
ಬೆಂಗಳೂರು, ಆ. ೧೮- ದೇವಾಲಯಗಳ ಜೀರ್ಣೋದ್ಧಾರಕ್ಕೆ ಅನುದಾನ ತಡೆ ಹಿಡಿಯುವ ಆದೇಶವನ್ನು ವಾಪಸ್ ಪಡೆಯಬೇಕೆಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಸೂಚನೆ ನೀಡಿದ್ದಾರೆ. ಧಾರ್ಮಿಕ ದತ್ತಿ ಇಲಾಖೆ ಆದೇಶ ಹೊರಡಿಸಿದ ಬೆನ್ನಲ್ಲೇ ಸಚಿವರಿಂದ ಈ ಆದೇಶ ಹೊರಬಿದ್ದಿದೆ.
೨೦೨೨-೨೩ನೇ ಸಾಲಿನಲ್ಲಿ ದೇವಾಲಯಗಳ ಜೀರ್ಣೋದ್ಧಾರಕ್ಕೆ ಬಿಡುಗಡೆ ಮಾಡಿರುವ ಅನುದಾನದಲ್ಲಿ ಕಾಮಗಾರಿ ಪ್ರಾರಂಭವಾಗದಿದ್ದರೆ, ಹಣ ಬಿಡುಗಡೆ ಮಾಡಬಾರದು. ಶೇ. ೫೦ ರಷ್ಟು ಹಣ ಬಿಡುಗಡೆಗೆ ಆಡಳಿತಾತ್ಮಕ ಅನುಮೋದನೆಗೆ ತಕ್ಷಣ ಅನುದಾನ ತಡೆ ಹಿಡಿಯಬೇಕು.
ಅನುದಾನದ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಿದ್ದರೆ ಆಡಳಿತಾತ್ಮಕ ಮಂಜೂರಾತಿಯನ್ನು ತಡೆಹಿಡಿಯಬೇಕು ಎಂಬ ೩ ವಿಷಯಗಳನ್ನು ಪ್ರಸ್ತಾಪಿಸಿ ದೇವಾಲಯಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ತಡೆ ಹಿಡಿಯಬೇಕು ಎಂದು ಧಾರ್ಮಿಕ ದತ್ತಿ ಇಲಾಖೆ ಆದೇಶ ಹೊರಡಿಸಿತ್ತು. ಈಗ ಸಚಿವ ರಾಮಲಿಂಗಾರೆಡ್ಡಿಯವರು ಈ ಆದೇಶ ಹಿಂಪಡೆಯುವಂತೆ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ ಸೂಚಿಸಿದ್ದಾರೆ.
ಕೆಲವೊಂದು ಗೊಂದಲದಿಂದಾಗಿ ಆಯುಕ್ತರು ಹಣ ತಡೆಹಿಡಿಯುವ ಆದೇಶ ಹೊರಡಿಸಿದ್ದರು ಎಂದು ಹೇಳಲಾಗಿತ್ತು. ಸಚಿವರ ಸೂಚನೆಯ ಮೇರೆಗೆ ಈ ಆದೇಶವನ್ನು ಹಿಂತೆಗೆದುಕೊಂಡಿದ್ದಾರೆ.