಿ. ವಂದಿಸಿದರು.