ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರಿಗೆ ಪಿಂಚಣಿ ಸೌಲಭ್ಯ: ಪ್ರಧಾನ ಮಂತ್ರಿಗಳಿಗೆ ಈ-ಮೇಲ್ ಮೂಲಕ ಮನವಿ

ವಿಜಯಪುರ, ಡಿ.30-ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರಿಗೆ ಪಿಂಚಣಿ ಸೌಲಭ್ಯ ನೀಡಬೇಕೆಂದು ಆಗ್ರಹಿಸಿ ಇದೇ ಸರ್ಕಾರದ ಅವದಿಯಲ್ಲಿ ಪತ್ರ ಚಳುವಳಿ, ಬೆಂಗಳೂರಿನ ಟೌನ್ ಹಾಲ್‍ನಲ್ಲಿ ಒಂದು ದಿನದ ಸಾಂಕೇತಿಕ ಧರಣಿ, ಸ್ಟ್ರೈಕ್ ಫ್ರಂ ಹೋಂ, ಮುಖ್ಯಮಂತ್ರಿಗಳಿಗೆ ಮತ್ತು ಪ್ರಧಾನ ಮಂತ್ರಿಗಳಿಗೆ ಈ-ಮೇಲ್ ಅಭಿಯಾನ, ನಿವೃತ್ತ ನೌಕರರಿಂದ ದಯಾಮರಣ ಕೋರಿ ಅರ್ಜಿ ಹಾಗೂ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ನೀಡುವ ಮೂಲಕ ಸರಕಾರದ ಗಮನ ಸೆಳೆಯಲಾಗಿದೆ ಎಂದು ರಾಜ್ಯಾಧ್ಯಕ್ಷರಾದ ಜಿ. ಹನುಮಂತಪ್ಪ ಹೇಳಿದರು.
ನಗರದ ಜಗಜ್ಯೋತಿ ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತರ ನೌಕರರ ಸಂಘ (ರಿ.) ವಿಜಯಪುರದಲ್ಲಿ ದಿ-04-01-2021 ರಂದು ನಡೆಯುವ ಅನುದಾನಿತ ನೌಕರರಿಗೆ ಪಿಂಚಣಿ ನೀಡುವಂತೆ ಆಗ್ರಹಿಸಿ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಫ್ರೀಡಂ ಪಾರ್ಕ್ ನಲ್ಲಿ ಹಮ್ಮಿಕೊಳ್ಳುವ ಪೂರ್ವ ಭಾವಿ ಸಭೆಯಲ್ಲಿ ಉದ್ಘಾಟಿಸಿ ಅವರು ಮಾತನಾಡಿ ಆದಾಗ್ಯೂ ನಮ್ಮ ಬೇಡಿಕೆ ಈಡೇರಿಲ್ಲ. ಇದರಿಂದ ಮನನೊಂದು ಇದೇ ದಿ.04-01-2021ರಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅಂತಿಮ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ತೀರ್ಮಾನ ಕೈಗೊಳ್ಳಲಾಗಿದೆ. ಅದರಂತೆ ಅಂದಿನಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಮಗೆ ಪಿಂಚಣಿ ಆದೇಶ ನೀಡುವವರೆಗೆ ಆಹೋರಾತ್ರಿ ಅಮರಣಾಂತ ಸತ್ಯಾಗ್ರಹ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ಹೋರಾಟವು ನಮ್ಮ ಅಂತಿಮ ಹೋರಾಟವಾಗಿದ್ದು ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸಾವಿರಾರು ನೌಕರರು ಈ ಹೋರಾಟದಲ್ಲಿ ಪಾಲ್ಗೊಳ್ಳುತ್ತಾರೆ.
ಈಗಾಗಲೇ ಬರಿಗೈಯಲ್ಲಿ ನಿವೃತ್ತರಾಗಿ ಕಡುಕಷ್ಠ ಅನುಭವಿಸುತ್ತಿರುವ ನಿವೃತ್ತ ಪಿಂಚಣಿ ವಂಚಿತ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೇಳಿಕೊಳ್ಳುತ್ತೇನೆ.
ಅನುದಾನ ರಹಿತ ಅವದಿಯನ್ನು ಪಿಂಚಣಿ ಮತ್ತಿತರ ಸೌಲಭ್ಯಗಳಿಗೆ ಪರಿಗಣಿಸುವಂತೆ ರಾಜ್ಯದ ಉಚ್ಚ ನ್ಯಾಯಾಲಯ ಮತ್ತು ದೇಶದ ಸರ್ವೋಚ್ಚ ನ್ಯಾಯಾಲಯಗಳು ಆದೇಶ ಮಾಡಿವೆ. ಮತ್ತು 2006ಕ್ಕೂ ಮೊದಲು ಸೇವೆ ಪರಿಗಣಿಸಲಾಗಿದೆ. ಆದರೂ ಸರಕಾರ ಬೇಡಿಕೆ ಈಡೇರಿಸುತ್ತಿಲ್ಲ. ಮತ್ತು ದೇಶಾದ್ಯಂತ ಇರುವ ನೂತನ ಪಿಂಚಣಿ ಯೋಜನೆಯನ್ನು ಕರ್ನಾಟಕ ಹೊರತು ಪಡಿಸಿ ಇತರೆ ರಾಜ್ಯಗಳಲ್ಲಿ ಅನುದಾನಿತ ಶಾಲಾ ಕಾಲೇಜುಗಳ ನೌಕರರಿಗೆ ಅಲ್ಲಿನ ಸರಕಾರಗಳೇ ಪಿಂಚಣಿ ನೀಡುತ್ತಿವೆ. ಆದರೆ ನಮ್ಮ ರಾಜ್ಯದಲ್ಲಿ ಮಾತ್ರ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ಹೇಳಿದರು.
ಪಿಂಚಣಿ ಅನುದಾನಿತ ನೌಕರರ ಹಕ್ಕಾಗಿರುವುದರಿಂದ ಈ ಬಾರಿ ಅತ್ಯುಘ್ರ ಹೋರಾಟ ಮಾಡುತ್ತಿದ್ದೇವೆ. ದಿ.01-04-2006ಕ್ಕೂ ಮೊದಲು ನೇಮಕವಾಗಿ ನಂತರ ಅನುದಾನಕ್ಕೊಳಪಟ್ಟ ನೌಕರರಿಗೆ ವೇತನ ಅನುದಾನಕ್ಕೂ ಪೂರ್ವದ ಸೇವೆಯನ್ನು ಕೇವಲ ಪಿಂಚಣಿ ಸೌಲಭ್ಯಕ್ಕೆ ಮಾತ್ರ ಪರಿಗಣಿಸಿ ಹಳೆಯ ನಿಶ್ಚಿತ ಪಿಂಚಣಿ ಯೋಜನೆ ನೀಡಬೇಕು. ದಿನಾಂಕ:01-04-2006ರ ನಂತರ ನೇಮಕವಾಗಿ ವೇತನಾನುದಾನ ಪಡೆಯುತ್ತಿರುವ ನೌಕರರಿಗೆ ಸರಕಾರಿ ನೌಕರರಿಗಿರುವಂತೆ ವಂತಿಗೆ ಆಧಾರಿತ ನೂತನ ಪಿಂಚಣಿ ಯೋಜನೆಯನ್ನು ಯಥಾವತ್ತಾಗಿ ಅಂದರೆ ನೇಮಕಾತಿ ಪ್ರಾಧಿಕಾರದ ವಂತಿಗೆಯನ್ನು ಸರಕಾರವೇ ನೀಡಬೇಕು ಎಂದರು.
ಸಭೆಯ ಅಧ್ಯಕ್ಷತೆಯನ್ನು ಗಿರೀಶ್ ಬಿರಾದಾರ ವಹಿಸಿದರು. ಮುಖ್ಯ ಅತಿಥಿಗಳಾಗಿ ಎಸ್.ಜಿ.ಹಂಚಿನಾಳ ಪ್ರೌಢ ಶಾಲಾ ನೌಕರರ ಸಂಘದ ಅಧ್ಯಕ್ಷರು ಅತಿಥಿಗಳಾಗಿ ಶಿವಾನಂದ ಹಿರೇಕುರುಬರ ಉಪಸ್ಥಿತಿರಿದ್ದರು.
ಕಾರ್ಯಕ್ರಮ ದಲ್ಲಿ ವಿ.ಜಿ.ವಪ್ಪಾರಿ, ವಿ.ಎಸ್.ಸಜ್ಜನವರ, ಎಸ್. ಬಿ.ಬಿರಾದಾರ, ಸಿ.ಎಸ್.ಬಿರಾದಾರ, ಕೆ.ಎಸ್.ಬಸರಕೋಡ, ಎಸ್.ಎಸ್.ಪಾಟೀಲ್, ಶ್ರೀಮತಿ ಆರ್.ಎನ್. ಹೆಬ್ಬಳ್ಳಿ, ಶ್ರೀಮತಿ ಎಸ್.ಎಲ್.ಮಹಾಜನಕಟ್ಟಿ, ಸುರೇಶ. ಇಟಗಿ, ಎ.ಬಿ.ಬಿರಾದಾರ, ಎನ್.ಎಸ್.ಬಿರಾದಾರ, ಪಿ.ಆರ್.ಹಿರೇಮಠ, ಎಮ್.ಎಸ್.ಹಿಟ್ಟಿನಹಳ್ಳಿ, ಎಮ್.ಎ.ಅಂದೆವಗೊಳ, ಎನ್.ಡಿ.ಬೇನಾಳ, ಬಿ.ಎಸ್. ಮೇತ್ರಿ, ಎಮ್.ಜಿ.ಮಾಲಗಾರ, ಆರ್.ಎಸ್.ಪಾಟೀಲ್, ಜಿ.ಎಸ್.ಬಜಂತ್ರಿ, ಎಲ್.ಎಸ್.ಜಾಲವಾದಿ, ಎಸ್.ಸಿ.ಗುರುವಾಡ, ಎಮ್.ಎಸ್.ಸೊನ್ನ, ಎಸ್.ಬಿನಾಗರಾಳ ಮುಂತಾದವರು ಇದ್ದರು. ಲಕ್ಮೀಪುತ್ರ ಎಸ್.ಕಿರನಳ್ಳಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿರೂಪಿಸಿದರು. ಬಸಯ್ಯ ಎಸ್.ಹಿರೇಮಠ ಜಿಲ್ಲಾಧ್ಯಕ್ಷರು ಪ್ರಾಸ್ತಾವಿಕ ಮಾತನಾಡಿ ಕೊನೆಯಲ್ಲಿ ವಂದಿಸಿದರು.